ಸರಕಾರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ಬೆಂಬಲದ ಶಂಕೆ
ಕಠಿಣ ಕ್ರಮ ಜರುಗಿಸದಿದ್ದಲ್ಲಿ, ದೊಡ್ಡ ಪ್ರಮಾಣದ ಹೋರಾಟ: ಶಾಸಕ ವಿ.ಸುನಿಲ್ ಕುಮಾರ್

ಕಾರ್ಕಳದ ಶಿರ್ಲಾಲಿನಲ್ಲಿ ಬಡ ಹೈನುಗಾರ್ತಿ ಮಹಿಳೆಗೆ ಮಾರಕ ಅಸ್ತ್ರ ತೋರಿಸಿ ದನ ಕಳ್ಳತನ, ನಲ್ಲೂರಿನಲ್ಲಿ ಅಕ್ರಮ ಕಸಾಯಿಖಾನೆ ಬಯಲಾಗಿರುವುದು, ತೆಳ್ಳಾರಿನಲ್ಲಿ ಕಾಡುಪ್ರಾಣಿ ಮಾಂಸ ಪತ್ತೆ ಇದೆಲ್ಲವೂ ರಾಜ್ಯದ ಕಾನೂನು-ಸುವ್ಯವಸ್ಥೆಯ ಕರಾಳ ಮುಖದ ನಿಜ ಸ್ವರೂಪ ಬಿಚ್ಚಿಟ್ಟಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಈ ಎಲ್ಲ ಘಟನೆಗಳನ್ನು ತೀವೃವಾಗಿ ಖಂಡಿಸಿರುವ ಅವರು ಈ ಮೂರು ಪ್ರಕರಣ ಸಹಿತ ಇಂತಹ ಹಲವು ಪ್ರಕರಣಗಳ ಆರೋಪಿಗಳೆಲ್ಲರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಕಾಂಗ್ರೆಸ್ ಈ ಅಕ್ರಮ ಗೋಹತ್ಯೆ ದಂಧೆಯ ಹಣವನ್ನು ಚುನಾವಣೆಗೆ ಬಳಸುತ್ತಿದೆ. ಈ ಆರೋಪಿಗಳಿಂದ ಕಾಂಗ್ರೆಸ್ ಚುನಾವಣಾ ಖಾತೆಗೆ ಭರಪೂರ ಹಣ ಹರಿಯುತ್ತಿದೆ ಎನ್ನುವ ಅನುಮಾನವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ, ರಕ್ಷಣೆ ನಿಲ್ಲುತ್ತದೆ ಎನ್ನುವ ಕಾರಣಕ್ಕೆ ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಮನೆಮನೆಗಳಲ್ಲಿ ಗೋ ಕಳ್ಳತನ, ಗೋವಧೆ ಹಾಗೂ ಪ್ರಾಣಿ ವಧೆ ಮುಲಾಜಿಲ್ಲದೆ ನಡೆಯುತ್ತಿದೆ. ಹಟ್ಟಿಯಲ್ಲಿರುವ ಗೋವುಗಳಷ್ಟೆ ಅಲ್ಲದೆ ಇವರುಗಳ ವಕ್ರ ದೃಷ್ಟಿ ಅಮಾಯಕ ಕಾಡುಪ್ರಾಣಿಗಳ ಕಡೆಗೂ ಹರಿದಿದೆ. ಕಾಂಗ್ರೆಸ್ ಸರಕಾರವೇ ಇವರನ್ನು ಪೋಷಿಸುತ್ತಿದೆಯೇ?
ಕಾಂಗ್ರೆಸ್ ಹಾಗೂ ಸ್ಥಳಿಯ ಕಾಂಗ್ರೆಸ್ ನಾಯಕರ ಬೆಂಬಲ ಇಲ್ಲದೆ ಇಂತಹ ದಂಧೆ ಸಾಧ್ಯವೇ?” ಎಂದು ಪ್ರಶ್ನಿಸಿರುವ ಅವರು, “ಸರಕಾರ ಮತ್ತು ಜಿಲ್ಲಾಡಳಿತ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡವರ ಮಟ್ಟ ಹಾಕಬೇಕು, ಅಪರಾಧಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬಿಜೆಪಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಮುಂದಾಗಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.




















































