ಭಾಗ 342
ಭರತೇಶ್ ಶೆಟ್ಟಿ, ಎಕ್ಕಾರ್

ಹೊಂಬಣ್ಣದ ರೇಷ್ಮೆಯ ವಸ್ತ್ರ ಧರಿಸಿ, ಇಂದ್ರಮಣಿಯಂತಹ ಶ್ಯಾಮಲವರ್ಣ ಜನಾರ್ಧನನು ಭೀಷ್ಮನ ಸಂಹಾರಕ್ಕೆಂದು ಧಾವಿಸಿ ಹೋಗುತ್ತಿದ್ದಾಗ, ಮದಗಜವನ್ನು ಅಟ್ಟಿಸಿಕೊಂಡು ಹೋಗಲು ಹೊರಟ ಕೇಸರಿಯಂತೆ ಕಂಡನು ಕೃಷ್ಣ ಪರಮಾತ್ಮ. ಯಾದವ ಶ್ರೇಷ್ಟ ತನ್ನೆದುರು ಕ್ರುದ್ಧನಾಗಿ ಬರುತ್ತಿದ್ದರೂ, ಭಯಭೀತನಾಗದ ಭೀಷ್ಮ ಅವ್ಯಗ್ರನೂ, ಅಸಂಭ್ರಾಂತನೂ ಆಗಿ ಶಾಂತ ಚಿತ್ತದಿಂದ ಮಾಧವನನ್ನು ನೋಡಿ ಸಂತಸಗೊಂಡವರಂತೆ ಪ್ರಸನ್ನವದನರಾಗಿದ್ದರು. “ಕೃಷ್ಣ ಪರಮಾತ್ಮಾ! ಬಾ, ದೇವರ ದೇವನೇ… ಪುಂಡರೀಕಾಕ್ಷ, ಭಕ್ತವತ್ಸಲ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ, ನಾರಾಯಣಾ ಬಾ ದೇವಾ.. ಶೀಘ್ರವಾಗಿ ಬಂದು ನನ್ನನ್ನು ಸಂಹರಿಸಿ ಬಿಡು. ಭೀಷ್ಮನಾದ ನನಗೆ ಇಚ್ಚಾಮರಣದ ವರಬಲವಿದೆ. ನೀನೇ ಸಂಹರಿಸುವೆಯಾದರೆ ನಿನ್ನ ಭಕ್ತನಾಗಿ ಈ ಕ್ಷಣವೇ ಮರಣವನ್ನು ನಿನ್ನ ಕರಕಮಲದಿಂದ ಇಚ್ಚಿಸುವೆ, ವರವನ್ನೂ ನಿಜಗೊಳಿಸಿ, ನಿನ್ನಿಂದ ಪರಮ ಪುಣ್ಯಕರ ವರ ಪಡೆದೆನೆಂದು ಮರಣ ಸ್ವೀಕರಿಸುವೆ. ಅಚ್ಯುತನಾದ, ಸರ್ವಶಕ್ತನಾದ ನಿನಗೆ ಚ್ಯುತಿ ಬಾರದಂತೆ ನಿನ್ನ ಭಕ್ತನಾಗಿ ನಾನೂ ಸಹಕರಿಸುವೆ. ನಿನ್ನಿಂದ ನನಗೊದಗುವ ಈ ಗತಿಗಿಂತ ಶ್ರೇಷ್ಟವಾದದ್ದು ಸಿಗಲು ಸಾಧ್ಯವೇ ಇಲ್ಲ. ಹಾಗೊಮ್ಮೆ ಒದಗಿದರೆ ನಾನೇ ಭಾಗ್ಯಶಾಲಿ” ಎಂದನು.
ಭೀಷ್ಮಾಚಾರ್ಯರ ಭಕ್ತಿಯ ಸ್ತುತಿ ಕೇಳಿಯೂ, ವಾಸ್ತವ ವರ್ತಮಾನ ಕಾಲದಲ್ಲಿ ತನಗೂ ಅಜ್ಜನೇ ಆಗುವ ಭೀಷ್ಮನನ್ನು, ಭೀಷ್ಮನ ಅಜ್ಜನಾದ ನಾರಾಯಣ (ಸುರ ತರಂಗಿಣಿ ಗಂಗೆಯ ಪಿತ) ವಧಿಸಲು ಮುನ್ನಡೆದು ಬಿಟ್ಟನು.
ಅಷ್ಟಾಗುವಾಗ ಅರ್ಜುನ ಓಡಿಬಂದು ತನ್ನ ಬಾಹುಗಳೆರಡರಿಂದಲೂ ಶ್ರೀ ಕೃಷ್ಣನ ಚರಣಗಳನ್ನು ತನ್ನಿಂದಾಗುವಾಗುವಷ್ಟು ಬಲದಿಂದ ಬಂಧಿಸಿ ಹಿಡಿದು ನಿಲ್ಲಿಸಿದನು. “ಮಾಧವಾ! ನೀನೇನು ಮಾಡುತ್ತಿರುವೆ? ಶಸ್ತ್ರ ಧರಿಸಲಾರೆ, ಯುದ್ಧ ಮಾಡಲಾರೆ ಎಂದು ನೀನೇ ಆಡಿದ ವಚನ ಮರೆತೆಯಾ? ಭೀಷ್ಮ ಪಿತಾಮಹರನ್ನು ವಧಿಸಿ ‘ಮಿಥ್ಯವಾದಿ ಕೃಷ್ಣ’ ಎಂಬ ಲೋಕಾಪವಾದಕ್ಕೆ ಗುರಿಯಾಗುವೆಯಾ? ಅಚ್ಯುತಾ! ನಿನ್ನ ಕೈಯಾರೆ ಕಳಂಕದ ಚ್ಯುತಿಯನ್ನೇಕೆ ನೀನಾಗಿ ಅಂಟಿಸಿಕೊಳ್ಳುವೆ? ನನಗೆ ಸುಜ್ಞಾನದ ಸುಧೆಯನ್ನುನುಣಿಸಿ, ಈಗ ನೀನೆ ವಿಸ್ಮೃತನಾದೆಯಾ? ಕೃಪೆದೋರು ಕೃಷ್ಣಾ… ಎಂದು ಪ್ರಾರ್ಥಿಸತೊಡಗಿದನು.
ಇದೆಲ್ಲವನ್ನೂ ನೋಡುತ್ತಿದ್ದ ಪಿತಾಮಹ ಭೀಷ್ಮರಿಗೆ ವಿಸ್ಮಯವಾಯಿತು. ಕೃಷ್ಣ ಆಯುಧ ಧರಿಸಲಾರೆನೆಂದು ಹೇಳಿದ್ದಾನೆ. ಹಾಗಿದ್ದರೆ ಸುಕೋಮಲ ಶ್ಯಾಮ, ಸುಗುಣ ವಾಸುದೇವ, ಲೋಕಪಾಲಕ ನಾರಾಯಣ ಮೈಮರೆತು ಚಕ್ರಧರನಾದನೇ? ಹಾಗಾಗಲು ಸಾಧ್ಯವೇ? ಇಲ್ಲಾ ಅಸಂಭವ… ಓಹೋ! ದೇವಾ… ಭಕ್ತರ ದಾಸನಾದ ಶ್ರೀಕೃಷ್ಣಾ…ನಿನ್ನ ಲೀಲೆಯನ್ನು ಕಣ್ಣಾರೆ ಕಂಡು ಅರಿತುಕೊಂಡೆ… ಭೀಷ್ಮನ ಕಣ್ಣಾಲಿಗಳು ಒದ್ದೆಯಾಗಿ ತುಂಬಿದವು, ತುಂಬಿ ಹರಿದವು. ಧನ್ಯತೆ ಮನತುಂಬಿ ತರ್ಕಿಸಿದರು. ಸಾರ್ಥಕ್ಯ ಭಾವ ತಳೆದು “ಹೇ ಮುಕುಂದಾ! ನಿನ್ನ ನಡೆಯನ್ನಾಗಲಿ, ಹೆಜ್ಜೆಗಳನ್ನಾಗಲಿ, ಸಂಕಲ್ಪವನ್ನಾಗಲಿ, ಕೃತಿಯನ್ನಾಗಲಿ ಅರ್ಥ ಮಾಡಿಕೊಳ್ಳುವುದು ಸುಲಭ ಸಾಧ್ಯವಲ್ಲ. ಆದರೂ ಇಷ್ಟನ್ನು ಪರಮ ಭಕ್ತಿಯಿಂದ ನಾನು ಗ್ರಹಿಸಿಕೊಂಡೆ ದೇವಾ! ಅರಿತೋ.. ಅರಿಯದೆಯೋ… ಉದ್ವೇಗಕ್ಕೊಳಗಾಗಿಯೋ, ಆವೇಶದ ಮುಸುಕಿನೊಳಗೆ ಬುದ್ದಿ ಮಸುಕಾಗಿಯೊ ಈ ಪಾಮರನಿಂದ ಅಪಚಾರದ ವಾಕ್ಯವೊಂದು ಉಚ್ಚರಿಸಲ್ಪಟ್ಟಿತು. ‘ಕುರುಕ್ಷೇತ್ರ ಯುದ್ದದಲ್ಲಿ ತಾನು ನಿರಾಯುಧನೆಂದು ಘೋಷಿಸಿರುವ ವಾಸುದೇವನ ಕೈಯಲ್ಲಿ ಆಯುಧ ಹಿಡಿಸುವೆ’ ಎಂದು ಅತಿರೇಕದ ಶಪಥಗೈದಿದ್ದೆ. ಹಾಗೆಂದು ದೇವಾ! ಕುರುಕ್ಷೇತ್ರ ಯುದ್ಧದಲ್ಲಿ ನೀನು ಯುದ್ದ ಮಾಡಲಾರೆ, ಆಯುಧ ಹಿಡಿಯಲಾರೆ ಎಂದು ನುಡಿದಿರುವುದೂ ಸತ್ಯ. ನಿನ್ನ ದಾಸನಾದ ನನ್ನ ಭಕ್ತಿಗೆ ದೇವನಾದ ನೀನೇ ದಾಸನಾಗಿ ಹೋದೆಯಾ? ಭಕ್ತನ ವಚನ ಹುಸಿಯಾಗಬಾರದೆಂಬ ನಿನ್ನ ಹೃದಯ ವೈಶಾಲ್ಯತೆಯೊಳಗೆ ನನಗೆ ಸ್ಥಾನ ನೀಡಿಯೇ ಬಿಟ್ಟೆಯಲ್ಲ ದೇವಾ!
ನನ್ನ ಪೂಜ್ಯ ಗುರುಗಳು ಭಾರ್ಗವರಾಮರು, ಶಿಷ್ಯನಾದ ನನಗೆ ಒಲವಿನಿಂದ ಅನುಗ್ರಹಿಸಿ ನೀಡಿರುವ “ಅಸಿರತ್ನ” ಶರ ಪರಮ ಪಾವನವಾದದ್ದು. ಆ ಶರ ನಿನಗೆ ಸೇರಬೇಕಾದುದು ಎಂದರಿತು, ಹಿಂದಿರುಗಿಸಿ ನೀಡಬೇಕೆಂದು ಬಯಸಿ ಪ್ರಯೋಗಿಸಿದೆ… ನೋಡುಗರ ಕಂಗಳಿಗೆ ಪ್ರಯೋಗಿತ ಶರಾಘಾತವಾಗಿದ್ದರೂ, ಜಗದ ನೋವನ್ನೆಲ್ಲಾ ನಿವಾರಿಸುವ ನಿನಗೆ ನೋವಾಗುವುದುಂಟೇ? ಸುಪ್ರಸನ್ನ ನಿನಗೆ ಕೋಪ ಬರುವುದಕ್ಕುಂಟೆ? ಆಯುಧವನ್ನಿ ಧರಿಸಲಾರೆನೆಂದು ಹೇಳಿರುವೆ ವಾಸುದೇವಾ…
ನೀನೇ ಅಪವಾದಕ್ಕೆ ಒಳಗಾಗಬಹುದಾದರೂ, ಅದನ್ನು ಅಲಕ್ಷಿಸಿ ಸುದರ್ಶನಧರನಾಗಿ ದರುಶನ ನೀಡಿದೆ. ಭಕ್ತನಾದ ನನ್ನ ಶಪಥ ಪೂರೈಸಿದೆ. ಋಣಿಯಾದೆ ನಿನಗೆ ಭಗವಂತಾ … ನಿನ್ನ ಮಹಾತ್ಮೆಯ ಒಳ ಹೊರಗನ್ನು ಅರಿಯದೆ ಮೂಢನಂತೆ ನಾನೊರೆದಿದ್ದರೂ, ನನ್ನ ವಚನಕ್ಕೆ ನೀನು ಬಾಧ್ಯನಲ್ಲದ್ದಿದ್ದರೂ, ನಿನಗದು ಸ್ವೀಕೃತವಾಗಿ, ನೆರವೇರಿಸಿ ಬಿಟ್ಟೆಯಲ್ಲಾ ಪರಮಾತ್ಮಾ…. ನೀನು ನಿಷ್ಕಲ್ಮಶ ಭಕ್ತವತ್ಸಲನೇ ಹೌದೆಂದು ಲೋಕ ಮುಖ ಕೊಂಡಾಡುವಂತಹ ಭಕ್ತರಕ್ಷಕನಾಗಿ ಇಲ್ಲೂ ನಡೆದು ತೋರಿದೆ. ಕೇಶವಾ, ಮಾಧವಾ, ಅಚ್ಯುತಾ, ಅನಂತಾ, ಗೋವಿಂದಾ, ಮಧುಸೂದನಾ, ಮುರಾರೀ, ಮುಕುಂದಾ, ಹೃಷಿಕೇಷಾ, ಚಿನ್ಮಯಾ, ಲೋಕಪಾಲಕ ನಾರಾಯಣಾ… ಇದೋ ನಿನ್ನ ಭಕ್ತ ಧನ್ಯನಾಗಿದ್ದಾನೆ. ನನಗಿನ್ನೇನೂ ಸಾಧಿಸಿ ಪಡೆಯುವುದು ಉಳಿದಿಲ್ಲ. ನಿನ್ನ ಇಚ್ಚೆಯೇ ನನಗೆ ಸ್ವೇಚ್ಚೆಯಾಗಿದೆ. ನಿನ್ನನ್ನು ಹೊಡೆದು ಘಾಸಿಗೊಳಿಸಿದ ಕಾರಣಕ್ಕಾದರೂ ನನಗೆ ಸುಗತಿಯನ್ನು ಕರುಣಿಸು ದೇವಾ” ಎಂದು ಸ್ಥಂಭದಂತೆ ನಿಂತಲ್ಲೇ ಮನಸಾರೆ ಸ್ತುತಿಸಿದರು.
ಇತ್ತ ಅರ್ಜುನ ಬುಸುಗುಡುವ ಘಟ ಸರ್ಪದಂತಿರುವ ಕೃಷ್ಣನ ಪಾದಗಳನ್ನು ಚಲಿಸಗೊಡದೆ ಹಿಡಿದು ಕೊಂಡು,
“ದೇವಾ! ನನ್ನ ಮನದಲ್ಲಿ ಭವ ಬಂಧನದ ಭಾವ ಜಾಗೃತವಾಗಿತ್ತು. ಅಜ್ಜ ಭೀಷ್ಮಾಚಾರ್ಯರ ಬಗೆಗಿನ ಮೋಹ ನನ್ನನ್ನು ಬಂಧಿಸಿತ್ತು. ಈಗ ನಾನೇ ಪ್ರಮಾಣ ಮಾಡುತ್ತಿದ್ದೇನೆ ಕೇಳು. ಕೇಶವಾ! ಕ್ಷತ್ರಿಯ ಯೋಧನಾಗಿ ಸಕಲ ಶಸ್ತ್ರಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಈವರೆಗೆ ಸಂಪಾದಿಸಿರುವ ಸರ್ವ ಸುಕೃತ ಫಲಗಳನ್ನೆಲ್ಲ ಪಣಕ್ಕಿಟ್ಟು ನುಡಿಯುತ್ತಿದ್ದೇನೆ, ಆಲಿಸು… ವಾಸುದೇವಾ! ನನ್ನ ಮನದಲ್ಲಿರುವ ವ್ಯಾಮೋಹಗಳನ್ನೆಲ್ಲ ತೊರೆದು, ಈ ಕುರು ಸೇನಾಪತಿ ಎಂತಹ ಸಾಹಸ ವಿಕ್ರಮ ತೋರಿದರೂ ಅದೆಲ್ಲವನ್ನೂ ನಿಯಂತ್ರಿಸಿ, ಸೋಲಿಸದೆ ಬಿಡಲಾರೆ. ಇಚ್ಚಾಮರಣದ ವರವಿದ್ದರೂ, ಮರಣದ ಅಪೇಕ್ಷೆ ಬರುವಂತೆ ಮಾಡಿಸಿ, ಧಾರುಣಿಗೊರಗಿಸದೆ ಬಿಡಲಾರೆ. ಕೃಷ್ಣಾ.. ಶಾಂತನಾಗು. ಧಾರಣೆ ಮಾಡಿರುವ ಸುದರ್ಶನನನ್ನು ಉಪಶಮನಗೊಳಿಸಿ ಪ್ರಶಾಂತನಾಗು. ನನ್ನ ಮಾತುಗಳನ್ನು ನಂಬು ದೇವಾ, ಅಧರ್ಮದ ಪಕ್ಷದಲ್ಲಿರುವ ಯಾರೇ ಆದರೂ, ಅವರೆಲ್ಲರನ್ನೂ ವೈರಿಗಳೆಂದು ಪರಿಗಣಿಸಿ ಕೆಡಹಾಕುವೆ” ಎಂದು ಪರಿ ಪರಿಯಾಗಿ ಬೇಡಿಕೊಂಡನು.
ಅರ್ಜುನ ಈ ರೀತಿ ಪ್ರಾರ್ಥಿಸಿ ಪ್ರಮಾಣ ವಚನಗಳನ್ನಾಡಿದಾಗ ಸುದರ್ಶನನನ್ನು ಅಂತರ್ಹಿತಗೊಳಿಸಿ, ಕ್ರೋಧವದನನಾಗಿಯೆ ಹಿಂದಿರುಗಿ ಬಂದು ಪಾರ್ಥಸಾರಥಿಯಾಗಿ ಶ್ವೇತ ದಿವ್ಯಾಶ್ವಗಳ ವಾಘೆಯನ್ನು ಹಿಡಿದನು. ಅರ್ಜುನನೂ ಶೀಘ್ರವಾಗಿ ರಥವೇರಿ ಗಾಂಡೀವಧರನಾಗಿ ಸಮರಸಿದ್ಧನಾದನು.
ಭೀಷ್ಮಾಚಾರ್ಯರೂ ಸರ್ವ ವ್ಯಾಮೋಹ ತೊರೆದು ದೃಢ ಸಂಕಲ್ಪಧರನಂತೆ ಕರ್ಮ ಯೋಗಿಯಾಗಿ, ಅತ್ಯುಗ್ರನಾಗಿ ಪಾಂಡವ ಸೇನೆಯ ಮೇಲೆರಗಿದರು. ಪ್ರತಿಯಾಗಿ ಅತ್ತ ಅರ್ಜುನನು ಕುರುಸೇನೆಯ ಮೇಲೆ ಶರವರ್ಷವನ್ನಿ ಸುರಿಸಿದನು. ಎರಡು ದೊಡ್ಡ ಪರ್ವತಗಳ ಮೇಲೆ ಕುಂಭ ದ್ರೋಣ ಮಳೆ ಸುರಿವಂತೆ ಇವರಿಬ್ಬರಿಂದ ಪರಸ್ಪರ ಛೇಧಿಸಲ್ಪಟ್ಟ ಶರಗಳು ಧಾರಾಕಾರವಾಗಿ ಉದುರುತ್ತಿವೆ. ಯಾವ ಮಟ್ಟದ ಉಗ್ರ ಹೋರಾಟವೆಂದರೆ ಇವರೀರ್ವರಿಂದ ಪ್ರಯೋಗಿಸಲ್ಪಟ್ಟ ಅಕ್ಷಯಾಸ್ತ್ರಗಳು ರಣಕ್ಷೇತ್ರದ ಮೇಲೆ ಚಪ್ಪರದಂತೆ ಆವರಿಸಿ ಸೂರ್ಯ ರಶ್ಮಿಯೂ ಸೋಕದಂತೆ ತಡೆದು ಕತ್ತಲೆ ಕವಿಯಂತೆ ಆಗಿಹೋಯಿತು. ಈ ಹೋರಾಟದ ನಡು ನಡುವೆ ಭೀಷ್ಮಾಚಾರ್ಯರು ಸಹಸ್ರ ಸಹಸ್ರ ಪಾಂಡವ ಸೇನೆಯ ಮುಕುಟಧರರನ್ನು ನಾಶಗೊಳಿಸುತ್ತಿದ್ದರೆ, ಅರ್ಜುನನೂ ಹಿಂದುಳಿಯದೆ ಕುರುಸೇನೆಯ ನಿರ್ನಾಮ ಕಾರ್ಯನಿರತನಾಗಿಯೇ ಮುಂಬರಿಯುತ್ತಿದ್ದ. ಇವರೀರ್ವರ ಅತುಲ ಹೋರಾಟದ ಉರಿ ತಾಳಲಾರದೆ ಇತ್ತ ಪಾಂಡವ ಸೇನೆ, ಅತ್ತ ಕೌರವ ಸೇನೆ ಹಿಂದಕ್ಕೆ ಓಡುತ್ತಾ ಪಲಾಯನಗೈದು ಬದುಕುಳಿಯುವ ಯತ್ನ ಮಾಡುವಂತಾಯಿತು. ಅಜ್ಜ ಭೀಷ್ಮಾಚಾರ್ಯರಿಗೆ ಪ್ರಾಮಾಣಿಕ ಕರ್ಮ ಗೈಯುತ್ತಿದ್ದೇನೆಂಬ ಭಾವ, ಅರ್ಜುನನಿಗೆ ಮೋಹ ಬಂಧನದಿಂದ ಮುಕ್ತನಾಗಿ ಕರ್ತವ್ಯ ಮಾಡುತ್ತಿದ್ದೇನೆಂಬ ಭಾವ. ಇವರೀರ್ವರ ಭಾವಲಹರಿಗೆ ಕಾರಣನಾದ ಜಗನ್ನಿಯಾಮಕ ಶ್ರೀಹರಿ ಸ್ಥಿತಪ್ರಜ್ಞನಾಗಿ ಉಪಸ್ಥಿತನಿದ್ದಾನೆ. ಸೂರ್ಯಾಸ್ಥಮಾನದ ಸಮಯವಾಗಿ ಧರ್ಮಯುದ್ದ ನಿಲ್ಲಿಸಲ್ಪಟ್ಟಿತು. ಒಂಭತ್ತನೆಯ ದಿನದ ಸಮರ ಕುರುಕ್ಷೇತ್ರದಲ್ಲಿ ಸಮಾಪ್ತಗೊಂಡಿತು.
ಪುಣ್ಯ ಕ್ಷೇತ್ರ ಕುರುಕ್ಷೇತ್ರ ರಣಕ್ಷೇತ್ರವಾಗಿ ಈಗ ಚಿತ್ರಣವೆ ಭೀಭತ್ಸಕರವಾಗಿದೆ. ಭಗ್ನಗೊಂಡು ಬಿದ್ದಿರುವ ಸಹಸ್ರ ಸಹಸ್ರ ರಥಗಳು, ಬಿದ್ದು ಸತ್ತಿರುವ ರಥಿ, ಸಾರಥಿ, ಮಹಾರಥಿಗಳು, ಬಾಣ, ಖಡ್ಗ, ಗದಾಘಾತಗಳಿಂದ ಸೀಳಲ್ಪಟ್ಟು ರಾಶಿ ರಾಶಿಯಾಗಿ ಬಿದ್ದಿರುವ ಕವಚ, ಶಿರಸ್ತ್ರಾಣ, ಗುರಾಣಿಗಳು, ಭಿಂದಿಪಾಲ, ಶೀಲಿಮುಖಗಳು. ಮುರಿದು ಬಿದ್ದು ಗುಡ್ಡಗಳಾಗಿರುವ ಶರ, ಧನು, ಗದೆ, ಖಡ್ಗ, ಕಠಾರಿಯಾದಿ ಆಯುಧಗಳು, ಧ್ವಜಗಳು, ತುರಗ, ಗಜಗಳ ಕಾಯ ಖಂಡನವಾಗಿ ಸತ್ತು ಬಿದ್ದು ಬಸಿದು ಹರಿದ ರಕ್ತದೋಕುಳಿ, ಎರಡೂ ಪಕ್ಷಗಳ ಸೈನಿಕರ ಕತ್ತರಿಸಲ್ಪಟ್ಟ ಕೈ, ಕಾಲು, ರುಂಡ, ಮುಂಡಗಳು. ಪ್ರಾಣವಿದ್ದ ಎಲ್ಲವೂ ಪ್ರಾಣಿಗಳಾಗಿ ಈಗ ಪ್ರಾಣ ಕಳೆದುಕೊಂಡು ಹತಪ್ರಾಣರಾಗಿ ಬಿದ್ದಿದ್ದಾರೆ. ಅದೆಷ್ಟು ಮಕ್ಕಳಿಗೆ ತಂದೆಯಿಲ್ಲ, ತಂಗಿಗೆ ಅಣ್ಣನಿಲ್ಲ, ಮಡದಿಗೆ ಪತಿಯಿಲ್ಲ, ಮಾತಾಪಿತರಿಗೆ ಸುತನಿಲ್ಲ, ಮಿತ್ರನಿಗೆ ಸಖನಿಲ್ಲದಂತಾಗಿ ಹೋಗಿದೆ. ಬೆಟ್ಟದಂತೆ ಅಲುಗದೆ ಬಿದ್ದುಕೊಂಡು ಚಿರನಿದ್ರೆಗೆ ಜಾರಿದ್ದಾರೆ. ರಣಹದ್ದು ಗರುಡ, ಗಂಡ ಭೇರುಂಡ, ಶಾಕಿಣಿ ಡಾಕಿಣಿಯಾದಿ ಪಿಶಾಚಿಗಳ ಸಹಿತ ಮಾರಿಗೆ ಔತಣವಾಗಿದೆ ರಣಕ್ಷೇತ್ರ ಕುರುಕ್ಷೇತ್ರ.
ವಿಶ್ರಾಂತರಾದ ಪಾಂಡವರ ಬಿಡಾರದಲ್ಲಿ ವ್ಯಥೆಯ ಛಾಯೆ ಆವರಿಸಿದೆ. ಅಜೇಯರಾಗಿ ಧರ್ಮ ರಕ್ಷಣಾ ಕಾರ್ಯಕ್ಕೆ ಅಭೇದ್ಯವಾದ ತಡೆಯಾಗಿ ನಿಂತಿರುವ ಪಿತಾಮಹನನ್ನು ನಿಯಂತ್ರಿಸುವ ಬಗೆ ಹೇಗೆ ಎಂಬ ಸಮಾಲೋಚನೆ ಆರಂಭವಾಗಿದೆ.
ಮುಂದುವರಿಯುವುದು….





















































