
ಹಾಸನ: ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ನಗರದ ಯೂತ್ ಹಾಸ್ಟೆಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು 15 ಲಕ್ಷ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ 2798 ಕೋಟಿ ರು. ಬೆಳೆ ಪರಿಹಾರ ಅಂದಾಜಿಸಿದ್ದು, 200 ಕೋಟಿಗೂ ಹೆಚ್ಚು ಪರಿಹಾರ ಈಗಾಗಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಪರಿಹಾರ ಹಣ ನೇರವಾಗಿ ವರ್ಗಾಯಿಸಲಾಗುವುದು ಎಂದು ಹೇಳಿದರು.






















































