
ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ನರ್ಸಿಂಗ್ ಕಾಲೇಜಿನ ಅವ್ಯವಸ್ಥೆಗೆ ಕಾಲೇಜಿನ ವಿದ್ಯಾರ್ಥಿಗಳು ಇಂದು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರೇ ನೇರ ಹೊಣೆಯಾಗಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.
ಸುನಿಲ್ ಕುಮಾರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಚಾರದ ಹುಚ್ಚಿನಿಂದ ಯಾವುದೇ ಅನುದಾನವನ್ನು ಮೀಸಲಿಡದೆಯೆ ಕೇವಲ ಕಾಟಾಚಾರಕ್ಕೆ ನರ್ಸಿಂಗ್ ಕಾಲೇಜನ್ನು ಉದ್ಘಾಟನೆ ಮಾಡಿದ ಫಲವಾಗಿ ಇವತ್ತು ಕಾಲೇಜಿನಲ್ಲಿ ಅವ್ಯವಸ್ಥೆ ತಲೆದೋರಿದ್ದು ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಪ್ರತಿಭಟನೆ ನಡೆಸುವಂತಾಗಿದೆ.
ಕಾರ್ಕಳ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಸಮಸ್ಯೆ, ಕಟ್ಟಡದ ಸಮಸ್ಯೆ, ಪೀಠೋಪಕರಣಗಳ ಸಮಸ್ಯೆ, ವೈಜ್ಞಾನಿಕ ಉಪಕರಣಗಳ ಸಮಸ್ಯೆ ಇದ್ದರೂ ಕೂಡ ಕೇವಲ ಚುನಾವಣೆಯ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿ ಸುನಿಲ್ ಕುಮಾರ್ ಅವರು ನರ್ಸಿಂಗ್ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ. ವಿದ್ಯಾರ್ಥಿ ಜೀವನದ ಅದ್ಯಯನದ ಅಮೂಲ್ಯ ಸಮಯದಲ್ಲಿ ತಮ್ಮ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಚೆಲ್ಲಾಟವಾಡಿರುವುದಕ್ಕೆ ಶಾಸಕ ಸುನಿಲ್ ಕುಮಾರ್ ಅವರು ವಿದ್ಯಾರ್ಥಿಗಳ ಕ್ಷಮೆಯನ್ನು ಯಾಚಿಸಬೇಕು.
ಚುನಾವಣೆಯ ನಂತರವಾದರೂ ಶಾಸಕರು ಈ ಕುರಿತು ಜವಾಬ್ದಾರಿ ವಹಿಸಿ ನರ್ಸಿಂಗ್ ಕಾಲೇಜಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು, ತನ್ನ ಜವಾಬ್ದಾರಿಯನ್ನು ಮರೆತ ಸುನೀಲ್ ಕುಮಾರ್ ಕೇವಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ವ್ಯರ್ಥ ಕಾಲಹರಣ ಮಾಡಿದ್ದಾರೆ, ಈಗ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿಯ ವಿದ್ಯಾರ್ಥಿ ಘಟಕದ ಮೂಲಕ ನರ್ಸಿಂಗ್ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆ.
ತನ್ನ ರಾಜಕೀಯಕ್ಕಾಗಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡುವುದನ್ನು ಬಿಟ್ಟು ಮಾನ್ಯ ಮುಖ್ಯಮಂತ್ರಿಯವರನ್ನು, ಮಾನ್ಯ ಆರೋಗ್ಯ ಸಚಿವರ ಬೆನ್ನು ಬಿದ್ದು ಕಾರ್ಕಳ ನರ್ಸಿಂಗ್ ಕಾಲೇಜಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುಲ್ಲಿ ಶಾಸಕ ಸುನೀಲ್ ಕುಮಾರ್ ಮುಂದಾಗಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.



















































