
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಪಥ ಸಂಚಲನ ಮಾಡೇ ಮಾಡುತ್ತೇವೆ ಎಂಬ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ ಕಲ್ಲಡ್ಕ ಪ್ರಭಾಕರ್ ಭಟ್ ಆಗಲಿ, ಅವರ ಅಪ್ಪ ಆಗಲಿ ಕಾನೂನು ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ಕೋರ್ಟ್‌ಗಿಂತ ಅವರು ದೊಡ್ಡವರಾ? ಮಾಡಲಿ ನೋಡೋಣ. ಕೋರ್ಟ್ ಅನುಮತಿ ಸಿಗದೇ ಮಾಡುತ್ತಾರಾ? ಅನುಮತಿ ಇಲ್ಲದೇ ಮಾಡಿದರೆ ಸರ್ಕಾರ ಕತ್ತೆ ಕಾಯುತ್ತಿರುತ್ತಾ? ಅನುಮತಿ ತಗೆದುಕೊಳ್ಳಲೇಬೇಕು ಎಂದು ಹೇಳಿದರು.
ಬಹಿರಂಗ ಚರ್ಚೆಗೆ ಬನ್ನಿ ಎಂದರೂ ಚರ್ಚೆಗೆ ಬರಲ್ಲ. ಏನಾದ್ರೂ ಕಂಟೆಂಟ್ ಇದ್ರೆ ಬರುತ್ತಿದ್ದರು. ಬರೀ ವೈಯಕ್ತಿಕವಾಗಿ ಮಾತನಾಡುತ್ತಾರೆ. ಆರ್‌ಎಸ್‌ಎಸ್ ರಿಜಿಸ್ಟರ್ ಆಗಿದ್ಯಾ ಎಂದು ಕೇಳಿದ್ರೆ ತಪ್ಪಾ? ದಾಖಲೆ ತಂದು ಮುಖದ ಮೇಲೆ ಬಿಸಾಕಲಿ. ಇವರಿಗೆ ಎಲ್ಲಿಂದ ದೇಣಿಗೆ ಸಿಗುತ್ತಿದೆ? ದೇವಸ್ಥಾನದ ಹುಂಡಿ ಲಾಕ್ ಆಗಿರುತ್ತೆ. ಅದನ್ನ ತೆಗೆಯಬೇಕಾದರೆ ತಹಶೀಲ್ದಾರ್ ಬರಬೇಕು, ಎಲ್ಲವನ್ನೂ ಪಾರದರ್ಶಕವಾಗಿ ತೆಗೆಯುತ್ತಾರೆ. ಆದರೆ ಆರ್‌ಎಸ್‌ಎಸ್‌ಗೆ ಎಲ್ಲಿಂದ ದೇಣಿಗೆ ಬರುತ್ತಿದೆ. ದೇಣಿಗೆ ಮೂಲ ಗೊತ್ತಾಗಬೇಕಲ್ವಾ? ರಾಜ್ಯ, ದೇಶ, ವಿದೇಶದಿಂದ ಬರುತ್ತಿದ್ಯಾ? ಇದರ ಮೂಲ ಗೊತ್ತಾಗಬೇಕಲ್ವಾ? ದೇಶದ ದೊಡ್ಡ ಎನ್‌ಜಿಓ ಅಂತ ಮೋದಿ ಹೇಳ್ತಾರಲ್ವಾ? ಅದರ ಲೆಕ್ಕವನ್ನು ಕೊಡಲಿ ಈಗ. ಸರ್ದಾರ್ ವಲ್ಲಬಾಯ್ ಪಟೇಲ್‌ರಿಂದ ಹಿಡಿದು ಇಂದಿರಾಗಾಂಧಿವರೆಗೆ ನಾವು ದೊಡ್ಡ ಮನಸ್ಸು ಮಾಡಿಕೊಂಡು ಬಂದಿದ್ದೇವೆ, ಅದೇ ತಪ್ಪಾಗಿದೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಮಾತಲ್ಲಿ ಹಿಂದೆ ಒಂದು, ಮುಂದೆ ಒಂದು ಇಲ್ಲ. ನಾನು ಸಾರ್ವಜನಿಕವಾಗಿ ಏನು ಮಾತನಾಡುತ್ತೇನೋ ಖಾಸಗಿಯಾಗಿಯೂ ಅದನ್ನೇ ಮಾತನಾಡುತ್ತೇನೆ. ನಾನು ಯಾರ ಮೇಲೂ ಪ್ರಭಾವ ಬೀರುತ್ತಿಲ್ಲ. 11 ಸಂಘಟನೆಗಳು ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೋರಿವೆ. ಅದಕ್ಕೆ ಶಾಂತಿ ಸಭೆ ಅಧಿಕಾರಿಗಳು ಮಾಡುತ್ತಾರೆ. ಅಧಿಕಾರಿಗಳೇ ತೀರ್ಮಾನ ಮಾಡಿ ಕೋರ್ಟ್‌ಗೆ ಸಲ್ಲಿಕೆ ಮಾಡುತ್ತಾರೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನೇ ನಾವೂ ಪಾಲನೆ ಮಾಡುತ್ತೇವೆ ಎಂದು ಹೇಳಿದರು.



















































