
ಹೈದರಾಬಾದ್: ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಎಂಬಲ್ಲಿ ನಡೆದ ಭೀಕರ ಬಸ್ಸು ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು ಆದರೆ ಈ ದುರಂತಕ್ಕೆ ಕಾರಣವಾದ ಬೈಕ್ ಮತ್ತು ಬಸ್ಸಿನ ನಡುವೆ ಅಪಘಾತ ಹೇಗೆ ಸಂಭವಿಸಿದೆ ಎನ್ನುವುದರ ಬಗ್ಗೆ ಈಗ ತನಿಖೆ ಮುಂದುವರೆದಿದೆ.
ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಕೆಲವರು ವೇಗವಾಗಿ ಬಂದ ಬೈಕ್ ಸವಾರ ಬಸ್ಸಿನ ಹಿಂಬದಿಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿದರೆ ಇನ್ನು ಕೆಲವರು ಬಸ್ಸು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನುತ್ತಿದ್ದಾರೆ.
ಗುದ್ದಿದ ರಭಸಕ್ಕೆ ಬಸ್ಸಿನ ಕೆಳಭಾಗಕ್ಕೆ ಬೈಕ್ ನುಗ್ಗಿದ್ದು ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಕೆಳಕ್ಕೆ ಚೆಲ್ಲಿದ್ದು ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್ ಟ್ಯಾಂಕ್ ಮೇಲೆ ಚಿಮ್ಮಿದ್ದು ಕೂಡಲೇ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿದೆ.
ದುರಂತ ನಡೆದ ಬಳಿಕ ಬಸ್ಸು ಚಾಲನೆ ಮಾಡುತ್ತಿದ್ದ ಚಾಲಕ ಪರಾರಿಯಾಗಿದ್ದರೆ ಮತ್ತೊಬ್ಬ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡವು ಆಗಮಿಸಿ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ತಿಳಿಸಿದ್ದಾರೆ.



















































