
ನವದೆಹಲಿ: ಗಗನಯಾನಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತವಾಗಿ ಕಾಣುತ್ತದೆ, ಬೆಂಗ್ಳೂರು, ಪುಣೆ ಮಿನುಗುತ್ತವೆ ಎಂದು ವರ್ಣಿಸಿದ್ದಾರೆ.
ಭಾರತವು ನೈರುತ್ಯದಿಂದ ಈಶಾನ್ಯಕ್ಕೆ ಒಂದು ನಕ್ಷತ್ರ ಪುಂಜದಂತೆ ಗೋಚರಿಸುತ್ತದೆ. ಬೆಂಗಳೂರು, ಹೈದ್ರಾಬಾದ್, ಪುಣೆ ನಗರಗಳು ಆ ಪುಂಜದ ನಕ್ಷತ್ರಗಳು. ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಮೃದುವಾಗಿ ಹೊಳೆಯುವ ಮೂಲಕ ತನ್ನ ಇರುವಿಕೆಯನ್ನು ತೋರಿಸುತ್ತದೆ. ಬಂಗಾಳಕೊಲ್ಲಿ ಮತ್ತು ಮಧ್ಯ ಭಾರತ ಬೆಳಕಿನ ಕಿರಣಗಳಲ್ಲಿ ಅದ್ಭುತವಾಗಿ ಕಾಣುತ್ತವೆ. ಮೋಡಗಳ ನಡುವೆ ಘರ್ಜಿಸುವ ಸಿಡಿಲು, ಮಳೆ ಜಿನುಗು ಆಹ್ಲಾದವನ್ನು ನೀಡಿದರೆ, ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು ಮೃದುವಾಗಿ ಮೌನವಾಗಿ, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ.
ಇವೆಲ್ಲವನ್ನು ನೋಡಿದಾಗ ಪ್ರಕೃತಿಯಲ್ಲಿ ಮೂಡಿಸಿದ ಈ ವಿಸ್ಮಯದ ಕಲಾಕಾರ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಭವ್ಯ ದೃಶ್ಯವನ್ನು ನೋಡುವಾಗ ನಿಮ್ಮ ಮುಖದಲ್ಲಿ ನಸುನಗು ಬರದೇ ಇರಲು ಸಾಧ್ಯವಿಲ್ಲ. ಇದು ಭೂಮಿಯ ಮೇಲಿನ ದೀಪಾವಳಿ ಅಲ್ಲ ಭೂಮಿಯ ದೀಪಾವಳಿ ಎಂದು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.



















































