27.7 C
Udupi
Monday, April 13, 2026
spot_img
spot_img
HomeBlogದೀಪಗಳ ಹಬ್ಬ ದೀಪಾವಳಿಯ ಮಹತ್ವ ಸಾರೋಣ

ದೀಪಗಳ ಹಬ್ಬ ದೀಪಾವಳಿಯ ಮಹತ್ವ ಸಾರೋಣ

ಪ್ರತಿ ದೀಪವು ,ಮಾನವನ ದಯೆ, ಜ್ಞಾನ, ಪ್ರೀತಿಯ ಸಂಕೇತ

ಪ್ರೇಮಾ ಆರ್ ಶೆಟ್ಟಿ

ನಮ್ಮ ದೇಶವು ವೈವಿಧ್ಯಮಯ ಸಂಸ್ಕೃತಿಯ ನೆಲೆವೀಡು. ಇಲ್ಲಿ ಪ್ರತಿಯೊಂದು ಹಬ್ಬವೂ ಮಾನವೀಯ ಮೌಲ್ಯಗಳನ್ನು ಸಾರುವಂತದ್ದು. ಇಂತಹ ಅನೇಕ ಹಬ್ಬಗಳಲ್ಲಿ ಅತ್ಯಂತ ಪ್ರಖ್ಯಾತ, ಅತ್ಯಂತ ಹರ್ಷೋಲ್ಲಾಸದಿಂದ ಆಚರಿಸಲ್ಪಡುವ ಹಬ್ಬವೇ ದೀಪಾವಳಿ ಅಥವಾ ದಿವಾಲೀ. “ಅಂಧಕಾರದಿಂದ ಬೆಳಕಿನತ್ತ”, “ಅಜ್ಞಾನದಿಂದ ಜ್ಞಾನದತ್ತ” ಎಂಬ ಸಂದೇಶ ನೀಡುವ ಈ ಹಬ್ಬವು ನಿಜಕ್ಕೂ ನಮ್ಮ ಜೀವನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಈ ಹಬ್ಬ ಬೆಳಕಿನ ಹಬ್ಬ ಆದ ಕಾರಣ ಇದು ಎಲ್ಲಾ ಧರ್ಮದ ಜನ ಆಚರಿಸುವ, ಸಂಭ್ರಮ ಪಡುವ ಹಬ್ಬ ಆಗಿದೆ.

ದೀಪಾವಳಿಯ ಮೂಲ ಮತ್ತು ಪೌರಾಣಿಕ ಹಿನ್ನೆಲೆಯನ್ನು ನೋಡಿದಾಗ ದೀಪಾವಳಿಯ ಆಚರಣೆಯ ಮೂಲವು ಹಲವಾರು ಪೌರಾಣಿಕ ಕಥೆಗಳಲ್ಲಿ ಹೇಳಲ್ಪಟ್ಟಿದೆ. ರಾಮಾಯಣದ ಪ್ರಕಾರ, ಅಯೋಧ್ಯಾಧಿಪತಿ ಶ್ರೀರಾಮ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ರಾವಣನನ್ನು ಸಂಹಾರ ಮಾಡಿ, ಸೀತೆಯೊಂದಿಗೆ ಅಯೋಧ್ಯೆಗೆ ಮರಳಿದ ದಿನವೇ ದೀಪಾವಳಿಯ ದಿನ ಎಂದು ಹೇಳಲಾಗುತ್ತದೆ. ಆ ಸಂತೋಷವನ್ನು ಆಚರಿಸಲು ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸಿ ಹರ್ಷದಿಂದ ನೃತ್ಯಗೀತೆಗಳಲ್ಲಿ ತೊಡಗಿದ್ದರು. ಅದೇ ದಿನದಿಂದ ದೀಪಾವಳಿ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಈ ದಿನ ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ. ನರಕಾಸುರನ ಮರಣದಿಂದ ಪ್ರಪಂಚವು ಪಾಪ ಮತ್ತು ಕೆಟ್ಟ ನೋವಿನಿಂದ ಮುಕ್ತವಾಯಿತು. ಈ ಜಯವನ್ನು ಸ್ಮರಿಸಲು ಜನರು ಬೆಳಕಿನ ಹಬ್ಬವನ್ನು ಆಚರಿಸಲು ಆರಂಭಿಸಿದರು. ಅದೇ ಕಾರಣಕ್ಕೆ ದೀಪಾವಳಿಯನ್ನು ನರಕ ಚತುರ್ದಶಿ ಎಂದು ಕರೆಯುತ್ತಾರೆ
.
ಜೈನ ಸಂಪ್ರದಾಯದಲ್ಲಿ, ದೀಪಾವಳಿ ಭಗವಾನ್ ಮಹಾವೀರ ಮೋಕ್ಷವನ್ನು ಪಡೆದ ದಿನ ಎಂದು ಮಹತ್ವ ಪಡೆದಿದೆ. ಸಿಖ್ ಪರಂಪರೆಯಲ್ಲೂ ಇದು ಗುರು ಹರಗೋಬಿಂದ್‌ ಅವರು ಕಾರಾಗೃಹದಿಂದ ಬಿಡುಗಡೆಗೊಂಡ ದಿನವೆಂದು ಆಚರಿಸಲಾಗುತ್ತದೆ. ಹೀಗಾಗಿ ದೀಪಾವಳಿ ಭಾರತದ ನಾನಾ ಧಾರ್ಮಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಮತ್ತು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾ ಬರಲಾಗಿದೆ.

ಹಬ್ಬದ ಕಾಲಾವಧಿ ಮತ್ತು ಆಚರಣೆಯ ವಿಧವನ್ನು ನೋಡಿದಾಗ ದೀಪಾವಳಿ ಸಾಮಾನ್ಯವಾಗಿ ಕಾರ್ತಿಕ ಮಾಸದ ಅಮಾವಾಸ್ಯೆಯಂದು (ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ) ಆಚರಿಸಲಾಗುತ್ತದೆ. ಈ ಹಬ್ಬ ಸಾಮಾನ್ಯವಾಗಿ ಐದು ದಿನಗಳ ಕಾಲ ನಡೆಯುತ್ತದೆ.

, ೧. ಧನ ತ್ರಯೋದಶಿಯ ದಿನದಂದು ಸಮೃದ್ಧಿ ಹಾಗೂ ಆರೋಗ್ಯದ ಹಬ್ಬ ಆಚರಿಸಲಾಗುತ್ತದೆ. ಈ ದಿನ ಜನರು ಚಿನ್ನ, ಬೆಳ್ಳಿ ಅಥವಾ ಹೊಸ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯ ಕೆಲವು ಪ್ರದೇಶಗಳಲ್ಲಿ ಈಗಲೂ ಇದೆ.

, ೨.ನರಕಚತುರ್ದಶಿಯು ಬೆಳಗಿನ ಬಿಸಿ ನೀರ ಸ್ನಾನ, ಎಣ್ಣೆ ಹಚ್ಚುವುದು, ದೇಹ ಶುದ್ಧೀಕರಣ ಮುಂತಾದ ವಿಧಿಗಳು ನಡೆಯುತ್ತವೆ ಎಲ್ಲಾ ಕಡೆ ನಡೆಯುತ್ತವೆ. ಇದು ಚಳಿಗಾಲದ ಸಮಯದಲ್ಲಿ ಚರ್ಮದ ಆರೋಗ್ಯ ಕಾಪಾಡುವ ಪುರಾತನ ವೈಜ್ಞಾನಿಕ ವಿಧಾನವಾಗಿದೆ.

,೩. ಲಕ್ಷ್ಮೀ ಪೂಜೆಯ ದಿನವು ದೀಪಾವಳಿಯ ಮುಖ್ಯ ದಿನ. ಮನೆಗಳಲ್ಲಿ ದೇವೀ ಲಕ್ಷ್ಮಿಯನ್ನು ಪೂಜಿಸಿ, ಸಂಪತ್ತಿನ ಮತ್ತು ಸಂತೋಷದ ಆಶೀರ್ವಾದವನ್ನು ಕೋರುತ್ತಾರೆ. ಹಣ, ಬೆಳ್ಳಿ, ಬಂಗಾರವನ್ನು ಮತ್ತು ಸಿಹಿ ತಿಂಡಿಗಳನ್ನಿಟ್ಟು ಪೂಜಿಸಲಾಗುತ್ತದೆ. ಆ ದಿನವೇ ಅಂಗಡಿ ಪೂಜೆಯನ್ನು ಕೂಡಾ ಜನ ನೆರವೇರಿಸುತ್ತಾರೆ. ಎಲ್ಲರಿಗೂ ಸಿಹಿ ಹಂಚುತ್ತಾರೆ.

೪. ಪದ್ವಾ ಅಥವಾ ಬಲಿ ಪೂಜೆಯ ದಿನ ಪತಿ-ಪತ್ನಿಯರ ಪರಸ್ಪರ ಪ್ರೀತಿಯನ್ನು ಪ್ರತಿನಿಧಿಸುವ ದಿನ ಎಂದು ಹೇಳುತ್ತಾರೆ. ಗದ್ದೆ ತೋಟ ಇರುವ ಜನ ಗದ್ದೆಯಲ್ಲಿ ಬಟ್ಟೆ ಸುತ್ತಿದ ಕೋಲನ್ನು ಎಣ್ಣೆಯಲ್ಲಿ ಮುಳುಗಿಸಿ ದೀಪವಿಟ್ಟು ಬಲಿ ಚಕ್ರವರ್ತಿಯನ್ನು ಕರೆಯುವ ಸಂಪ್ರದಾಯ ಹಲವು ಕಡೆಯ ರೈತರಲ್ಲಿ ಇದೆ. ಅಲ್ಲದೆ ಮಲೆನಾಡಿನಲ್ಲಿ ಗದ್ದೆಗಳಿಗೆ ಮುಂಡುಗದ ಗಿಡ ನೆಡುವ ಸಂಪ್ರದಾಯವೂ ಇದೆ. ಮನೆಯ ಎದುರು ಕೂಡಾ ಆ ಗಿಡದ ಕೊಂಬೆಯನ್ನು ಎಲೆ ಸಹಿತ ತಂದು ನಿಲ್ಲಿಸುತ್ತಾರೆ. ಬಲಿ ಚಕ್ರವರ್ತಿ ಅಂದು ನಮ್ಮೆಲ್ಲರನ್ನು ನೋಡಲು ಭೂಮಿಗೆ ಬರುತ್ತಾನೆ. ಹಾಗಾಗಿ ಅವನು ಬರುವಾಗ ಅವನಿಗೆ ನಮ್ಮ ಒಳ್ಳೆಯ ಬೆಳೆಯನ್ನು ತೋರಿಸಬೇಕು ಮತ್ತು ಪ್ರಾರ್ಥಿಸಬೇಕು ಎಂಬುದು ರೈತರ ನಂಬಿಕೆಯಾಗಿದೆ.

೫. ಬ್ರಾತ್ರು ದ್ವಿತೀಯವು ಉತ್ತರ ಭಾರತದ ಕಡೆಯಲ್ಲಿ ಸಹೋದರಿಯರ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾಗಿದೆ ಮತ್ತು ಅವರದನ್ನು ಆಚರಿಸುತ್ತಾರೆ. ಈ ಎಲ್ಲಾ ದಿನಗಳು ಒಟ್ಟಾಗಿ ದೀಪಾವಳಿಯನ್ನು ಅರ್ಥಪೂರ್ಣವಾಗಿಸುತ್ತವೆ.

ದೀಪಾವಳಿಯ ಆಚರಣೆಯ ವಿಧಾನವು ಭಾರತದ ಎಲ್ಲಾ ಕಡೆ ಒಂದೇ ರೀತಿಯಾಗಿ ಇಲ್ಲ. ಅದು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ದೀಪಾವಳಿಯಂದು ಎಲ್ಲರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವುದು ಒಂದು ಪ್ರಮುಖ ಸಂಪ್ರದಾಯ. ಅಶುದ್ಧತೆ ಮತ್ತು ಅಸ್ಥಿರತೆಯಿಂದ ಮುಕ್ತವಾದ ಮನೆಗೆ ದೇವೀ ಲಕ್ಷ್ಮೀ ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. ಜನರು ಹೊಸ ಬಟ್ಟೆಗಳನ್ನು ಧರಿಸಿ, ಮನೆಗಳನ್ನು ಹೂವಿನ ಮಾಲೆಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಪ್ರತಿ ಮನೆಯ ಮುಂದೆ ರಂಗೋಲಿ ಬಿಡಿಸುವುದೂ ದೀಪಾವಳಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಎಲ್ಲರ ಮನೆಯ ಎದುರು ಕೂಡಾ ಬೆಳಕಿನ (ಆಕಾಶ)ಬುಟ್ಟಿಗಳನ್ನು ಕಟ್ಟಿ, ಅದರಲ್ಲಿ ಬೆಳಕನ್ನು ತೂಗು ಬಿಡಲಾಗುತ್ತದೆ.

ಸಂಜೆ ಸಮಯದಲ್ಲಿ, ಜನರು ತಮ್ಮ ಮನೆಗಳ ಒಳಗೂ ಹೊರಗೂ ಮಣ್ಣಿನ ದೀಪಗಳನ್ನು ಎಳ್ಳೆಣ್ಣೆಯಲ್ಲಿ ಮತ್ತು ಹತ್ತಿಯ ಬತ್ತಿ ಬಳಸಿ ಬೆಳಗಿಸುತ್ತಾರೆ. ಈ ಬೆಳಕು ಅಂಧಕಾರವನ್ನು ದೂರ ಮಾಡುತ್ತದೆ ಎಂಬ ಸಂಕೇತದೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದೇಶ ನೀಡುತ್ತದೆ. ಮಕ್ಕಳು ಮತ್ತು ಹಿರಿಯರು ಜಾತಿ, ಮತ ಪಂಗಡ ಮರೆತು ಪಟಾಕಿ ಸಿಡಿಸುವುದರಲ್ಲಿ ಆನಂದಿಸುತ್ತಾರೆ, ಆದರೆ ಇತ್ತೀಚಿನ ಕಾಲದಲ್ಲಿ ಪರಿಸರ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ “ಹಸಿರು ದೀಪಾವಳಿ” (Eco-friendly Diwali) ಆಚರಿಸುವ ಅಭಿಯಾನವೂ ಜನಪ್ರಿಯವಾಗಿದೆ. ಆದರೆ ಪಟಾಕಿ ಹಚ್ಚಿ ಖುಷಿ ಪಡುವುದು ಇದ್ದೇ ಇದೆ. ಹಲವು ಮಕ್ಕಳು ಸುಟ್ಟುಕೊಂಡು ತಮ್ಮ ದೇಹಕ್ಕೆ ಹಾನಿ ಮಾಡಿಕೊಳ್ಳುವುದು ಕೂಡ ಇದೆ. ಆದುದರಿಂದ ಪೋಷಕರು ಬಹಳಷ್ಟು ಜಾಗರೂಕರಾಗಿರಬೇಕಾಗುತ್ತದೆ.

ದೀಪಾವಳಿ ಹಬ್ಬಕ್ಕೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ ತುಂಬಾ ಇದೆ ಎಂದರೆ ತಪ್ಪಾಗಲಾರದು. ದೀಪಾವಳಿ ಕೇವಲ ಧಾರ್ಮಿಕ ಹಬ್ಬವಲ್ಲ; ಅದು ಸಾಮಾಜಿಕ ಏಕತೆಯ ಸಂಕೇತವೂ ಹೌದು. ಈ ದಿನ ಎಲ್ಲ ವರ್ಗದ ಜನರು ಪರಸ್ಪರ ಭೇಟಿಯಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶತ್ರುತ್ವ , ದ್ವೇಷ, ಬೇಸರಗಳನ್ನು ಮರೆಯುವ ದಿನ ಇದಾಗಿದೆ. ಜನರು ಪರಸ್ಪರ ಸಿಹಿ ಹಂಚಿಕೊಳ್ಳುವುದರಿಂದ ಹೃದಯಗಳಲ್ಲಿ ಸ್ನೇಹ ಮತ್ತು ಪ್ರೀತಿಯ ಬೆಳಕು ಬೆಳಗುತ್ತದೆ. ಬೆಳಕು ಅಂಧಕಾರವನ್ನು ಹೊಡೆದೋಡಿಸುತ್ತದೆ. ಸಾಮಾಜಿಕ ಬಾಂಧವ್ಯ ಹೆಚ್ಚಿಸುತ್ತದೆ.

ವ್ಯಾಪಾರ ಕ್ಷೇತ್ರದಲ್ಲಿಯೂ ದೀಪಾವಳಿಗೆ ವಿಶೇಷ ಸ್ಥಾನವಿದೆ. ಹೊಸ ಹಣಕಾಸು ವರ್ಷವನ್ನು ಪ್ರಾರಂಭಿಸಲು ವ್ಯಾಪಾರಿಗಳು ಲಕ್ಷ್ಮೀ ಪೂಜೆ ಮಾಡುತ್ತಾರೆ. ಅನೇಕರು ಹೊಸ ಖಾತೆ ಪುಸ್ತಕಗಳನ್ನು ತೆರೆದಿಡುತ್ತಾರೆ. ಹೀಗಾಗಿ ದೀಪಾವಳಿ ಆರ್ಥಿಕ ಚಟುವಟಿಕೆಗೆ ಹೊಸ ಉತ್ಸಾಹ ನೀಡುವಲ್ಲಿ ಸಹಕರಿಸುತ್ತದೆ. ವ್ಯಾಪಾರಿಗಳು ತಮ್ಮ ಅಂಗಡಿ ಪೂಜೆ ಮಾಡಿ ಸಿಹಿ ಹಂಚುತ್ತಾರೆ. ಕೆಲವರು ತಮ್ಮ ಗಾಡಿಗಳ ಪೂಜೆಯನ್ನು ಆಯುಧ ಪೂಜೆಯ ದಿನ ಮಾಡದೇ ಇದ್ದರೆ ದೀಪಾವಳಿಯ ದಿನ ಮಾಡುತ್ತಾರೆ.

ದೀಪಾವಳಿ ಹಬ್ಬದಿಂದ ನಾವೆಲ್ಲಾ ಹಲವಾರು ಪಾಠಗಳನ್ನು ಕಲಿಯಬಹುದು ಮತ್ತು ಹಲವಾರು ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ದೀಪಾವಳಿಯ ನಿಜವಾದ ಅರ್ಥ ಅಂಧಕಾರವನ್ನು ತೊರೆದು ಬೆಳಕನ್ನು ಮನೆ, ಮನಗಳಲ್ಲಿ ಬೆಳಗುವುದು ಇದೇ ಆಗಿದೆ. ಇಲ್ಲಿ “ಅಂಧಕಾರ” ಅಜ್ಞಾನ, ಅಹಂಕಾರ, ದುರಾಸೆ ಮತ್ತು ಪಾಪದ ಸಂಕೇತ. “ಬೆಳಕು” ಎಂದರೆ ಜ್ಞಾನ, ಸತ್ಯ, ಧರ್ಮ ಮತ್ತು ಪ್ರೀತಿ. ಈ ಹಬ್ಬವು ನಮ್ಮೊಳಗಿನ ದುರಾಸೆ ಮತ್ತು ಅಹಂಕಾರವನ್ನು ನಾಶಮಾಡಿ, ದಯೆ, ಸಹಾನುಭೂತಿ, ಪ್ರಾಮಾಣಿಕತೆ ಮತ್ತು ಸಹಕಾರದ ಮೌಲ್ಯಗಳನ್ನು ಬೆಳೆಸುವಂತೆ ಪ್ರೇರೇಪಿಸುತ್ತದೆ.

ದೀಪಾವಳಿಯಲ್ಲಿ ನಮಗೆ ನೆನಪಿಸುವುದು ಏನೆಂದರೆ ಕಾರ್ಕಳ ತಾಲೂಕಿನ ಕೆಲವು ಹಳ್ಳಿಗಳ ಕಡೆಗೆ ದೀಪಾವಳಿಯ ಮೂರು ದಿನಗಳು ಕೂಡಾ ಉದ್ದಿನ ದೋಸೆ ಮಾಡುವ ಕಾರ್ಯಕ್ರಮ. ಯಾರ ಮನೆಗೆ ಹೋದರೂ ಉದ್ದಿನ ದೋಸೆ. ಒಂದು ಕಾಲದಲ್ಲಿ ಜನ ಏನೂ ಇಲ್ಲದಾಗ ಅದನ್ನು ಅಭ್ಯಾಸ ಮಾಡಿಕೊಂಡಿರಬಹುದು. ಮತ್ತು ಎಲ್ಲರ ಮನೆಯ ಮಕ್ಕಳು ಇತರ ಮನೆಯ ಊಟದ ಬಗ್ಗೆ ಆಸೆ ಪಡಬಾರದು ಎಂಬ ಹಿರಿಯರ ಜ್ಞಾನ ಕೂಡಾ ಇರಬಹುದೇನೋ. ಅಲ್ಲದೆ ಹಲವು ಕಡೆ ಒಬ್ಬಟ್ಟು ಊಟ ಕೂಡಾ ಇದೆ. ಹಬ್ಬದೂಟ! ಹಲವಾರು ಸಿಹಿ ತಿಂಡಿಗಳು, ತಿಂದಷ್ಟು ಸಾಲದು, ಮುಗಿಯದ ರುಚಿಕರ ಅನುಭವ! ನಮ್ಮೊಳಗಿನ ಬೆಳಕನ್ನು ಹುಡುಕಿ ಅದನ್ನು ಹಂಚಿಕೊಳ್ಳಿ ಎಂಬ ಸಂದೇಶ ಹೊತ್ತು ದೀಪಾವಳಿ ಬರುತ್ತದೆ. ನಮ್ಮ ಮನಸ್ಸು ಶುದ್ಧವಾಗಿದ್ದರೆ, ನಮ್ಮ ಸುತ್ತಲೂ ಎಲ್ಲೆಡೆ ಬೆಳಕು ತೋರುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಭಾವನೆ ಕೂಡ.

ಪರಿಸರ ಸ್ನೇಹಿ ದೀಪಾವಳಿ ಇತ್ತೀಚಿನ ಕೂಗು.
ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳ ಬಳಕೆಯಿಂದ ಉಂಟಾಗುವ ಧ್ವನಿ ಮತ್ತು ವಾಯು ಮಾಲಿನ್ಯದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಶಬ್ದದಿಂದ ವೃದ್ಧರು, ಪ್ರಾಣಿಗಳು ಮತ್ತು ಮಕ್ಕಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನಾವು “ಹಸಿರು ದೀಪಾವಳಿ” ಆಚರಿಸುವ ಪ್ರಯತ್ನ ಮಾಡಬೇಕು. ಪಟಾಕಿಗಳ ಬದಲು ಮಣ್ಣಿನ ದೀಪಗಳನ್ನು ಬೆಳಗಿಸಿ, ಹೂವಿನ ಅಲಂಕಾರ ಮಾಡುವುದು, ಮರ ನೆಡುವುದು, ಅಗತ್ಯವಿಲ್ಲದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಮೂಲಕ ನಾವೂ ಪ್ರಕೃತಿಯ ಹಬ್ಬದಲ್ಲಿ ಪಾಲ್ಗೊಳ್ಳಬಹುದು.

ದೀಪಾವಳಿ ಕೇವಲ ಬೆಳಕಿನ ಹಬ್ಬವಲ್ಲ, ಅದು ಜೀವನದ ಉತ್ಸಾಹದ ಸಂಕೇತವೂ ಹೌದು. ಇದು ನಮಗೆ ಕತ್ತಲೆಯಲ್ಲೂ ಬೆಳಕನ್ನು ಹುಡುಕುವ ಧೈರ್ಯ ನೀಡುತ್ತದೆ. ನಮ್ಮ ಮನಸ್ಸು, ಮನೆ, ಸಮಾಜ ಮತ್ತು ದೇಶವನ್ನು ಶುದ್ಧಗೊಳಿಸಲು ಪ್ರೇರಣೆ ನೀಡುತ್ತದೆ. ಪ್ರತಿ ದೀಪವೂ ಒಬ್ಬ ಮಾನವನ ಒಳಗಿನ ದಯೆಯ, ಜ್ಞಾನದ ಮತ್ತು ಪ್ರೀತಿಯ ಸಂಕೇತವಾಗಿದೆ.
ಹೀಗಾಗಿ, ದೀಪಾವಳಿಯ ನಿಜವಾದ ವಿಶೇಷತೆ ಬೆಳಕು ಮತ್ತು ಸಂತೋಷವನ್ನು ಹಂಚಿಕೊಳ್ಳುವುದರಲ್ಲಿ ಇದೆ. ನಾವು ಎಲ್ಲರೂ ಸೇರಿ ಪರಿಸರ ಸ್ನೇಹಿ, ಶಾಂತಿಯುತ ಮತ್ತು ಸಂತೋಷಭರಿತ ದೀಪಾವಳಿಯನ್ನು ಆಚರಿಸೋಣ ಅಲ್ಲವೇ .ನೀವೇನಂತೀರಿ?

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page