
ನವದೆಹಲಿ: ದೀಪಾವಳಿ ಹಬ್ಬಕ್ಕೆ ಸಿಡಿಸುವ ಪಟಾಕಿಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಅನ್ನುವ ಕಾರಣಕ್ಕೆ ಈ ಬಾರಿ ಪ್ರಮುಖವಾಗಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವ ಕಾರಣ ಪಟಾಕಿ ನಿಷೇಧ ಮಾಡಲಾಗಿದೆ.
ಇದೀಗ ದೆಹಲಿ ಸೇರಿದಂತೆ ರಾಜಧಾನಿ ವ್ಯಾಪ್ತಿ ರಾಜ್ಯಗಳ ಪರವಾಗಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಎಂಬವರು ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ರಾಜ್ಯಗಳು ಕನಿಷ್ಠ 2 ದಿನ ಮಕ್ಕಳು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದೆ.
ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಬಿಆರ್ ಗವಾಯಿ ಮುಂದೆ ಮನವಿ ಮಾಡಿದ ತುಷಾರ್ ಮೆಹ್ತ ‘ಕನಿಷ್ಠ ಮಕ್ಕಳಿಗೆ ಹಸಿರು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡದ ಹಸಿರು ಪಟಾಕಿ ಮೂಲಕ ಕನಷ್ಠ 2 ದಿನ ಮಕ್ಕಳು ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು’ ಎಂದು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಕೇವಲ 2 ದಿನ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಬೇಕು. ಇದು ಮಕ್ಕಳು ತಮ್ಮ ಹಬ್ಬ ಆಚರಿಸಿ ಸಂಭ್ರಮಿಸಲು ಅವಕಾಶ ಕೊಡಬೇಕು. ಕೆಲ ನಿರ್ಬಂಧನೆ ಮೂಲಕ ಅವಕಾಶ ನೀಡಬೇಕು. ಈ ಕುರಿತು ಸರ್ಕಾರಗಳು ರೂಪುರೇಶೆ ಸಿದ್ದಪಡಿಸಿ ಅದರಂತೆ ಕನಿಷ್ಠ ಸಮಯಕ್ಕೆ ಪಟಾಕಿ ಸಿಡಿಸಿ ಹಬ್ಬ ಆಚರಿಸಲು ಅವಕಾಶ ಕೊಡಿ ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದಾರೆ.






















































