
ಕಾರ್ಕಳ: ತಾಲೂಕಿನ ಬೈಲೂರು ಗ್ರಾಮದ ಜಾರ್ಕಳ ಎಂಬಲ್ಲಿ ಅ. 9ರಂದು ಶೆಡ್ ಕಟ್ಟುವ ಕಾಮಗಾರಿ ಸಂದರ್ಭದಲ್ಲಿ ನೀರು ತುಂಬಿದ ಟ್ಯಾಂಕ್ ಏಕಾಏಕಿ ಕೆಲಸ ಮಾಡುತ್ತಿದ್ದ ಮೇಸ್ತ್ರಿಯೊಬ್ಬರ ಮೇಲೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇರ್ವತ್ತೂರು ನಿವಾಸಿ ಕಾರ್ಕಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಪ್ರಮೀಳಾ ಎಂಬವರ ಪತಿ ಆನಂದ (52) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೇಸ್ತ್ರಿ ಕೆಲಸಗಾರರಾದ ಆನಂದ ಹಾಗೂ ಪರ್ಕಳದ ದಯಾನಂದ ಎಂಬುವವರು ಹಲೋ ಬ್ಲಾಕ್ ನಿಂದ ಹೊಸದಾಗಿ ಶೆಡ್ ಕಟ್ಟುತ್ತಿದ್ದು ಈ ವೇಳೆ ಶೆಡ್ ನಿರ್ಮಾಣದ ಪಕ್ಕದಲ್ಲಿದ್ದ ಹಳೆಯದಾದ ಕಬ್ಬಿಣದ ಸ್ಟ್ಯಾಂಡ್ ಮೇಲೆ ಇರಿಸಿದ್ದ ಸುಮಾರು 2000 ಲೀಟರ್ ಸಾಮರ್ಥ್ಯದ ನೀರು ತುಂಬಿದ ಟ್ಯಾಂಕ್ ಏಕಾಏಕಿ ದಯಾನಂದ, ಆನಂದ ಮತ್ತು ಜಾಗದ ಮಾಲೀಕ ಉಮೇಶ್ ಅವರ ಮೇಲೆ ಕುಸಿದು ಬಿದ್ದಿದ್ದು ಈ ಪೈಕಿ ಆನಂದ ಎಂಬವರ ಮೇಲೆ ಟ್ಯಾಂಕ್ ಹಾಗೂ ಕಬ್ಬಿಣದ ಸ್ಟ್ಯಾಂಡ್ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ದಯಾನಂದ ಅವರ ಕಾಲಿನ ಮೂಳೆ ಮುರಿದಿದ್ದು ಉಮೇಶ್ ಅವರಿಗೆ ತಲೆಗೆ ಗಾಯವಾಗಿದೆ.
ಗಾಯಾಳುಗಳನ್ನು ತಕ್ಷಣವೇ ಬೈಲೂರು ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದ್ದು ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















































