
ಕಾಂತರಾ ಚಾಪ್ಟರ್ 1 ಸಿನಿಮಾವು ಅದ್ಭುತ ಯಶಸ್ವಿಯೊಂದಿಗೆ ಸಾಗುತ್ತಿದ್ದು ಆದರೆ ದೈವದ ವೇಷ ಹಾಕೋದು, ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರಿಂದ ಸಿನಿಮಾ ತಂಡಕ್ಕೆ ತಲೆನೋವು ತಂದಿದೆ. ಹೀಗಾಗಿ ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ದೈವದ ವೇಷಗಳನ್ನ ತೊಟ್ಟು ಚಿತ್ರಮಂದಿರಕ್ಕೆ ಬಂದು ಅಲ್ಲಿ ಹುಚ್ಚು ಹುಚ್ಚಾಗಿ ನರ್ತಿಸೋದು, ಸಿನಿಮಾ ನೋಡ್ತಾ ಮೈಮೇಲೆ ದೈವ ಆವಾಹನೆ ಆದವರಂತೆ ನಟಿಸೋದು ದಿನೇ ದಿನೇ ಜಾಸ್ತಿಯಾಗುತ್ತಿದ್ದು ಸೋಷಿಯಲ್ ಮಿಡಿಯಾ ತುಂಬಾ ಇಂಥಾ ಅನೇಕ ವಿಡಿಯೋಗಳು ವೈರಲ್ ಆಗಿವೆ.
ಕಾಂತಾರ ಚಾಪ್ಟರ್-1ನಲ್ಲಿ ದೈವಾರಾಧನೆ, ದೈವ ಆವಾಹನೆ ದೃಶ್ಯಗಳಿವೆ. ಇವುಗಳನ್ನ ಸೂಕ್ತ ಹಿರಿಯರ, ಮಾರ್ಗದರ್ಶಕರ ಸಲಹೆ ಪಡೆದೇ ಮಾಡಲಾಗಿದೆ. ಇವುಗಳನ್ನ ಅನುಕರಿಸಬೇಡಿ ಅಂತ ಸಿನಿತಂಡ ಟೈಟಲ್ ಕಾರ್ಡ್ನಲ್ಲೇ ಎಚ್ಚರಿಸಿದೆ. ಆದ್ರೆ ಜನ ಮಾತ್ರ ಮತ್ತೆ ಸಿನಿಮಾ ನೋಡಿ ಹುಚ್ಚಾಟಗಳನ್ನ ಮಾಡ್ತಾ ಇದ್ದಾರೆ.
ಆದರೆ ಇನ್ಮುಂದೆ ಯಾವುದೇ ಚಿತ್ರಮಂದಿರಗಳಲ್ಲಿ ಅಥವಾ ಸಭೆ, ಸಮಾರಂಭಗಳಲ್ಲಿ ಇಂಥಾ ದೈವ ಆವಾಹನೆ, ಅನುಕರಣೆ ಮಾಡಿದ್ದು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ತಿವಿ ಅಂತ ಕಾಂತಾರ ಟೀಂ ಬಹಿರಂಗವಾಗಿ ಎಚ್ಚರಿಸಿದೆ. ಸಿನಿಮಾ ನೋಡಿ ಎಂಜಾಯ್ ಮಾಡಿ.. ಆದ್ರೆ ಇಂಥಾ ಹುಚ್ಚಾಟ ಆಡಬೇಡಿ ಎಂದು ಚಿತ್ರತಂಡ ಎಚ್ಚರಿಕೆ ನೀಡಿದೆ.






















































