ಭಾಗ 3೦9
ಭರತೇಶ್ ಶೆಟ್ಟಿ ,ಎಕ್ಕಾರ್

ಶ್ರೀಕೃಷ್ಣ ಧರ್ಮರಾಯನನ್ನು ಕಂಡು ಅಲ್ಲಿಗೆ ಎಲ್ಲರನ್ನೂ ಕರೆಸಿಕೊಂಡು ಹಸ್ತಿನಾವತಿಯಲ್ಲಿ ನಡೆದ ವಿಚಾರಗಳೆಲ್ಲವನ್ನೂ ಸವಿವರವಾಗಿ ನಿರೂಪಿಸಿದನು. ಸಂಧಾನಕ್ಕಾಗಿ ಹಿರಿಯರಾದ ಭೀಷ್ಮ, ದ್ರೋಣ ವಿದುರಾದಿಗಳ ಪ್ರಯತ್ನ, ಋಷಿವರ್ಯರ ಹಿತನುಡಿಗಳು ಯಾವುದೂ ದುರ್ಯೋಧನನಿಗೆ ಸಹಮತವಾಗದೆ, ತಾನೂ ಪ್ರಾಮಾಣಿಕವಾಗಿ ಯತ್ನಿಸಿ ನಿನ್ನ ಅಪೇಕ್ಷೆಯಂತೆ ಕೇವಲ ಐದು ಗ್ರಾಮಗಳನ್ನಾದರು ನೀಡುವಂತೆ ಕೇಳಿಕೊಂಡರೂ ಒಪ್ಪದೆ ತನ್ನನ್ನು ಬಂಧಿಸಲು ಮುಂದಾದ ಕೌರವನ ಉದ್ದಟತನದ ನಡೆಯನ್ನು ವಿವರಿಸಿದನು. ಹೀಗೆ ತಾನು ಸಾಮ, ದಾನ, ಭೇದೋಪಾಯಗಳಿಂದ ಕೌರವನನ್ನು ಒಪ್ಪಂದಕ್ಕೆ ಒಡಂಬಡುವಂತೆ ಮಾಡುವ ಸರ್ವ ಪ್ರಯತ್ನವನ್ನೂ ಮಾಡಿದ ರೀತಿಯನ್ನು ವಿಸ್ತರಿಸಿ ಹೇಳಿದನು. “ಧರ್ಮರಾಯ, ಯಾರು ಏನು ಹೇಳಿದರೂ ದುರ್ಯೋಧನ ದಾರಿಗೆ ಬರುವಂತೆ ಕಾಣದಾಗ ದಂಡ ಪ್ರಯೋಗವೊಂದೆ ಉಳಿದಿರುವ ದಾರಿಯಾಗಿ ಉಳಿದಿದೆ. ಈಗ ಯುದ್ದವೇ ಅನಿವಾರ್ಯವಾಗಿದೆ. ಆದರೆ ಈ ಪ್ರಕರಣದಿಂದ ನಾವು ದೋಷಮುಕ್ತರಾದೆವು. ಲೋಕಾಪವಾದದ ಭಯ ಇನ್ನು ನಮಗಿಲ್ಲ. ಆ ಪಾಪಿಯನ್ನು ಅವನ ಪಾಪವೇ ನಾಶ ಮಾಡುತ್ತದೆ. ಆ ಕುರಿತು ನಾವಿನ್ನು ಚಿಂತಿಸುವುದು ಅನಗತ್ಯ. ಯುಧಿಷ್ಟಿರಾ! ನಿಮ್ಮೈವರ ಮಾತೆ ಕುಂತಿಯನ್ನು ಕಂಡು ನಿಮ್ಮ ಕ್ಷೇಮ ವಾರ್ತೆ ತಿಳಿಯಪಡಿಸಿದ್ದೇನೆ. ಸಂಧಾನ ಪ್ರಯತ್ನದ ಪರಿಣಾಮವನ್ನು ಕೇಳಿ ತಿಳಿದ ಆಕೆ, ಯುದ್ದವನ್ನು ಮಾಡಿ ಶತ್ರುಗಳನ್ನು ನಾಶ ಪಡಿಸಿ ರಾಜ್ಯವನ್ನು ಪಡೆಯುವುದು ತನ್ನ ಮಕ್ಕಳಿಗೆ ಕರ್ತವ್ಯವೆಂದೂ, ಅದೇ ಕ್ಷಾತ್ರ ಧರ್ಮವೆಂದೂ, ವಿದುಲೆ ಎಂಬಾಕೆಯ ಕಥೆಯನ್ನು ಹೇಳುವಂತೆ ತಿಳಿಸಿದ್ದಾಳೆ. ವಿದುಲೆ ರಣ ಕ್ಷೇತ್ರದಿಂದ ಸೋತು ಹೇಡಿಯಾಗಿ ಓಡಿ ಬಂದಿದ್ದ ಮಗನನ್ನು ಜರೆದು ನಿಂದಿಸಿ, ಮತ್ತೆ ಯುದ್ದಕ್ಕೆ ಪ್ರೇರೆಪಿಸಿ ಹುರಿದುಂಬಿಸಿ ಕಳುಹಿಸಿದಳು. ಪರಿಣಾಮ ಯುಕ್ತಿಯಿಂದ ಸಾಮರ್ಥ್ಯ ವೃದ್ಧಿಸಿ ಜಯವನ್ನು ಪಡೆದನು. ಈ ಮಹತ್ತರವಾದ ” ಜಯ” ಎಂಬ ಪುಣ್ಯಪ್ರದ ಕಥೆಯನ್ನು ಮತ್ತು ಅದರ ಸಂದೇಶವನ್ನು ತನ್ನ ಮಕ್ಕಳಿಗೆ ಹೇಳುವಂತೆ ಅಪ್ಪಣೆ ಮಾಡಿದ್ದಾಳೆ. ಈ ಕಥೆಯನ್ನು ಕೇಳುವುದರಿಂದ ಕಾರ್ಯ ಸಿದ್ದಿಯೂ, ಯುದ್ದ ಜಯವೂ ಆಗುತ್ತದೆ. ಸ್ಪೂರ್ತಿದಾಯಕವಾದ ಈ ಕಥೆಯನ್ನು ನನಗೆ ಆಕೆಯೇ ಹೇಳಿ ನಿಮಗೆ ತಿಳಿಸುವಂತೆ ಹೇಳಿದ್ದಾಳೆ. ಇನ್ನು ನಮಗೆ ಯೋಚನೆ ಮಾಡಿ ನಿರ್ಣಯಿಸಲು ಏನೂ ಉಳಿದಿಲ್ಲ. ಯುದ್ದವೇ ಆಗಲಿ. ಈ ಯುದ್ದ ಧರ್ಮ ಮತ್ತು ಅಧರ್ಮಗಳ ನಡುವೆ ಸಾಗಲಿದ್ದು, ಧರ್ಮಾತ್ಮರು ಗೆಲ್ಲಲಿದ್ದಾರೆ. ಇನ್ನು ನಾವು ರಣಕ್ಷೇತ್ರವಾದ ಕುರುಕ್ಷೇತ್ರದೆಡೆ ಹೊರಡೋಣ” ಎಂದು ನುಡಿದನು.
ಕೃಷ್ಣ ಮಾತು ಕೇಳಿ ಅಲ್ಲಿದ್ದ ಎಲ್ಲರೂ ರಣೋತ್ಸಾಹದಿಂದ ಧರ್ಮರಾಯನಿಗೆ ಜಯವಾಗಲಿ ಎಂದು ಘೋಷಣೆ ಕೂಗತೊಡಗಿದರು. ಕೃಷ್ಣನೂ ಈ ಉದ್ಘೋಷದಿಂದ ಸಂತುಷ್ಟನಾಗಿ ವೀರಸೇನೆಯನ್ನು ಪ್ರೋತ್ಸಾಹಿಸುತ್ತಾ, ಹೊಗಳಿ ಹುರಿದುಂಬಿಸಿದನು.
ವಾಸುದೇವ ಕೃಷ್ಣನ ನಿರ್ದೇಶನದಲ್ಲಿ ಪಾಂಡವರು ಯುದ್ದ ಸನ್ನದ್ದರಾಗತೊಡಗಿದರು. ದ್ರುಪದ, ಶಿನಿ, ದೃಷ್ಟಕೇತು, ಮಾಗಧ ಪುತ್ರ ಸಹದೇವ, ವಿರಾಟ, ಶಿಖಂಡಿ ಹೀಗೆ ವೀರಾಧಿವೀರರೂ ಏಳು ಅಕ್ಷೋಹಿಣಿ ಸೇನೆಯೂ ನಿಯತವಾಗಿ ಸನ್ನಿಹಿತವಾಯಿತು. ದ್ರುಪದ ಪುತ್ರ ದೃಷ್ಟದ್ಯುಮ್ನ ಪಾಂಡವ ಪಕ್ಷದ ಸೇನಾಧಿಪತಿಯಾಗಿ ನಿಯುಕ್ತನಾದನು. ಭೀಮಸೇನನು ಸೈನ್ಯ ಸಂರಕ್ಷಣೆಯ ಜವಾಬ್ದಾರಿ ಪಡೆದನು.
ಸಕಲ ಶಸ್ತ್ರ ಅಸ್ತ್ರ ಸಂಚಯದೊಂದಿಗೆ ಸಿದ್ಧವಾದ ಪಾಂಡವ ಸೇನೆ ಸಮಾವೇಶಗೊಳ್ಳತೊಡಗಿತು. ಮುಂಚೂಣಿಯಲ್ಲಿ ಗದಾಧಾರಿ ಭೀಮಸೇನ, ಜೊತೆಯಲ್ಲಿ ಕವಚಧಾರಿಗಳಾಗಿ ನಕುಲ ಸಹದೇವ, ಅಭಿಮನ್ಯು, ದೃಷ್ಟದ್ಯುಮ್ನರು ನಿಂತರು. ನಂತರ ಪ್ರಬದ್ಧಕರೂ, ಪಾಂಚಾಲರೂ ಅವರನ್ನು ಹಿಂಬಾಲಿಸಿದರು. ರಥಗಳು, ಆನೆ, ಕುದುರೆ, ಪದಾತಿ, ಕಾಳಾಲು ಸೇನೆ, ಯುದ್ದ ಸಾಮಾಗ್ರಿಗಳನ್ನು ತುಂಬಿಕೊಂಡ ಬಂಡಿ, ಆಹಾರ ಸಾಮಾಗ್ರಿಗಳು, ಬೊಕ್ಕಸಗಳು ಕುದುರೆ ಆನೆಗಳ ಹುಲ್ಲು -ಆಹಾರಗಳು, ಪರಿಚಾರಕರು, ವೈದ್ಯರು, ಜೊತೆಯಲ್ಲಿ ಅಂತಃಪುರದ ದಾಸಿಯರು, ಸ್ತ್ರೀಯರು – ಉಚಿತವನ್ನು ಅರಿತು ಸೇರಿಕೊಂಡರು. ಸಂರಕ್ಷಣಾ ಸೈನ್ಯ ಸುತ್ತುವರಿದು ಸಿದ್ಧವಾಯಿತು.
ಧರ್ಮರಾಜನು ಬ್ರಾಹ್ಮಣರನ್ನು ಕರೆಸಿಕೊಂಡು ಗೋ, ಭೂಮಿ, ಹಿರಣ್ಯಾದಿಗಳನ್ನು ದಾನಮಾಡಿದನು. ಆ ನಂತರ ಸರ್ವಾಲಂಕಾರ ಭೂಷಿತನಾದ ಶ್ರೀಕೃಷ್ಣನಿಗೆ ವಂದಿಸಿ ತಾನೂ ತನ್ನ ರಥವೇರಿದನು. ಕೇಕಯರು, ದೃಷ್ಟಕೇತು, ಅಭಿಭೂ, ಶ್ರೇಣಿಮಂತ, ವಸುದಾನ ಮೊದಲಾದ ವೀರಾಗ್ರಣಿಗಳು ಧರ್ಮರಾಯನ ಬೆಂಗಾವಲಿಗರಾಗಿ ಸುತ್ತುಗಟ್ಟಿ ಹೊರಟರು. ಸುಧರ್ಮ, ವಿರಾಟ, ಕುಂತಿಭೋಜ, ದೃಷ್ಟದ್ಯುಮ್ನನ ಮಕ್ಕಳು, ಹಿಂಭಾಗದ ಸೇನಾರಕ್ಷಕರಾಗಿ ಸೇರಿಕೊಂಡರು. ಚೇಕಿತಾನ, ಸಾತ್ಯಕಿ, ಮೊದಲಾದ ವಿಕ್ರಮಿಗಳು ಚತುರಂಗ ಸೇನೆಯ ಹೊರಭಾಗದಲ್ಲಿ ಸಂರಕ್ಷಕರಾಗಿ ಸಿದ್ಧರಾದರು. ಪ್ರತಿ ಐವತ್ತು ಬಿಲ್ಲಂತರ ದೂರದಲ್ಲಿ ಅಶ್ವಾರೋಹಿಗಳಾದ ವೀರ ಸೈನಿಕರು ಆವೃತರಾಗಿ ಸನ್ನಿಹಿತರಾದರು. ಈ ಮಹಾ ಸೇನಾಸಾಗರದ ಮಧ್ಯ ಭಾಗದಲ್ಲಿ ಗಾಂಡೀವ ಧನುರ್ಧಾರಿಯಾದ ಅರ್ಜುನ ಅಗ್ನಿದತ್ತವಾದ ದಿವ್ಯರಥಾರೂಢನಾಗಿ ಸನ್ನದ್ಧನಾದನು. ರಥಾಗ್ರದ ಧ್ವಜದಲ್ಲಿ ಹನುಮಂತನು ಉಪಸ್ಥಿತನಾದನು. ಶ್ರೀಕೃಷ್ಣನು ಸ್ವಯಂ ಪಾರ್ಥಸಾರಥಿಯಾಗಿ ವಿರಾಜಮಾನನಾದನು. ಪಾಂಡವ ಸೇನೆ ಪರಿಪೂರ್ಣ ಯುದ್ಧ ಸಿದ್ಧತೆಯೊಂದಿಗೆ ರಣಕ್ಷೇತ್ರದತ್ತ ಹೊರಡಲು ಸನ್ನದ್ಧವಾಗಿದೆ.
ಮುಂದುವರಿಯುವುದು…



















