ಬಡವಾಯಿತು ಕನ್ನಡ ಸರಸ್ವತಿ:ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ
ಶಾಸಕ ವಿ.ಸುನಿಲ್ ಕುಮಾರ್ ಸಂತಾಪ

ಬಡವಾಯಿತು ಕನ್ನಡ ಸರಸ್ವತಿ…
ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರು, ಸರಸ್ವತಿಯ ವರಪುತ್ರರೂ ಆದ ಡಾ.ಎಸ್.ಎಲ್.ಭೈರಪ್ಪ ಅವರು ನಮ್ಮನ್ನು ಅಗಲಿದ್ದಾರೆ. ಇದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಎಂದು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಕಾದಂಬರಿ ಲೋಕದಲ್ಲಿ ಹೊಸ ಮಾರ್ಗವನ್ನೇ ಸೃಷ್ಟಿಸಿದ ಶ್ರೀ ಭೈರಪ್ಪನವರು ಕನ್ನಡದ ಓದುಗ ವರ್ಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದವರು. ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ವಂಶವೃಕ್ಷ, ದೂರ ಸರಿದರು, ನಿರಾಕರಣೆ, ಸಾರ್ಥ, ಮಂದ್ರ, ತಂತು, ಜಲಪಾತ, ಆವರಣ, ಯಾನ, ಮೊದಲಾದ ಕಾದಂಬರಿಗಳು ಕನ್ನಡ ಕಾದಂಬರಿ ಲೋಕಕ್ಕೆ ವಿನೂತನ, ನಿತ್ಯ ನೂತನ. ಮಹಾಭಾರತ ಕಥೆಯನ್ನು ದೃಶ್ಯೀಕರಿಸುವ ರೀತಿ ಅವರು ಬರೆದ ಪರ್ವ ಕಾದಂಬರಿಯಂತೂ ಭಾರತದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದರೆ ಅತಿಶಯೋಕ್ತಿಯಾಗಲಾರದು.ಅವರ ಆತ್ಮಚರಿತ್ರೆ ಭಿತ್ತಿ ಹಾಗೂ ಸತ್ಯ ಮತ್ತು ಸೌಂದರ್ಯ ಕೃತಿಗಳಂತೂ ಮಹಾಮೇರು.
ಭೈರಪ್ಪನವರನ್ನು ಕಳೆದುಕೊಂಡು ಕನ್ನಡ ಸಾರಸ್ವತಲೋಕ ಬಡವಾಗಿದೆ ಎಂಬುದು ಎಷ್ಟು ಸತ್ಯವೋ, ಭೈರಪ್ಪ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂಥ ಹಾಗೂ ಧೀಮಂತಗೊಳಿಸಿದ್ದರು. ಅವರ ಅಗಲಿಕೆಯ ದುಃಖವನ್ನು ಕೋಟ್ಯಂತರ ಓದುಗರು, ವಿಮರ್ಶಕರು, ಸಾಹಿತ್ಯಾಸಕ್ತರು ಹಾಗೂ ಕುಟುಂಬ ವರ್ಗಕ್ಕೆ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮಾಜಿ ಸಚಿವರು ಶಾಸಕರಾದ ವಿ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.






















































