
ಮುಂಬೈ: ಜೂನ್ 12 ರಂದು ನಡೆದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಿದ ವಿಮಾನ ಅಪಘಾತ ತನಿಖಾ ಬ್ಯೂರೊದ ವರದಿ ಸೋರಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವೇ ಮತ್ತೊಂದು ತನಿಖೆ ನಡೆಸಬೇಕೆಂದು ಮೃತ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ತಂದೆ 91 ವರ್ಷದ ಪುಷ್ಕರಾಜ್ ಸಭರ್ವಾಲ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನನ್ನ 56 ವರ್ಷದ ಪುತ್ರ ಮಾನಸಿಕ ಒತ್ತಡದಲ್ಲಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ ಎಂಬ ಅಂಶಗಳು ಸೋರಿಕೆಯಾಗಿದ್ದು ಇದು ಹಲವು ಉಹಾಪೋಹಗಳಿಗೆ ಕಾರಣವಾಗಿದೆ. ವರದಿ ಸೋರಿಕೆಯಿಂದ ನನ್ನ ಮಗನ ಪ್ರತಿಷ್ಠೆಗೆ ಧಕ್ಕೆಯಾಗಿದ್ದು ಕೇಂದ್ರ ಸರ್ಕಾರ ಮತ್ತೊಂದು ತನಿಖೆ ನಡೆಸಬೇಕು ಎಂದು ಅವರು ನಾಗರಿಕ ವಿಮಾನಯಾನ ಕಾರ್ಯದರ್ಶಿ ಮತ್ತು AAIB ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಸಭರ್ವಾಲ್ ಸುಮಾರು 15 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರೆ ತಾಯಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ಎರಡು ಘಟನೆ ನಡೆದ ಬಳಿಕವೂ ಪುತ್ರ ಅಪಘಾತವಿಲ್ಲದೆ 100 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಿದ್ದಾನೆ ಮತ್ತು ಯಾವುದೇ ಅಪಘಾತವನ್ನು ಮಾಡಿಲ್ಲ. ವಿಮಾನ ಹಾರಾಟ ಅನುಭವದಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 12 ರಂದು ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ ನಂತರ AAIB ದುರಂತಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಿರಲಿಲ್ಲ. ತನಿಖೆ ಮುಂದುವರಿದಿದೆ ಎಂದಷ್ಟೇ ಹೇಳಿತ್ತು. ಇದೀಗ ಈ ಪತ್ರದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೋದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.











