
ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇಲ್ಲಿ ಜಿ ಎಸ್ ಬಿ ಹಿತರಕ್ಷಣ ವೇದಿಕೆಯಿಂದ ಓದುವಿಕೆಯಲ್ಲಿ ಮುಂದಿರುವ, ಆರ್ಥಿಕವಾಗಿ ಹಿಂದುಳಿದಿರುವ ಸುಮಾರು ಕಾಲೇಜು ವಿಭಾಗದಿಂದ 20 ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲಾ ವಿಭಾಗದಿಂದ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಎಸ್‌ಬಿ ಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ ಹಾಗೂ ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾದ ಸಾಣೂರು ಶ್ರೀ ನರಸಿಂಹ ಕಾಮತ್ ವಿದ್ಯಾರ್ಥಿಗಳಿಗೆ ವಿತರಿಸಿದರು.
ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಆರ್ ವಿವೇಕಾನಂದ ಶೆಣೈಯವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರಿನಿಂದ ಸರಕಾರಿ ಕೋಟದಲ್ಲಿ ವೈದ್ಯಕೀಯ ಪ್ರವೇಶವನ್ನು ಪಡೆದ ವಿದ್ಯಾರ್ಥಿಯ ವೈದ್ಯಕೀಯ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಆಶ್ವಾಸನೆ ಇತ್ತರು.ಸಾಣೂರು ಶ್ರೀ ನರಸಿಂಹ ಕಾಮತ್ ರವರು ಮಾತನಾಡಿ,ವಿದ್ಯಾರ್ಥಿಗಳು ಪಡೆದಂತಹ ವಿದ್ಯಾರ್ಥಿ ವೇತನ ಸದ್ವಿನಿಯೋಗ ವಾಗಬೇಕೆನ್ನುವಂತಹ ದೃಷ್ಟಿಯಿಂದ ಅದನ್ನು ಸದ್ವಿನಿಯೋಗಿಸಿದವರಿಗೆ ಗೌರವಿಸುವುದಾಗಿ ಹೇಳುತ್ತಾ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಯನ್ನು ಮಾಡುವಂತೆ ಹುರಿದುಂಬಿಸಿದರು .
ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲವಿನಾ ಮೇಲ್ವಿಟಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಚೇತ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಪ್ರೇಮಮ್ಮ ಆರ್ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ವಿಶ್ವನಾಥ ರೈ ಅವರು ನಿರೂಪಿಸಿದ ಕಾರ್ಯಕ್ರಮಕ್ಕೆ ಡಾ. ಸುಮತಿ ಪಿವಂದಿಸಿದರು. ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


































