
ನವದೆಹಲಿ: ದೆಹಲಿ ರಾಜ್ಯ ಸರ್ಕಾರವು ಆದಾಯ ನಷ್ಟ ತಡೆಯಲು ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಹೀಗಾಗಿ ಬಿಯರ್ ಕುಡಿಯುವ ಕಾನೂನು ಬದ್ಧ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಲು ನಿರ್ಧರಿಸಿದೆ.
ದೆಹಲಿ ಸರ್ಕಾರವು ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳಲ್ಲಿ ಈಗಾಗಲೇ ಬಿಯರ್ ಕುಡಿಯುವ ಕಾನೂನುಬದ್ಧ ವಯೋಮಿತಿಯನ್ನ 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ವಯೋಮಿತಿ ಕಡಿಮೆ ಮಾಡುವುದರಿಂದ ಅಕ್ರಮ ಮದ್ಯ ಮಾರಾಟದ ಜೊತೆಗೆ ಬ್ಲ್ಯಾಕ್ ಮಾರ್ಕೆಟ್ ಅನ್ನೂ ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಹೊಸ ಅಬಕಾರಿ ನೀತಿಯ ಕರಡನ್ನು ಸಿದ್ಧಪಡಿಸಲಾಗುತ್ತಿದ್ದು ಇದಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಅಂಗಡಿಗಳನ್ನ ನಡೆಸಲು ಹೈಬ್ರಿಡ್ ಮಾದರಿ ಅನುಸರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಂದರೆ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರಾಟ ನಡೆಯಬೇಕು. ಪ್ರಸ್ತುತ, ದೆಹಲಿಯಲ್ಲಿ ಕೇವಲ 4 ಸರ್ಕಾರಿ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿದ್ದು ಹೀಗಾಗಿ ಸರ್ಕಾರಿ ಮಾರಾಟಗಾರರ ಜೊತೆಗೆ ಖಾಸಗಿ ಸಹಭಾಗಿತ್ವ ತೊಡಗಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.













