
ಬೆಂಗಳೂರು: ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇಕಡ 50ರಷ್ಟು ದಂಡಪಾವತಿಯಲ್ಲಿ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಇದುವರೆಗೂ 40 ಕೋಟಿಗಿಂತ ಹೆಚ್ಚು ದಂಡ ಪಾವತಿಯಾಗಿದ್ದು ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಶೇಕಡ 50ರಷ್ಟು ರಿಯಾಯಿತಿ ಬಳಸಿ ದಂಡ ಪಾವತಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬಳಸುವ ಇನೋವಾ-ಕ್ರಿಸ್ಟಾ ಕಾರಿನ ಮೇಲೆ 2024 ರಿಂದ ಈವರೆಗೆ ಏಳು ಸಂಚಾರ ನಿಯಮಗಳು ಉಲ್ಲಂಘನೆ ಪ್ರಕರಣ ದಾಖಲಾಗಿದ್ದು ಈ ಪೈಕಿ ಆರು ಪ್ರಕರಣಗಳು ಸೀಟ್ ಬೆಲ್ಟ್ ಧರಿಸದೆ ನಿಯಮ ಉಲ್ಲಂಘಿಸಿರುವುದು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿ ಸೆರೆಯಾಗಿದೆ.
ಇದೀಗ ಶೇಕಡ 50ರಷ್ಟು ರಿಯಾಯಿತಿಯ ಅನುಸಾರ ಸಿಎಂ 2,500 ರೂಪಾಯಿ ದಂಡವನ್ನು ಶುಕ್ರವಾರ ಪಾವತಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.