ಭಾಗ 280
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೮೧ ಮಹಾಭಾರತ
ಭೀಮನಂತೂ ರೋಷಾವೇಶದಿಂದ ಆ ಧೃತರಾಷ್ಟ್ರ ಪುತ್ರರನ್ನು ನಿಗ್ರಹಿಸಿದರೆ ಮಾತ್ರ ಶಾಂತಿ ಸ್ಥಾಪನೆ ಸಾಧ್ಯವಾದೀತು ಎಂದನು. ಧರ್ಮರಾಯ ತನ್ನ ತಮ್ಮಂದಿರನ್ನು ಸಂತೈಸಿ ಸಮಾಧಾನ ಪಡಿಸಿದನು. ನಂತರ ಸಂಜಯನನ್ನು ಉದ್ದೇಶಿಸಿ “ನಮ್ಮ ದೊಡ್ಡಪ್ಪನ ಸದ್ಯದ ಸ್ಥಿತಿ, ಅವರ ಅಪೇಕ್ಷೆ ನಮಗೆ ಅರ್ಥವಾಗಿದೆ. ನಾವು ಉದ್ವೇಗಕ್ಕೊಳಗಾಗಿ ವಿವೇಚನೆ ಕಳೆದುಕೊಂಡು ದುಡುಕಲಾರೆವು. ಹಾಗೆಯೆ ಮಹಾರಾಜ ಧೃತರಾಷ್ಟ್ರರು ಅವರ ಮಕ್ಕಳನ್ನು ನಿಯಂತ್ರಿಸುವ ಅಗತ್ಯವಿದೆ. ಶ್ರೀ ಕೃಷ್ಣನ ಬಗ್ಗೆ ಪೂರ್ಣ ವಿಶ್ವಾಸವಿದೆ. ಆತನ ನಿರ್ದೇಶನದಂತೆ ನಾವು ಮುಂದುವರಿಯುವವರಿದ್ದೇವೆ.
ಶ್ರೀ ಕೃಷ್ಣನೇ ನಮಗಾಗಿ ಹಸ್ತಿನಾವತಿಗೆ ಹೋಗಿ, ಭೀಷ್ಮಾದಿ ಹಿರಿಯರ ಜೊತೆ ಸಮಾಲೋಚನೆ ಮಾಡಲಿದ್ದಾನೆ. ಉಭಯ ಪಕ್ಷಗಳಿಗೂ ಕ್ಷೇಮವಾಗ ತಕ್ಕಂತಹ ಸಂಧಿಯನ್ನು ಪ್ರಸ್ತಾವಿಸಲಿದ್ದು, ಒಪ್ಪಿದರೆ ಜಟಿಲ ಸಮಸ್ಯೆ ಪರಿಹೃತವಾಗಿ ಜಗತ್ತಿಗೆ ಶ್ರೇಯಸ್ಸಾಗಲಿದೆ. ಅಲ್ಲೂ ಇತ್ಯರ್ಥವಾಗದಿದ್ದರೆ ಮತ್ತೆ ಶ್ರೀ ಕೃಷ್ಣ ಯಾವ ನೀತಿ ಅನುಸರಿಸುವನೋ ನಾವು ಅದಕ್ಕೆ ಬದ್ದರಾಗುತ್ತೇವೆ. ಖಡ್ಗವಾಗಲಿ ನೀತಿಯಾಗಲಿ ಕೃಷ್ಣ ನಿರ್ಣಯಿಸುವುದಕ್ಕೆ ಸ್ವತಂತ್ರನು. ಅಂದರೆ ಹಸ್ತಿನೆಯಲ್ಲಿ ಸಮಾಲೋಚನೆ ಆದ ಬಳಿಕ ಯುದ್ಧವೋ ಅಥವಾ ಸಂಧಾನವೋ ಎಂಬ ನಿರ್ಣಯ ಕೃಷ್ಣನಿಂದ ಆಗಲಿದೆ” ಎಂದನು. ಧರ್ಮರಾಯನ ಉತ್ತರವನ್ನು ಹಸ್ತಿನೆಗೆ ಒಯ್ಯಲು ಸಿದ್ಧನಾದ ಸಂಜಯ ಎಲ್ಲರಿಗೂ ವಂದಿಸಿ ಹೊರಟನು.
ಇತ್ತ ದೃಷ್ಟದ್ಯುಮ್ನನು ಹಸ್ತಿನೆಯಿಂದ ಶತಾನಂದರು ಕಳುಹಿಸಿದ ಸಂದೇಶದ ವಿವರವನ್ನು ಎಲ್ಲರಿಗೂ ವಿಸ್ತರಿಸಿ ಹೇಳತೊಡಗಿದನು. ಕೌರವರ ಯುದ್ಧಾಸಕ್ತಿ ಅತಿ ಬಲವಾಗಿದೆ. ಸಂಧಾನಕ್ಕೆ ಮನ ಮಾಡುವ ಸಾಧ್ಯತೆ ಕ್ಷೀಣಗೊಂಡಿದೆ. ಹನ್ನೊಂದು ಅಕ್ಷೋಹಿಣಿ ಸೇನೆ ಕೌರವ ಪಕ್ಷದ ಜೊತೆಯಾಗಿದೆ.ವಎಂಬಿತ್ಯಾದಿ ಮಾಹಿತಿ ರವಾನೆಯಾಗಿತ್ತು.
ಶ್ರೀ ಕೃಷ್ಣ ಕೇಳಿಸಿಕೊಂಡು ಪಾಂಡವರಿಗೆ ಸ್ಥೈರ್ಯ ತುಂಬತೊಡಗಿದನು “ಸಂಖ್ಯೆಯ ಲೆಕ್ಕದಲ್ಲಿ ಕೌರವರ ಸೇನಾ ಸಂಗ್ರಹ ಅಧಿಕವಾಗಿದೆ. ಆದರೆ ಅಧರ್ಮಿಗಳ ಪಕ್ಷದ ಸೈನ್ಯ ಎಷ್ಟಿದ್ದರೂ ಧರ್ಮಯುದ್ಧದಲ್ಲಿ ಅಗ್ನಿಗಾಹುತಿಯಾದ ಮಹಾ ಅರಣ್ಯದಂತೆ ಹೊತ್ತಿ ಉರಿದು ಭಸ್ಮವಾಗಲಿದೆ. ಧರ್ಮವೆ ಗೆಲ್ಲುತ್ತದೆ, ಆ ಕುರಿತಾಗಿ ಅನ್ಯಥಾ ವ್ಯಥೆ ಅನಗತ್ಯ” ಎಂದು ಸೂಚ್ಯವಾಗಿ ವಿಶ್ಲೇಷಿಸಿದನು. ಆ ಹೊತ್ತಿಗೆ ಸರಿಯಾಗಿ ಭೀಮಸೇನನ ಪುತ್ರ ಘಟೋತ್ಕಚ ಪಾಂಡವರು ಯುದ್ಧ ಸಿದ್ಧತೆ ಮಾಡುತ್ತಿರುವ ವಿಷಯ ತಿಳಿದು ತನ್ನ ರಾಕ್ಷಸ ವೀರರ ಸೈನ್ಯದೊಂದಿಗೆ ಉಪಪ್ಲಾವ್ಯಕ್ಕೆ ಬಂದು ಸೇರಿದನು. ಭೀಮಸುತನನ್ನು ಕಂಡು ಪಾಂಡವರಿಗೆ ಮಹದಾನಂದ ಆಯಿತು.
ಅತ್ತ ಸಂಜಯನು ಹಸ್ತಿನಾವತಿ ತಲುಪಿ ಧೃತರಾಷ್ಟ್ರನನ್ನು ಕಂಡು ವಂದಿಸಿದ. “ಮಹಾಪ್ರಭು, ಪಾಂಡವರು ಧರ್ಮಿಷ್ಟರು, ಸಹಿಷ್ಣುತೆ, ಸಂವೇದನಾಶೀಲತೆ, ಶೌರ್ಯ, ಸ್ಥೈರ್ಯ, ಧೈರ್ಯ ಎಲ್ಲವೂ ಸಮತೋಲನದಲ್ಲಿದೆ. ಪ್ರಾಮಾಣಿಕರೂ – ವಿಶ್ವಾಸ ಯೋಗ್ಯರೂ ಆದ ಪಾಂಡು ಪುತ್ರರ ಜೊತೆ ಸಂಧಾನವೆ ಒಳಿತು ಎಂಬುವುದು ನನ್ನ ಅನಿಸಿಕೆ. ಸುದೀರ್ಘ ಪ್ರಯಾಣದ ಕಾರಣ ಬಳಲಿರುವೆ. ನೀವು ಅಪ್ಪಣೆಯಿತ್ತರೆ ನಾನು ವಿಶ್ರಾಂತನಾಗುವೆ. ಉಪಪ್ಲಾವ್ಯದ ಸಮಗ್ರ ವಿಚಾರ ನಾಳೆ ರಾಜಸಭೆಯಲ್ಲಿ ನಿವೇದಿಸಿಕೊಳ್ಳುವೆ” ಎಂದು ಮಹಾರಾಜನ ಅನುಮತಿ ಪಡೆದು ತನ್ನ ಮನೆಯತ್ತ ಹೊರಟನು.
ಉಪಪ್ಲಾವ್ಯದಿಂದ ಮರಳಿ ಬಂದ ಸಂಜಯನ ಮಾತುಗಳು ಧೃತರಾಷ್ಟ್ರನನ್ನು ಮತ್ತಷ್ಟು ಆತಂಕ ಗೊಂದಲಕ್ಕೆ ಗುರಿಯಾಗಿಸಿತು. ನಿದ್ದೆಯೂ ಬಾರದೆ, ಮಂತ್ರಿಯಾದ ವಿದುರನನ್ನು ತುರ್ತಾಗಿ ಕರೆಸಿಕೊಂಡನು.
ಬಂದಂತಹ ವಿದುರನನ್ನು ಕುಳ್ಳಿರಿಸಿ “ವಿದುರಾ! ಸಂಜಯ ಉಪಪ್ಲಾವ್ಯದಿಂದ ಮರಳಿ ಬಂದಿದ್ದಾನೆ. ಧರ್ಮರಾಯನ ನಿರ್ಧಾರದ ಕುರಿತಾಗಿ ನಾಳೆ ರಾಜಸಭೆಯಲ್ಲಿ ಹೇಳುತ್ತಾನಂತೆ. ಧರ್ಮರಾಯನ ನಿಲುವು ಏನೋ! ಸುಳಿವೂ ದೊರೆತಿಲ್ಲ. ಮನಸ್ಸು ಬಹಳಷ್ಟು ಕಳವಳಕ್ಕೀಡಾಗಿದೆ. ನಿದ್ದೆಯೂ ಹತ್ತುತ್ತಿಲ್ಲ. ಹಾಗಾಗಿ ನಿನ್ನನ್ನು ಕರೆಸಿಕೊಂಡೆ. ಪ್ರಾಜ್ಞನೂ, ಧರ್ಮಾತ್ಮನೂ ಆಗಿರುವ ನೀನು ವಿವೇಚಿಸಿ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು” ಎಂದನು.
ಮಾತಿಗಾರಂಭಿಸಿದ ವಿದುರ “ಅಣ್ಣಾ! ರಾತ್ರಿಯ ನಿದ್ರೆ ರಾಜನಾದವನಿಗೆ ಬಾರದೆ ಉಳಿದಿದೆ ಎಂದರೆ, ಐದು ಪ್ರಧಾನ ಕಾರಣಗಳಿವೆ. ೧. ಬಲಾಢ್ಯನಾದ ಎದುರಾಳಿ ನಮ್ಮನ್ನು ಆಕ್ರಮಿಸುತ್ತಾನೆ ಎಂಬ ಭಯ ಮನಮಾಡಿದರೆ,. ೨. ಸಂಪತ್ತೆಲ್ಲವೂ ಕೈ ಬಿಟ್ಟು ಹೋಗಿರಬೇಕು/ ಕಳಕೊಂಡಿರಬೇಕು. ೩. ಪರರ ಸಂಪತ್ತನ್ನು ಕಂಡು ಮತ್ಸರಗೊಂಡು ಉರಿಸಿಕೊಂಡಿರಬೇಕು. ೪. ಸ್ವಯಂ ತಾನೇ ಕಳ್ಳನಾಗಿರಬೇಕು. ೫. ಕಾಮಾತುರನಾಗಿ ಇರಬೇಕು. ಅಣ್ಣಾ ಇವುಗಳಲ್ಲಿ ನಿನ್ನ ಅಂತರಂಗದಲ್ಲಿದ್ದು ನಿನ್ನನ್ನು ಜಾಗೃತಗೊಳಿಸಿರುವ ವಿಚಾರ ಯಾವುದು?
ಮುಂದುವರಿಯುವುದು..