ಗೆಳೆಯನಿಂದಲೇ ನವೀನ್ ಪೂಜಾರಿ ಕೊಲೆ
ಬಾರ್‌ನಲ್ಲಿ ಶುರುವಾದ ಜಗಳ, ಕುಂಟಲ್ಪಾಡಿಯಲ್ಲಿ ಕೊನೆ

ಕಾರ್ಕಳ : ಇಂದು ಮುಂಜಾನೆ ನಗರದ ಕುಂಟಲ್ಪಾಡಿ ಎಂಬಲ್ಲಿ ರಸ್ತೆ ಬದಿ ನವೀನ್ ಪೂಜಾರಿ ಎಂಬವರ ಹತ್ಯೆಯಾಗಿದ್ದು ಇದೀಗ ಆತನ ಗೆಳೆಯನೇ ಕೊಲೆಗೈದಿರುವುದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಪದ್ಮಾಂಬಿಕಾ ಬಸ್ ಚಾಲಕ, ಬೆಳ್ತಂಗಡಿ ಮೂಲದ ಪರೀಕ್ಷಿತ್ ಕೊಲೆ ಮಾಡಿದ್ದು, ಆತನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ ನವೀನ್ ಹಾಗೂ ಪರೀಕ್ಷಿತ್ ದೂಪದಕಟ್ಟೆಯಲ್ಲಿರುವ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿರುವ ವೇಳೆ ಪರೀಕ್ಷಿತ್ ಹಾಗೂ ನವೀನ್ ಮಧ್ಯೆ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳ ಆರಂಭವಾಗಿದ್ದು ಬಳಿಕ ಇಬ್ಬರೂ ಬಾರ್‌ನಿಂದ ತೆರಳಿರುತ್ತಾರೆ. ಕೆಲ ಗಂಟೆಗಳ ಬಳಿಕ ನವೀನ್ ಪರೀಕ್ಷಿತ್‌ಗೆ ಕರೆ ಮಾಡಿ ಆನೆಕೆರೆಯಲ್ಲಿನ ಬಾರ್‌ಗೆ ಬರುವಂತೆ ತಿಳಿಸಿದ್ದು, ಹೀಗಾಗಿ ಪರೀಕ್ಷಿತ್ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಪರೀಕ್ಷಿತ್ ತನ್ನ ರಕ್ಷಣೆಗೆಂದು ಚೂರಿಯನ್ನೂ ತನ್ನಲ್ಲಿ ಇಟ್ಟುಕೊಂಡಿದ್ದು ಅವರಿಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದು ಬಳಿಕ ಬಾರ್‌ನಿಂದ ಹೊರಬಂದಿರುತ್ತಾರೆ. ಕುಂಟಲ್ಪಾಡಿ ಎಂಬಲ್ಲಿಗೆ ತಲುಪುವಾಗ ತನ್ನಲ್ಲಿದ್ದ ಚೂರಿಯಿಂದ ಪರೀಕ್ಷಿತ್ ನವೀನ್ ಅವರ ಬೆನ್ನು, ಹೊಟ್ಟೆ, ತೋಳಿನ ಭಾಗಕ್ಕೆ ಇರಿದು ಬಳಿಕ ಪರಾರಿಯಾಗಿರುತ್ತಾನೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನವೀನ್ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉಡುಪಿ ಎಸ್‌ಪಿ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಾವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್‌ಐ ಮುರಳೀಧರ್ ನಾಯ್ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್., ಸೋಕೊ ತಂಡ, ಬೆರಳಚ್ಚು ತಂಡ ಹಾಗೂ ಶ್ವಾನ ದಳ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ನವೀನ್ ಪೂಜಾರಿ ಮೂಲತಃ ಮಂಗಳೂರಿನ ಪಡೀಲ್‌ನವರಾಗಿದ್ದು SJ ಆರ್ಕೇಡ್‌ನಲ್ಲಿ ವಾಸವಾಗಿದ್ದರು. ಈ ಹಿಂದೆ ಬಸ್ ಚಾಲಕರಾಗಿದ್ದ ಅವರು ಬಳಿಕ ಲಾರಿ ಸೇರಿದ್ದು ಇತ್ತೀಚೆಗೆ ಬದಲಿಯಾಗಿ ಮಾತ್ರ ಚಾಲಕರಾಗಿ ಹೋಗುತ್ತಿದ್ದರು ಮತ್ತು ಇದರೊಂದಿಗೆ ಬಡ್ಡಿ ವ್ಯವಹಾರವನ್ನು ನಡೆಸಿಕೊಂಡಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮಂಗಳೂರಿನಲ್ಲಿ ವಾಸವಿದ್ದು, ನವೀನ್ ಮಾತ್ರ ಕಾರ್ಕಳದಲ್ಲೇ ನೆಲೆಸಿದ್ದಾರೆ.