
ಸುಪ್ರೀಂ ಕೋರ್ಟ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈ ಕೋರ್ಟ್ ನಿಂದ ಸಿಕ್ಕಿದ್ದ ಜಾಮೀನನ್ನು ರದ್ದುಗೊಳಿಸಿದ್ದು ಇದೀಗ ಕರ್ನಾಟಕದ ಖ್ಯಾತ ಜ್ಯೋತಿಷ್ಯ ಪ್ರಕಾಶ್ ಅಮ್ಮಣ್ಣಾಯ ಅವರು ದರ್ಶನ್ ಅವರ ಜಾತಕ ವಿಶ್ಲೇಷಣೆ ಮಾಡಿದ್ದಾರೆ.
ಅವರ ಜಾತಕದ ವಿಶ್ಲೇಷಣೆ ಈ ಹಿಂದೆ ಎರಡ್ಮೂರು ಬಾರಿ ನಾನೇ ಮಾಡಿದ್ದೇನೆ. ಪದೇಪದೇ ಪ್ರಸ್ತಾವವೂ ಮಾಡಿದ್ದ ಸಂಗತಿ ಏನೆಂದರೆ, ಅವರ ಜನ್ಮ ಜಾತಕದಲ್ಲಿ ಕರ್ಕಾಟಕದಲ್ಲಿ ಶನಿ ಗ್ರಹ ಇದೆ. ಜಾತಕದ ಆಳವಾದ ವಿಶ್ಲೇಷಣೆ ಅಗತ್ಯವಿಲ್ಲದೆ ಮೇಲ್ನೋಟಕ್ಕೆ ಗಮನಿಸಿಯೇ ಅಕ್ಷರವನ್ನು ಓದಬಲ್ಲ ಹಾಗೂ ಕನಿಷ್ಠ ಜ್ಯೋತಿಷ್ಯ ಶಾಸ್ತ್ರದ ಗ್ರಹಿಕೆ ಇರುವಂಥವರು ಸಹ ಹೇಳಬಹುದಾದದ್ದು ಏನೆಂದರೆ, ಮಂದಸ್ಯ ಮಂದಾಷ್ಟಮ ದುಃಖದಾಯಕ. ಜನ್ಮಜಾತಕದಲ್ಲಿನ ಶನಿಯಿಂದ ಎಂಟನೇ ಸ್ಥಾನಕ್ಕೆ ಶನಿಯು ಬಂದಾಗ ದುಃಖ ತರುತ್ತಾನೆ.
ದರ್ಶನ್ ಗೆ ಜಾತಕ ರೀತಿಯಾಗಿ ಕಳೆದ ಮೇ ತಿಂಗಳಿಂದ ಹಿಡಿತ ಬಿಗಿಯಾಗಿದ್ದು ಯಾವಾಗ ಜುಲೈನಿಂದ ಶನಿಯು ವಕ್ರ ಸ್ಥಿತಿಗೆ ಬಂತೋ ಅಲ್ಲಿಗೆ ಪೂರ್ತಿ ಸಮಸ್ಯೆ ಆವರಿಸಿಕೊಂಡಿತು. ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ದರ್ಶನ್ ಗೆ ಈ ಅವಧಿಯಲ್ಲಿ ಆಗುವ ಖರ್ಚು- ವೆಚ್ಚ, ಶಾರೀರಿಕ ಅಸ್ವಾಸ್ಥ್ಯ ಪದಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲದ್ದು. ದೇಹದಲ್ಲಿ ತ್ರಾಣ ಇಲ್ಲದಷ್ಟು ಸುಸ್ತು, ಜ್ವರ ಬಾಧೆ, ವಿಟಮಿನ್ ಗಳಿಗೆ ಸಂಬಂಧಿಸಿದ ತೊಂದರೆ, ನರಕ್ಕೆ ಸಂಬಂಧಿಸಿದ ತೊಂದರೆ ವಿಪರೀತ ಬಾಧಿಸುತ್ತದೆ. ಇದರ ಆಚೆಗೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಈ ಹಿಂದೆಂದೂ ಕೇಳಿಸಿಕೊಂಡಿರದಂಥ, ಎದುರಿಸದೆ ಇದ್ದಂಥ ಮಾನಸಿಕ ಯಾತನೆ ಆಗುವ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ರಾಹು ಗ್ರಹದ ಪ್ರಭಾವದಿಂದಾಗಿ “ಧರ್ಮಭ್ರಷ್ಟತೆ” ಆರೋಪ ಹಾಗೂ ನಿಜವಾಗಿಯೂ ಧರ್ಮಭ್ರಷ್ಟ ಕಾರ್ಯಗಳನ್ನು ಮಾಡುವಂತೆ ಆಗುತ್ತದೆ.
ಧರ್ಮಭ್ರಷ್ಟತೆ ಎಂದರೆ ಒಂದು ಕೊಲೆ ಆರೋಪದ ಪ್ರಕರಣದಲ್ಲಿ ಇರುವ ವ್ಯಕ್ತಿಯು ಅನುಸರಿಸಬೇಕಾದ “ಧರ್ಮ”ಗಳು ಏನಿರುತ್ತವೆಯೋ ಅದನ್ನು ತಿಳಿದೋ, ತಿಳಿಯದೆಯೋ ಮೀರುತ್ತಾರೆ. ಇದರಿಂದಾಗಿ ಸಮಸ್ಯೆ ಇನ್ನೂ ಬಿಗಡಾಯಿಸಲಿದ್ದು ನವೆಂಬರ್ 28ನೇ ತಾರೀಕಿನ ತನಕ ಇದು ತೀವ್ರತರದ ಸಮಸ್ಯೆಯಾಗಿ ಕಾಡುತ್ತದೆ.
ಇನ್ನು ಅವರ ಜನ್ಮಜಾತಕದ ವಿಶ್ಲೇಷಣೆ ಮಾಡಿದರೆ, ಈಗಿನ ಪರಿಸ್ಥಿತಿ ಏನಿದೆಯೋ ಅವರಿಗೆ ಈ ಪರಿಸ್ಥಿತಿಯ ಅಂದಾಜು ಇರುತ್ತದೆ. ಬಹುತೇಕ ಈ ಸನ್ನಿವೇಶಕ್ಕೆ ಮಾನಸಿಕವಾಗಿ ಸಿದ್ಧರಾಗಿಯೂ ಇರುತ್ತಾರೆ ಅಂತ ಖಚಿತವಾಗಿ ಹೇಳಬಹುದು. ಆದರೆ ಈ ಬಾರಿಯ ಸನ್ನಿವೇಶ ಸ್ವಲ್ಪವಾದರೂ ತಿಳಿಯಾಗಬೇಕು ಅಂತಾದರೆ, ಕನಿಷ್ಠ ಅಕ್ಟೋಬರ್ 18ನೇ ತಾರೀಕು ಬರಬೇಕು ಎಂದು ಹೇಳಿದ್ದಾರೆ.