ಭಾಗ 265
ಭರತೇಶ್ ಶೆಟ್ಟಿ ,ಎಕ್ಕಾರ್

ಇಂದಿನ ತನಕ ಅಗ್ರಮಾನ್ಯರೆನಿಸಿ ಮೆರೆಯುತ್ತಿರುವ ಕೌರವ ಪಾಳಯದ ಷಡ್ರಥ ವಿಕ್ರಮಿಗಳಲ್ಲಿ ಮೇರು ಸದೃಶ ಭೀಷ್ಮರು ಉಳಿದೈದು ಮಂದಿಯ ಅಭಿಮತಗಳನ್ನು ಈ ವರೆಗೆ ಮೌನವಾಗಿಯೆ ಸೈರಿಸಿಕೊಂಡಿದ್ದಾರೆ. ಮನದಲ್ಲಿ ಮೌನವಾಗಿ ತರ್ಕಿಸುತ್ತಿದ್ದಾರೆ, ಗುರು ದ್ರೋಣರು ದುರ್ಯೋಧನಾದಿಗಳು ವಶಪಡಿಸಿರುವ ಗೋವುಗಳ ಸಹಿತ ಹಸ್ತಿನೆಗೆ ಹಿಂದಿರುಗಲಿ ಎಂದಿದ್ದಾರೆ. ಕಲಿ ಕರ್ಣನೊ ಯುದ್ದಾಭಿಲಾಷಿಯಾಗಿ ನಾನೊಬ್ಬನೆ ಅರ್ಜುನನನ್ನು ಎದುರಿಸಿ ಗೆಲ್ಲಬಲ್ಲೆ ಎಂದೆನ್ನುತ್ತಾ, ಗುರು ನಿಂದ್ಯಾ ವಚನಗಳನ್ನಾಡಿ ಅವಿವೇಕ ತೋರುತ್ತಿದ್ದಾನೆ. ಶಾರದ್ವತ ಧೀಮಂತ ಕೃಪಾಚಾರ್ಯರು ಇನ್ನೂ ಭಿನ್ನವಾಗಿ ನಾವು ಆರೂ ಮಂದಿ ಅತಿರಥ ಮಹಾರಥರು ಒಗ್ಗಟ್ಟಾಗಿ ಹೋರಾಡಬೇಕು. ಅರ್ಜುನ ಅಸಾಮಾನ್ಯ ವೀರ ಎಂದು ಬಿಂಬಿಸಿದ್ದಾರೆ. ಗುರುಪುತ್ರ ಬ್ರಾಹ್ಮಣ ಶ್ರೇಷ್ಟ ಅಶ್ವತ್ಥಾಮ, ಕರ್ಣನನ್ನು ಗುರುನಿಂದಾ ಕೃತ್ಯಕ್ಕಾಗಿ ದೂಷಿಸಿ ತಾನು ಧನುರ್ಧಾರಿ ಧನಂಜಯನ ಸಮಕ್ಷಮ ಕಾದಲಾರೆ, ನಿಂತು ಕಾದಾಡಲು ಸಾಧ್ಯವಾದರೆ ಅದು ಆಚಾರ್ಯ ತ್ರಯರಿಗೆ ಮಾತ್ರ. ಅದೂ ಅರ್ಜುನನ ಕೃಪಾಕಟಾಕ್ಷದ ಕೊಡುಗೆಯ ಕರುಣೆಯಿಂದ ಎಂದು ಅಭಿಪ್ರಾಯ ಪ್ರಕಟಿಸಿದ್ದಾನೆ. ದುರ್ಯೋಧನನದ್ದು ತೀರಾ ಭಿನ್ನ ಯೋಚನೆ ಹದಿಮೂರು ವರ್ಷಗಳನ್ನು ಪೂರೈಸದೆ ಅರ್ಜುನ ಪ್ರಕಟನಾದರೆ, ಮರು ವನವಾಸ – ಅಜ್ಞಾತವಾಸ ಅನುಭವಿಸಲಿ. ಪಣವೇ ಹಾಗಿದೆ ಎಂದು ಸಂಭ್ರಮಿಸುತ್ತಿದ್ದಾನೆ. ಇಂತಹ ಅನೇಕ ಮತಗಳನ್ನು ಹೊಂದಿರುವ ಕೌರವ ಸೇನೆ ಒಮ್ಮತವಿಲ್ಲದೆ ಸೋತಾಗಿದೆ. ಪಾರ್ಥ ಪ್ರಹಾರಗೈದು ಸೋಲಿಸಬೇಕಾಗಿಲ್ಲ ಎಂದು ಭೀಷ್ಮಾಚಾರ್ಯರ ತರ್ಕವಾಗಿದೆ.
ಹೀಗೆ ಯೋಚಿಸುತ್ತಾ, ಪ್ರತಿಯೊಬ್ಬರ ಮಾತನ್ನೂ ಕೇಳುತ್ತಿದ್ದ ಭೀಷ್ಮರು, ಗೋ ಕಳ್ಳತನದ ಈ ಅಕಾರ್ಯಕ್ಕೆ ಮನ ಮಾಡಿದ್ದು ತನ್ನ ಮೊಮ್ಮಕ್ಕಳ ನಡುವೆ ನಿಂತು, ಆಗಬಹುದಾದ ಅನಾಹುತ ತಡೆಯುವುದಕ್ಕಾಗಿ. ಕೃಪ, ದ್ರೋಣರೂ ಬರಲು ಒಲ್ಲದ ಮನದಿಂದ ಹಿಂಜರಿದಾಗ ತನಗೂ ಅಸಹನೀಯವಾಗಿದ್ದ ಈ ಕೆಲಸಕ್ಕೆ ಮನಮಾಡಿರುವುದು ಚಂದ್ರವಂಶದ ಉತ್ತರಾಧಿಕಾರಿಗಳ ರಕ್ಷಣೆಯ ಹೊಣೆಹೊತ್ತು. ಸದಾ ಧರ್ಮ ಪಥದಲ್ಲಿ ಸಾಗುತ್ತಾ, ಸಹನೆ ಮೀರದೆ, ಕ್ಷಾತ್ರ ಧರ್ಮ ಒಪ್ಪಿ, ಧರ್ಮವನ್ನು ಅನುಸರಿಸಿ ಪಾಂಡವರು ಬದುಕುತ್ತಿದ್ದಾರೆ. ಅಂತಹ ಸಹನಾ ಮೂರ್ತಿಗಳಾದ ಪಾಂಡವರು ಸಾಮರ್ಥ್ಯವಿದ್ದೂ ಸಹಿಸಿಕೊಂಡು ಈ ಕೌರವ ಸಹೋದರರ ಅಧರ್ಮ, ಅಕಾರ್ಯ, ಅಹಿತ ಕಾರ್ಯಗಳಾದ ಭೀಮನಿಗೆ ವಿಷ ಪ್ರಾಶನ, ಅರಗಿನ ಅರಮನೆ ದಹನ, ಕಪಟ ದ್ಯೂತ, ಕುಲವಧು ದ್ರೌಪದಿಯ ವಸ್ತ್ರಾಪಹಾರ ಯತ್ನ, ಈಗ ವನವಾಸ – ಅಜ್ಞಾತವಾಸ… ಈ ಎಲ್ಲವನ್ನೂ ಮನ್ನಿಸಿದ್ದಾರೆ ಎಂದರೆ, ಭೋರ್ಗರೆವ ಕಡುದುಃಖ – ಕಷ್ಟಜಲ ತುಂಬಿ ಪ್ರವಹಿಸುವ ಮಹಾನದಿಗೆ ಧರ್ಮ ಎಂಬ ಅಣೆಕಟ್ಟು ಕಟ್ಟಿರುವಂತೆ ಆಗಿ ಹೋಗಿದೆ ಅವರ ಮನಸ್ಸು. ಕಟ್ಟಿಟ್ಟ ತಡೆಗಳನ್ನೆಲ್ಲಾ ಕೊಚ್ಚಿ ಧುಮ್ಮಿಕ್ಕಿ ಬರಲಿರುವ ಅರ್ಜುನ ಖಂಡಿತಾ ತನ್ನೊಳಗಿನ ನೋವಿಗೆ ಕಾರಣನಾದ ದುರ್ಯೋಧನನ್ನು ದಂಡಿಸದೆ ಹಿಂದುಳಿಯಲಾರ – ಮಾತ್ರವಲ್ಲ ಸರ್ವ ಬಲ ಸಂಪನ್ನನಾದ ಆತನನ್ನು ಯಾರೂ ತಡೆಡಿಡಲಾರರು. ಹೀಗೆಲ್ಲಾ ಪಾಂಡವರ ಉದ್ವೇಗವನ್ನು ತರ್ಕಿಸುತ್ತಾ, ತನ್ನ ಮನದ ನಿಲುವನ್ನು ಹೇಳತೊಡಗಿದರು.
“ನೀವೆಲ್ಲರೂ ನಿಮ್ಮ ನಿಮ್ಮ ಬುದ್ಧಿಯಂತೆ ಅಭಿಮತ ಪ್ರಕಟಿಸಿದ್ದೀರಿ. ಭಾರಧ್ವಾಜ ಪುತ್ರ ದ್ರೋಣರು ನಿರ್ದೇಶಿಸಿರುವುದು ಸರಿಯಾಗಿಯೇ ಇದೆ. ಇಲ್ಲಿ ಸೇರಿರುವ ಕಾಲು ಭಾಗ ಸೇನೆ ದುರ್ಯೋಧನನ ರಕ್ಷಣೆಗೆ ಇದ್ದು ಉಳಿದವರು ಹಸ್ತಿನೆಗೆ ಹಿಂದಿರುಗಲಿ. ಅದರ ಜೊತೆಯಲ್ಲಿ ಉಳಿದ ಕಾಲು ಅಂಶ ಸೈನ್ಯ ಗೋವುಗಳನ್ನು ಹಸ್ತಿನೆ ಸೇರಿಸಲಿ. ಯಾಕೆಂದರೆ ಇವೆರಡೂ ಈಗ ಬರುವ ಮಧ್ಯಮ ಪಾಂಡವನ ಪ್ರಧಾನ ಗುರಿಯಾಗಿರಲಿದೆ. ಬಾಕಿ ಉಳಿದ ಅರ್ಧ ಸೇನೆ ಇಲ್ಲೇ ಇದ್ದು, ಮುಂಚೂಣಿಯಲ್ಲಿ ಕಲಿ ಕರ್ಣ ಮುನ್ನಡೆಸಲಿ. ಸೇನೆಯ ಮಧ್ಯದಲ್ಲಿ ದ್ರೋಣಾಚಾರ್ಯ, ಎಡ ಭಾಗದಲ್ಲಿ ಗುರುಸುತ ಅಶ್ವತ್ಥಾಮ, ಬಲ ಭಾಗದಲ್ಲಿ ಕೃಪಾಚಾರ್ಯರಿದ್ದು ಯುದ್ದ ಮಾಡಲಿ. ನಾನು ಸೇನೆಯ ಹಿಂಭಾಗದಲ್ಲಿದ್ದು ನಿಮ್ಮೆಲ್ಲರ ರಕ್ಷಣಾ ಕಾರ್ಯ ಮಾಡುತ್ತೇನೆ. ಈ ರೀತಿ ವ್ಯೂಹ ರಚನೆ ಮಾಡಿದರೂ ಬರುವ ಬಲುಭಟ ಗೋವುಗಳನ್ನೂ, ದುರ್ಯೋಧನನ್ನೂ ಹುಡುಕುತ್ತಾ ಮುನ್ನಡೆಯದೆ ಉಳಿಯಲಾರ. ತಡೆದು ನಿಲ್ಲಿಸುವ ಕಾರ್ಯ ನಮ್ಮಿಂದಾಗ಼ಬೇಕಾಗಿದೆ. ಇಂತಹ ದುಸ್ತರ ಕಾರ್ಯ ಮಾಡುವಲ್ಲಿ ಭಿನ್ನ ಮತಿಗಳಾದ ನಮ್ಮಲ್ಲಿ ಮೊದಲು ಐಕ್ಯಮತ ಮೂಡಬೇಕು. ಕರ್ಣ ಕದನಾಕಾಂಕ್ಷಿಯಾಗಿ ಗುರುದ್ರೋಣರನ್ನು ನಿಂದಿಸಿರುವುದ್ದಾನೆ. ಆಚಾರ್ಯರು ಆತನನ್ನು ಕ್ಷಮಿಸಲಿ. ಆ ಕುರಿತು ಉತ್ಪನ್ನವಾದ ಕ್ರೋಧ ಅಶ್ವತ್ಥಾಮ ನಿನ್ನಿಂದ ಉಪಶಮನಗೊಳ್ಳಲಿ. ಕೃಪಾಚಾರ್ಯರೆ ನಮ್ಮ ಗುರಿ ರಕ್ಷಣೆ, ಅದಕ್ಕಾಗಿ ಸಿದ್ಧರಾಗೋಣ” ಎಂದರು.
ಕುಲದ ರಕ್ಷಣೆಯ ಪ್ರತಿಜ್ಞೆಗೈದ ಭೀಷ್ಮಾಚಾರ್ಯರು ಯೋಗ್ಯತಾವಂತರಾಗಿ ನುಡಿದು, ಈಗ ದುರ್ಯೋಧನನತ್ತ ತಿರುಗಿದರು. “ಹೇ ಸುಯೋಧನಾ! ಯೋಜನೆಯಂತೆ ನೀನು ಸೇನಾ ಸಮೇತ ತಕ್ಷಣ ಹಸ್ತಿನಾಪುರದತ್ತ ಹೊರಡು. ನೀನಂದುಕೊಂಡಂತೆ ವನವಾಸ – ಅಜ್ಞಾತವಾಸ ಅಪೂರ್ಣವಲ್ಲ. ಪೂರ್ಣವಾದ ಬಳಿಕವೆ ಪಾಂಡವರು ಜ್ಞಾತರಾಗುತ್ತಿದ್ದಾರೆ. ಧರ್ಮಪಾಶ ಬಂಧಿತರಂತೆ ಜೀವನ ಕಳೆಯುತ್ತಿರುವ ಧರ್ಮರಾಯ ಮತ್ತವನ ಸೋದರರು ಎಂದಿಗೂ ತಪ್ಪೆಸಗಲಾರರು. ಸುಳ್ಳು, ಕಪಟ, ವಂಚನೆ ಮಾಡುವುದು ಬಿಡು ಆ ಹಾದಿಯಲ್ಲಿ ಯೋಚಿಸುವವರೂ ಪಾಂಡವರಲ್ಲ. ಅದರ ಬದಲಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಒಂದೊಮ್ಮೆಗೆ ಎಲ್ಲಾದರೂ ಅವರು ಹಾಗೆ ಮಾಡ ಬಯಸಿದ್ದರೆ, ಸುಕನ್ಯೆ ಸುಶೀಲೆ ಪಾಂಚಾಲಿಯ ಸೆರಗಿಗೆ ಕೈಯಿಕ್ಕಿದ ದಿನವೆ ಸೆಟೆದು ನಿಂತು ಸರ್ವನಾಶ ಮಾಡಬಲ್ಲಷ್ಟು ಸಮರ್ಥರಾಗಿದ್ದರು. ಹದಿಮೂರು ವರ್ಷದ ಲೆಕ್ಕ ಹಾಕಲು ನೀನೀಗ ಇರುತ್ತಿರಲಿಲ್ಲ. ಈ ಸಮಯ ನಿನ್ನವರೆಲ್ಲರ ತ್ರಯೋದಶ ಶ್ರಾದ್ಧವಾಗುತ್ತಲಿರುತ್ತಿತೋ ಏನೋ. ವನವಾಸ ಅಜ್ಞಾತವಾಸ ಪೂರೈಸಿರುವ ಬಗ್ಗೆ ನಿನಗೆ ಸಂದೇಹ ಬೇಡ. ಕಾಲಮಾನದ ಗಣನೆಗೆ ಸೌರಮಾನ, ಚಾಂದ್ರಮಾನ, ಸವರಮಾನ ಹೀಗೆ ವಿಭಿನ್ನ ಗಣನಾ ಪದ್ದತಿಗಳಿವೆ. ಸಂಕ್ರಮಣ, ನಕ್ಷತ್ರ, ತಿಥಿ, ಹುಣ್ಣಿಮೆ, ಅಮವಾಸ್ಯೆ ಆಧಾರಿತವಾಗಿ ಮಾಸಗಳೂ, ಋತುಗಳೂ ಗಣಿಸಲ್ಪಟ್ಟು ಸಂವತ್ಸರದ ಬದಲಾವಣೆಗಳಾಗುತ್ತವೆ. ಈ ನಡುವೆ ಕಲೆಗಳು, ಮುಹೂರ್ತಗಳು, ದಿನಗಳು, ಅರ್ಧ ಮಾಸಗಳು, ಗ್ರಹಗಳ ಸಂಚಾರ ನಿರ್ಧಾರವಾಗುತ್ತವೆ. ಕಾಲಾತಿರೇಕದಿಂದ, ಗ್ರಹ ನಕ್ಷತ್ರಗಳ ವ್ಯತಿ ಕ್ರಮದಿಂದ ಐದೈದು ವರ್ಷಗಳಿಗೊಮ್ಮೆ ಎರಡು ಮಾಸಗಳು ಹೆಚ್ಚಾಗಿ ಬರುತ್ತವೆ. ಈ ರೀತಿ ಬರುವ ಅಧಿಕ ಮಾಸಗಳನ್ನು ಗಣನೆಗೆ ತೆಗೆದುಕೊಂಡರೆ ಈಗಾಗಲೇ ಐದು ತಿಂಗಳು, ಹನ್ನೆರಡು ದಿನ ರಾತ್ರಿಗಳು ಅಧಿಕವಾಗಿಯಾಗಿದೆ. ಈ ಎಲ್ಲಾ ಅಂಶಗಳ ಜ್ಯೋತಿಷ ಗಣಿತ ಆಧಾರಿತವಾಗಿ ನೋಡಿ ಲೆಕ್ಕಾಚಾರ ಮಾಡಿದರೂ ಕಾನನವಾಸ, ಗುಪ್ತವಾಸ ಮುಗಿದು ಮೂರು ದಿನಗಳು ಸಂದಿವೆ. ಇನ್ನೂ ಸ್ಪಷ್ಟತೆ ಬೇಕಾದರೆ ಚಂದ್ರವಂಶೀಯರಾದ ನಮಗೆ ಚಂದ್ರನ ಪರಿಭ್ರಮಣೆಯ ಹುಣ್ಣಿಮೆ – ಅಮವಾಸ್ಯೆ ಕಳೆದರೆ ಮಾಸ. ಅಂತಹ ದ್ವಾದಶ ಮಾಸಗಳು ಕಳೆದರೆ ವರ್ಷವಾಗುತ್ತದೆ. ಆ ಲೆಕ್ಕಾಚಾರದಲ್ಲಿ ನೋಡಿದರೂ ಇಂದಿಗೆ ಅವಧಿ ಪೂರೈಸಿ ಒಂಭತ್ತು ದಿನಗಳಾಗಿದೆ. ಇಂದಿನ ದಿನ ನವಮಿ ತಿಥಿ. ಹಾಗಾಗಿ ನಿನ್ನ ತಲೆಕೆಳಗಾಗಿಸುವ ಕುತರ್ಕದ ಸಂವತ್ಸರದ ಗಣನೆ ಮಾನ್ಯವಾಗದು. ನೀನೀಗ ನಮ್ಮ ತೀರ್ಮಾನದಂತೆ ಸೈನ್ಯ ಸಮೇತನಾಗಿ ಶೀಘ್ರಗಮನನಾಗಿ ಹಸ್ತಿನೆ ಸೇರುವ ದಾರಿ ನೋಡು. ನಿನ್ನ ಹಿಂದೆ ಗೋವುಗಳು ಸೈನ್ಯ ರಕ್ಷಣೆಯಲ್ಲಿ ಪುರ ಸೇರಲಿ. ಬರುವ ಪಾರ್ಥನನ್ನು ತಡೆಯುವ ಪ್ರಯತ್ನ ನಾವು ಮಾಡುತ್ತೇವೆ. ಇದಕ್ಕೆ ಒಪ್ಪದೆ ಉಳಿದೆಯಾದರೆ ಬರುವ ಪಾರ್ಥ ನಿನ್ನ ಲೆಕ್ಕ ಚುಕ್ತಮಾಡುವುದು ನಿಶ್ಚಿತ” ಎಂದು ಸಂಪೂರ್ಣ ಅಂಕಿ ಅಂಶ ಸಹಿತ ಸಂದೇಹ ಪರಿಹರಿಸಿ ಅವನನ್ನು ಕಳುಹಿಸುವ ಆದೇಶ ನೀಡಿದರು.
ಕೌರವ ಹಸ್ತಿನೆಯ ವರ್ತಮಾನ ಕಾಲದ ಯುವರಾಜನಾಗಿ “ಪಿತಾಮಹ, ಪಾಂಡವರಿಗೆ ಸಾಮ್ರಾಜ್ಯ ಮರಳಿ ನೀಡುವ ಮನಸ್ಸು ನನಗಿಲ್ಲ. ಯುದ್ದೋಚಿತವಾದುದನ್ನು ನೀವು ಕೈಗೊಳ್ಳಬೇಕು. ಆವೇಶದಲ್ಲಿ ಕರ್ಣನಾಡಿದ ಗುರು ನಿಂದನೆಯ ಮಾತುಗಳಿಗೆ ನಿಮ್ಮೆಲ್ಲರ ಕ್ಷಮೆ ನಾನು ಕೇಳುತ್ತಿದ್ದೇನೆ. ಗುರುಪುತ್ರ ಯುದ್ದಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಕರ್ಣ ಹಾಗೆ ವ್ಯವಹರಿಸುವ ಮನ ಮಾಡಿದ್ದಾನೆ, ಅನ್ಯಥಾ ಯಾವ ಉದ್ದೇಶವೂ ಆತನಿಗಿಲ್ಲ. ನಿನ್ನ ಕೋಪ ಸಾಧುವೆ ಆದರೂ ಈಗ ಯುದ್ಧೋನ್ಮುಖನಾಗಬೇಕಾಗಿದೆ” ಎಂದು ವಿನಂತಿಸುತ್ತಾ ತಾನು ಸೋದರರ ಸಹಿತ ಹಸ್ತಿನೆಯತ್ತ ಹೊರಟನು.
ಸೇನೆ ಭೀಷ್ಮಾಚಾರ್ಯ – ದ್ರೋಣಾಚಾರ್ಯರ ನಿರ್ದೇಶನದಲ್ಲಿ ವ್ಯೂಹವಾಗಿ ರಚನೆಗೊಂಡಿತು. ನಿರ್ದಿಷ್ಟ ಸ್ಥಾನಗಳಲ್ಲಿ ಸ್ಥಿತರಾಗಿ ಪಾರ್ಥನನ್ನು ತಡೆಯಲು ಸನ್ನದ್ಧರಾದರು.
ಆಕಾಶ ವ್ಯಾಪಿಸಿ ಮುಚ್ಚಿ ಹೋಗುವಂತೆ ಧೂಳೆಬ್ಬಿಸುತ್ತಾ, ಭೂಮಿ ಕಂಪಿಸುವಂತಹ ರಥಗಮನ, ಗಾಂಡೀವದ ಶಿಂಜಿನಿಯ ಕಂಪನದ ತರಂಗ ಸಿಡಿಸುತ್ತಾ ಪಾರ್ಥನ ರಥ ಬಂದೇ ಬಿಟ್ಟಿತು.
ದ್ರೋಣಾಚಾರ್ಯರು ಬರುತ್ತಿರುವ ರಥಶಿಖರದ ಪತಾಕೆ ನೋಡಿದರು. ಹೊಳೆಯುವ ಸುವರ್ಣ ಕಪಿಧ್ವಜವಿದೆ. ಮತ್ಸ್ಯ ದೇಶದ ಸಿಂಹಧ್ವಜವಿಲ್ಲ. ಅಂದರೆ ನಮ್ಮ ಯೋಚನೆಯಂತೆ ಬಂದವನು ಅರ್ಜುನನೇ ಹೌದು, ನಿಸ್ಸಂದೇಹವಾಗಿ ಖಚಿತವಾಗಿದೆ.
ನೋಡುತ್ತಿರುವಂತೆಯೇ ಜೋಡಿ – ಜೋಡಿಯಾಗಿ ಎರಡೆರಡು ಶರಗಳು ಹಾರುತ್ತಾ ಬಂದು ಕ್ರಮವಾಗಿ ಭೀಷ್ಮ – ದ್ರೋಣ, ಕೃಪಾಚಾರ್ಯರ ರಥದ ಮುಂದೆ ಭೂಮಿಗೆ ಚುಚ್ಚಿ ಊರಿ ನಿಂತವು. ಯುದ್ದಾರಂಭಕ್ಕೆ ಮೊದಲಾಗಿ ಗುರು ಹಿರಿಯರಿಗೆ ಅರ್ಜುನನು ಕರ ಜೋಡಿಸಿ ಪ್ರಣಾಮ ಸಲ್ಲಿಕೆಯ ಗೌರವ ಸೂಚಕ ಪರಿಕ್ರಮ ಕಂಡು ಅನಿಯಂತ್ರಿತವಾಗಿ ಮೂವರ ಬಲಗೈಗಳು ತೆರೆದು ಭುಜದೆತ್ತರಕ್ಕೇರಿ ಆಶೀರ್ವಾದ ಮಾಡಿದವು. ಮತ್ತೆರಡು ಶರಗಳು ಗುರುಪುತ್ರ ಅಶ್ವತ್ಥಾಮನ ಬಾಹುಗಳನ್ನು ಸವರುತ್ತಾ ಹಾರಿ ಹೋದವು. ಗುರುಕುಲದ ಸಹಪಾಠಿ, ಸನ್ಮಿತ್ರ ಗುರುಕುವರನಿಗೆ ಆಲಿಂಗನಗೈದ ಭಾವ ನೀಡಿದ ಈ ಶರಗಳು ಪುಳಕಗೊಳಿಸಿದವು.
ಈಗ ಅರ್ಜುನನ ನೇತ್ರಗಳು ದುರ್ಯೋಧನನನ್ನು ಅರಸುತ್ತಿವೆ, ಜೊತೆಗೆ ಗೋವುಗಳನ್ನು ಹುಡುಕುತ್ತಿವೆ. ಉತ್ತರ ಕುಮಾರನಿಗೆ ಸೂಚನೆ ನೀಡಿದ ಧನುರ್ಧರ ಧನಂಜಯ, “ಕುಲಾಧಮನಾದ ಆ ದುರುಳ ದುರ್ಯೋಧನ ಬಲಭಾಗದಿಂದ ಹಿಂದೆರಳುತ್ತಿರುವಂತೆ ಕಾಣುತ್ತಿದೆ. ಜೊತೆಗೆ ಗೋವುಗಳನ್ನೂ ಅಟ್ಟಿಕೊಂಡು ಹೋಗುತ್ತಿದ್ದಾರೆ. ನಮ್ಮ ಗುರಿ ಎದುರಿಗಿರುವ ಈ ಸೈನ್ಯವಲ್ಲ, ಹಾರಿಸು ರಥ, ನಾವು ಬಂದ ಕಾರ್ಯ ಆ ದುರ್ಯೋಧನನನ್ನು ಸೋಲಿಸಿ ಗೋವುಗಳನ್ನು ಬಿಡಿಸಿಕೊಂಡು ಹೋಗುವುದು. ಅದನ್ನೇ ಮೊದಲು ಮಾಡೋಣ.”
ಮುಂದುವರಿಯುವುದು…