
ವಿಧಾನಸಭೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ಮಾತನಾಡಿ ಆ.15ರಿಂದ ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳ ನಿಯಂತ್ರಣ ಹಾಗೂ ಜನ ಜಾಗೃತಿಗಾಗಿ ಬೆಳಗಾವಿ ಸೇರಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ‘ಅಕ್ಕ’ ಪಡೆ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಜೆಡಿಎಸ್ ಸದಸ್ಯ ಸಿ.ಬಿ.ಸುರೇಶ್ ಬಾಬು ಅವರು ಹೆಚ್ಚುತ್ತಿರುವ ಬಾಲ ಗರ್ಭಿಣಿ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿದ್ದು ಇದಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಬೀದರ್‌ನಲ್ಲಿ ‘ಅಕ್ಕ’ ಪಡೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಇನ್ನು ಆ.15ರಿಂದ ಬೆಳಗಾವಿ, ಮೈಸೂರು ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಆಲೋಚನೆ ಇದೆ ಎಂದು ಹೇಳಿದರು.
ಈ ಅಕ್ಕ ಪಡೆಗಳು ಮಹಿಳಾ ಪೊಲೀಸ್, ಎನ್‌ಸಿಸಿ ಅಧಿಕಾರಿ, ಸಿಬ್ಬಂದಿ ಒಳಗೊಂಡಿದ್ದು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ, ಶಾಲೆ, ಕಾಲೇಜುಗಳಿಗೆ ತೆರಳಿ ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹದಿಹರೆಯದ ಮಕ್ಕಳ ಮೇಲಿನ ಅತ್ಯಾ*ರ, ಪೋಕ್ಸೋ ಕಾಯ್ದೆಯಡಿ ಆಗುವ ಶಿಕ್ಷೆ ಕುರಿತು ಜಾಗೃತಿ ಮೂಡಿಸಲಿವೆ. ಜತೆಗೆ, ಮಹಿಳೆಯರು, ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ಯಾವುದೇ ಸಮಸ್ಯೆ ಆದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡುವುದು, ಹೆದರದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವ ಕುರಿತು ತಿಳಿ ಹೇಳಲಿದೆ. ಯಾವುದೇ ಸಮಯದಲ್ಲಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಈ ಪಡೆ ನೀಡಲಿದೆ ಎಂದು ಮಾಹಿತಿ ನೀಡಿದರು.