23.3 C
Udupi
Wednesday, August 13, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 264

ಭರತೇಶ್ ಶೆಟ್ಟಿ, ಎಕ್ಕಾರ್

ಅರ್ಜುನನ ಗಾಂಡೀವದ ಟಂಕಾರ ನಾದ ತರಂಗಗಳು ಭೋರ್ಗರೆವ ಸಾಗರದ ಅಲೆಗಳಂತೆ ವ್ಯೋಮದಲ್ಲಿ ಪ್ರವಹಿಸಿ ಅರ್ಭಟಿಸುತ್ತಾ ಸಾಗಿ ವೃತ್ತಾಕಾರದಲ್ಲಿ ದಶದಿಕ್ಕುಗಳಿಗೂ ಹಬ್ಬಿತು. ಸೂಕ್ಷ್ಮಗ್ರಾಹಿಗಳಾದ ಗುರು ದ್ರೋಣರು ಭೀಷ್ಮರನ್ನುದ್ದೇಶಿಸಿ “ಈ ಧನುಷ್ಟೇಂಕಾರ ಅರ್ಜುನನದ್ದು. ಭೂಕಂಪಿಸುವ ತೆರದಿ ರಥ ಓಡಿ ಬರುತ್ತಿರುವುದೂ ಆತನ ಉಪಸ್ಥಿತಿಯಲ್ಲಿಯೆ ಇರಬೇಕು. ಈಗ ನಮ್ಮದಾದ ದಿವ್ಯ ಆಯುಧಗಳು ಮಂಕಾಗಿ ಹೋಗಿವೆ, ತುರಗ ಸೇನೆ ಕಳಾಹೀನವಾಗಿವೆ. ಅಶ್ವಗಳು ಸೂರ್ಯನತ್ತ ಮುಖವೆತ್ತಿ ಗೀಳಿಡುತ್ತಿವೆ, ರಥದ ಪತಾಕೆಗಳ ಮೇಲೆ ಕಾಗೆಗಳು ಬಂದು ಕೂರತೊಡಗಿವೆ, ನರಿಗಳು ಅಡ್ಡಾದಿಡ್ಡಿಯಾಗಿ ಓಡುತ್ತಾ ಕರ್ಕಶ ಧ್ವನಿ ಮಾಡುತ್ತಿವೆ, ಬಿರುಗಾಳಿ ಎದ್ದಿದೆ, ಯೋಧರ ಮುಖಗಳು ಬಿಳಿಚಿಕೊಂಡಿವೆ, ಎದೆ ಬಡಿತದ ವೇಗ ಏರತೊಡಗಿದೆ. ಯಾಕೋ ಈ ಶಕುನಗಳು ಶುಭ ಸೂಚಕವಾಗಿ ಗೋಚರಿಸುತ್ತಿಲ್ಲ. ಈಗಲೆ ಗೋವುಗಳನ್ನು ಹಸ್ತಿನೆಯತ್ತ ಕಳುಹಿಸಿ. ಉಳಿದವರೆಲ್ಲರೂ ಅವುಗಳನ್ನಟ್ಟುತ್ತಾ ಹಸ್ತಿನಾವತಿಯತ್ತ ತಕ್ಷಣ ಹೊರಡಲಿ. ಇಲ್ಲವಾದರೆ ಪ್ರಳಯಾಂತಕನಾಗಿ ಬರುವ ಆತ ಯಾರನ್ನೂ ಉಳಿಸಲಾರನು. ಆಚಾರ್ಯರಾದ ನಾವು ಬರುವ ಅರ್ಜುನನ್ನು ತಡೆದು ವ್ಯಸ್ಥಗೊಳಿಸೋಣ ” ಎಂದರು.

ಕರ್ಣನಿಗೆ ಗುರು ದ್ರೋಣರ ಮಾತು ಅಸಹ್ಯವಾಯಿತು. ಕಾರಣ ಅರ್ಜುನನ ಬಗೆಗಿನ ಶ್ರೇಷ್ಠತೆಯ ವರ್ಣನೆ ಆತನ ಕಿವಿಗಳಿಗೆ ಕಾದ ಸೀಸ ಹೊಯ್ದಂತಾಗಿತ್ತು. ಆಕ್ಷೇಪಿಸುತ್ತಾ “ಕೌರವೇಶ್ವರಾ! ಈ ರಣಮುಖಕ್ಕೆ ಬೆನ್ನು ಹಾಕಿ ಗೋವುಗಳೊಂದಿಗೆ ಪಲಾಯನ ಗೈಯಲು ನಾವು ಹೇಡಿಗಳೆ? ಒಂದೊಮ್ಮೆಗೆ ಇವರ ಮಾತು ಕೇಳಿ ಆ ರೀತಿ ಹೋದೆವು ಎಂದಾದರೆ, ಬಂದವ ಅರ್ಜುನನೆ ಆಗಿದ್ದರೆ ಬೆಂಗಡೆಯಲ್ಲಿ ಆತನ ಬಾಣಗಳು ಬಂದು ನಮ್ಮನ್ನು ಹತಗೊಳಿಸಿದರೆ, ವೀರಸ್ವರ್ಗವೂ ಇಲ್ಲದೆ ಹತಭಾಗ್ಯರಾಗಿ ಸಾಯಬೇಕಾದೀತು. ದ್ರೋಣರಿಗೆ ಶಿಷ್ಯನ ಬಗ್ಗೆ ಏನೊ ಅಂತರಂಗದಲ್ಲಿ ಒಲವು. ಆತನನ್ನು ವೈಭವೀಕರಿಸುವುದು ಈ ಗುರುವಿಗೆ ಕೆಲಸ. ಗಾಳಿ ಬೀಸಿದರೆ, ಪ್ರಾಣಿಗಳು ಕೂಗಿದರೆ, ಪಕ್ಷಿಗಳು ಹಾರಿ ಕುಳಿತರೆ ಅದು ಅರ್ಜುನನ ಕೃತ್ಯವೆ? ಏನು ಹುಚ್ಚು ಮಾತು? ಅಧ್ಯಾಪನ ಮಾಡುವ ಉಪಾಧ್ಯಾಯ ವೃತ್ತಿಯ ಇವರಿಗೆ ಕತೆ ಕಟ್ಟಿ ಶಿಷ್ಯರಿಗೆ ಹೇಳಿ ಮರುಳು ಮಾಡುವ ಪ್ರವೃತ್ತಿ ಇದೆ. ಹಾಗೆಂದು ಈ ರಣಧಾರುಣಿ ಗುರುಕುಲವಲ್ಲ ಎಂಬ ಪರಿಜ್ಞಾನ ಬೇಡವೆ? ಕೌರವೇಶ್ವರಾ! ಈಗಾಗಲೆ ನಿನಗೆ ವಚನವಿತ್ತಿದ್ದೇನೆ. ಶಪಥ ಗೈದಿದ್ದೇನೆ. ಶ್ರೇಷ್ಟ ಗುರುಗಳಾದ ಪರಶುರಾಮರ ಶಿಷ್ಯನಾದ, ಕಾಲಪ್ರಷ್ಠ ಎಂಬ ಈ ದಿವ್ಯ ಧನುಸ್ಸನ್ನು ಧರಿಸಿರುವ ನಾನು ಆ ಅರ್ಜುನನ ಶಿರಚ್ಛೇದ ಮಾಡಿಯೆ ಬಿಡುತ್ತೇನೆ. ನನ್ನ ಗುರುಗಳಿಂದ ಉಪದೇಶಿಸಲ್ಪಟ್ಟ ಅತ್ಯದ್ಭುತ ಶರಗಳಿಂದ ಅಗತ್ಯ ಬಿದ್ದರೆ ಅರ್ಜುನನ ಅಪ್ಪ ದೇವೇಂದ್ರನನ್ನೂ ಇದಿರಿಸಬಲ್ಲೆ. ಆ ಪಾರ್ಥನ ಕಪಿಧ್ವಜವನ್ನು ತುಂಡರಿಸಲು ಕಾಲ ಕೂಡಿ ಬಂದಿದೆ, ಚೀತ್ಕರಿಸುತ್ತಾ ಧ್ವಜಾರೂಢನಾದ ವಾನರ ಧರೆಗುರುಳುವಂತೆ ನಾನು ಮಾಡುವೆ ನೋಡು. ಅರ್ಜುನ ಬರಲಿ, ಈ ಚಂಚಲಚಿತ್ತ ಗುರುವಿನ ಮಾತು ಕೇಳಿ ಅಳುಕಬೇಡ. ಒಂಟಿ ಯಾಗಿ ಬರುವ ಆ ಅರ್ಜುನನಿಗೆ ಇದಿರಾಗಿ ನಾವಿಷ್ಟು ಮಂದಿ ಕಲಿಗಳಿರುವಾಗ ಏನು ತಾನೆ ಮಾಡಲಾದೀತು? ಬಿಡು ಅವರ್ಯಾರೂ ಬೇಡ ನಾನೊಬ್ಬನೆ ದ್ವಂದ್ವ ಯುದ್ಧದಲ್ಲಿ ಇವತ್ತಿನಿಂದ ಅರ್ಜುನ ಇಲ್ಲ ಈ ಜಗದಲ್ಲಿ ಎಂದು ಹೇಳುವ ಹಾಗೆ ಮಾಡುವೆ. ಇಂದಿನ ಪ್ರಕರಣ ಜೀವನ ಪರ್ಯಂತರ ಅವಿಸ್ಮರಣೀಯವಾಗುವ ಮಹತ್ಕಾರ್ಯಕ್ಕೆ ಅವಕಾಶ ಒದಗಿಸಿದೆ. ವೀರರಾದವರು ನಮ್ಮ ಪಾಳಯದ ಸ್ಥೈರ್ಯ ಹೆಚ್ಚಿಸಬೇಕು ಹೊರತು, ವೈರಿಯನ್ನು ಹೊಗಳಿ ಭ್ರಾಂತಿ ಹುಟ್ಟಿಸಬಾರದು. ಅಂತಹವರು ಯಾರೆ ಆಗಿರಲಿ ಯುದ್ಧಕ್ಷೇತ್ರಕ್ಕೆ ಸಹ್ಯರಲ್ಲ.” ಎಂದನು.

ಕರ್ಣನ ಆಟಾಟೋಪದ ವಾಕ್ಜರಿಯನ್ನು ಆಲಿಸಿದ ಕೃಪರಿಗೆ ಇವನೆಂಥಹ ಮೂಢ? ಎಂದು ಭಾಸವಾಗತೊಡಗಿತು. “ಹೇ! ಕರ್ಣಾ! ನೀನು ವೀರನು ಆಗಿರಬಹುದು ಆದರೆ ಕಾಲ ಸಕಾಲವಾಗದ ಹೊರತು ಕಾರ್ಯ ಕೈಗೂಡದು. ದ್ರೋಣಾಚಾರ್ಯರ ಅನುಭವವನ್ನು ಉಪೇಕ್ಷಿಸಲು ನಿನ್ನ ಜ್ಞಾನ ಸಾಕಾಗದು. ಸದಾ ಅರ್ಜುನನ ಹಗೆಯಷ್ಟೆ ಆಗಿರುವ ನೀನು ಅವಕಾಶವಾದಿಯಾಗಿ ಬದುಕಿ ಯುದ್ಧಾಕಾಂಕ್ಷಿಯಾಗಿರುವೆ. ನಿನಗೆ ತಿಳಿದಿರುವುದು ಅತ್ಯಲ್ಪ. ಅಲ್ಪಮತಿಯಾಗಿ ವ್ಯವಹರಿಸಿ ಅಕಾರ್ಯಕ್ಕೆ ಮನಮಾಡಿ ಅನರ್ಥಕ್ಕೆ ಆಹ್ವಾನ ನೀಡಬೇಡ. ಏನು ಪಾರ್ಥ ಸಾಮಾನ್ಯನೆ? ಪಾರ್ಥ ಒಂಟಿಯಾಗಿ ಸ್ವಸಾಮರ್ಥ್ಯದಿಂದ ಚಿತ್ರಸೇನನೊಡನೆ ಕಾದಾಡಿ ಕೌರವನ ಪ್ರಾಣ ಉಳಿಸಿದ್ದಾನೆ. ನೀನು ಅಲ್ಲಿ ಇದ್ದರೂ ಚಿತ್ರಸೇನನ ಶರಾಘಾತಗಳಿಂದ ಮಾರಣಾಂತಿಕ ಗಾಯಾಳಾಗಿ ದಟ್ಟಡವಿಯಲ್ಲಿ ಓಡಿ ಬದುಕಿಕೊಂಡದ್ದು ವಿಸ್ಮರಣೆಯಾಗಿದೆಯೆ? ಭೀಮನಿದ್ದರೂ ಜಯದ್ರಥನ ಬೆಂಬತ್ತಿ, ಕಾಮ್ಯಕಾವನದಲ್ಲಿ ದ್ರೌಪದಿಯನ್ನು ಅಪಹರಿಸಿದ ಸೈಂಧವನನ್ನು ಕೆಡ ಹಾಕಿದ್ದು ಪಾರ್ಥ. ಸಾಕ್ಷಾತ್ ಪರಮೇಶ್ವರ ಗೌರಿ ಗಣೇಶ, ಕಾರ್ತಿಕೇಯ, ಶಿವಗಣ, ಶಿವ ಪ್ರಮಥರ ಸಹಿತ ಇಂದ್ರಕೀಲಕದಲ್ಲಿ ಎದುರಾದಾಗ ಅಂಜದೆ ಒಂಟಿಯಾಗಿಯೆ ಕಾದಾಡಿ ಪಾಶುಪತಾದಿ ಬಹು ದಿವ್ಯಾಯುಧಗಳನ್ನು ಪಡೆದ ಧೀರ. ಸ್ವರ್ಗವೇರಿ ನಿವಾತಕವಚ, ಕಾಲಕೇಯರನ್ನು ಒಂಟಿಯಾಗಿ ವಧಿಸಿ ಸೂರ್ಯನ ಪ್ರಭೆಯ ಪ್ರತಿರೂಪದ ಕಿರೀಟ ಧಾರಣೆ ಮಾಡಿದ ಕಿರೀಟಿ. ಅಷ್ಟ ದಿಕ್ಪಾಲಕರ ದಿವ್ಯಾಯುಧಗಳು ಅವನ ತೂಣಿರದಲ್ಲಿವೆ. ಸುಭದ್ರಾ ಕಲ್ಯಾಣ ಸಮಯ ವಾಸುದೇವ ಕೃಷ್ಣನನ್ನೂ ಒಂಟಿಯಾಗಿ ಎದುರಿಸಿದ ಸಮರ್ಥ ವೀರ ವಿಕ್ರಮಿ. ಖಾಂಡವ ದಹನ ಕಾಲದಲ್ಲಿ ಅಗ್ನಿಯನ್ನು ಸಂತುಷ್ಟಿಗೊಳಿಸಿದ ಸಾಹಸಿ. ವನವಾಸದಲ್ಲಿ ಗಂಧರ್ವನನ್ನು ಮಣಿಸಿ ಚಾಕ್ಷುಷ ವಿದ್ಯೆ ಪಡೆದವನು ಈ ಅರ್ಜುನ. ಇಂದ್ರಪ್ರಸ್ಥದಲ್ಲಿ ತಕ್ಷಕ – ದೇವೇಂದ್ರರಿಗೆ ಸವಾಲಾಗಿ ಕಾಣಿಸಿ ಸಮರದಲ್ಲಿ ಮನಗೆದ್ದ ಅರ್ಜುನ ಇಂದೂ ಏಕಾಂಗಿಯಾಗಿ ನಮ್ಮೆದುರು ನಿಲ್ಲಬಲ್ಲ, ನಿಂತು ಕಾದಬಲ್ಲ, ಕಾದಿ ಗೆಲ್ಲಬಲ್ಲ ಲಯಕರ್ತ ಮಹಾರುದ್ರ ಸ್ವರೂಪನಾಗಿ ಬರುತ್ತಿದ್ದಾನೆ. ಮಲೆತು ಮೈಮರೆತು ವ್ಯರ್ಥ ಪ್ರಲಾಪ ಮಾಡಬೇಡ ಕರ್ಣಾ. ಉತ್ತಮ ಷಡ್ರಥರಾದ ಭೀಷ್ಮ, ದ್ರೋಣ, ಅಶ್ವತ್ಥಾಮ, ನೀನು, ನಾನು, ಮತ್ತು ದುರ್ಯೋಧನ ಒಗ್ಗಟ್ಟಾಗಿ ನಿಂತು ಹೋರಾಡಿ ಗೆಲ್ಲುವ ಯತ್ನ ಮಾಡಬೇಕು ಹೊರತು ನೀನೊಬ್ಬನಿಂದ ಏನೇನೂ ಸಾಗದು” ಎಂದು ಕೃಪಾಚಾರ್ಯರು ಎಚ್ಚರಿಸಿದರು.

ಅಶ್ವತ್ಥಾಮನಿಗೆ ತನ್ನ ಪಿತ ಉಭಯಕುಲ ಬಿಲ್ಲೋಜರಾದ ಗುರು ದ್ರೋಣಾಚಾರ್ಯರನ್ನು ಕರ್ಣ ಹೀಗಳೆದಾಗ ಉರಿದು ಹೋಯಿತು “ಹೇ ಕರ್ಣಾ! ‘ಶಾಪದಪಿ – ಶರಾದಪಿ’ ಯಾದ ನನ್ನ ತಂದೆಯ ಎದುರು ನೀನು ಏನು ಮಾತನಾಡುತ್ತಿರುವೆ? ಹುಳು – ಇರುವೆಗಳಿಗಾದರೂ ತೊಡಗಿದ ಕಾರ್ಯ ಪೂರೈಸಲು ದುಡಿಯುವಲ್ಲಿ ತಾಳ್ಮೆ ವ್ಯವಧಾನವಿರುತ್ತದೆ. ನೀನು ಅವುಗಳಿಗಿಂತಲೂ ಕನಿಷ್ಟನಾಗಿ ಆಲೋಚಿಸುತ್ತಿರುವೆ. ದ್ರೋಣಾಚಾರ್ಯರು ಮನಮಾಡಿದರೆ ಯಾವ ಶರಗಳೂ ಅವರ ಮೈ ಸೋಕಲಾರವು. ಕೇವಲ ಸಂಕಲ್ಪ ಮಾತ್ರದಿಂದ ಎದುರಾಳಿಯನ್ನು ನಿಗ್ರಹಿಸಬಲ್ಲ ತೇಜೋವಂತ ಅನುಷ್ಠಾನ ನಿರತರು. ಅವರ ಯೋಗ್ಯತೆ ಅರಿಯದೆ ಕತೆ ಕಟ್ಟುವ ಪ್ರವೃತ್ತಿಯ ಉಪಾಧ್ಯಾಯ ಎನ್ನುವ ನಿನ್ನ ನೀಚತನಕ್ಕೆ ಏನೆನ್ನಬೇಕು? ಪಾಂಡವರ ಗಳಿಕೆ ನಮ್ಮ ವಶದಲ್ಲಿದೆ ಅದು ಜೂಜಿನ ಮೂಲಕ ಗೆದ್ದಿರುವುದು. ಕದನ ಮುಖದಿಂದಲ್ಲ. ಅಧರ್ಮಿಗಳಾಗಿ ದ್ರೌಪದಿಯ ವಸ್ತ್ರಾಪಹಾರ ಯತ್ನ ಮಾಡಿದ ಸಮಯ ಪಾಂಡವರಾಡಿದ ಶಪಥಗಳು ಸ್ಮರಣೆಯಲ್ಲಿವೆಯೆ? ಧರ್ಮಾತ್ಮರಾದ ಕಾರಣದಿಂದ ಪ್ರಾಮಾಣಿಕರಾಗಿ ವನವಾಸ ಅಜ್ಞಾತವಾಸ ಸ್ವೀಕರಿಸಿದ್ದಾರೆ. ಆದರೆ ಆ ಪಾಂಡವರಿಗೆ ಕಷ್ಟ ನೀಡಲು ಬಯಸಿ ಕಳುಹಿಸಿದ ಈ ಹದಿಮೂರು ಸಂವತ್ಸರ ಕಾಲ ಅವರಿಗೆ ಪರ್ವಕಾಲವಾಯಿತು. ಪುಣ್ಯ ಬಲ, ದಿವ್ಯಾಯುಧಗಳ ಸಂಗ್ರಹ, ವರಬಲ ಪ್ರಾಪ್ತಿ, ಧರ್ಮ ಶಕ್ತಿ ಸಂಯುಕ್ತಿಯಾಗಿ ನೂರ್ಮಡಿ ಬೆಳೆದು ಮತ್ತಷ್ಟು ಬಲಾಢ್ಯರು ಆಗಿ ಬಂದಿದ್ದಾರೆ. ಸವ್ಯಸಾಚಿಯ ಗಾಂಡೀವ, ಅಕ್ಷಯ ತೂಣಿರ, ಶ್ವೇತವಾಹನದೆದುರು ನಿಲ್ಲಬಲ್ಲವರಾರು? ನೀನೋ? ಕನಸಲ್ಲೂ ಆ ಭ್ರಮೆಗೊಳಗಾಗಬೇಡ. ಅರ್ಜುನನ್ನುಳಿದು ವಿರಾಟರಾಯ ಅಥವಾ ಮತ್ಸ್ಯದೇಶದ ವಿಕ್ರಮಿಗಳ್ಯಾರಾದರು ಬರಲಿ ನಾನು ಎದುರಿಸಿ ಪರಾಜಿತಗೊಳಿಸಬಲ್ಲೆ. ಆದರೆ ಅರ್ಜುನನೆದುರು ನನಗೂ ನಿಂತು ಹೋರಾಡಲು ಕಷ್ಟವಾದೀತು. ಒಂದೊಮ್ಮೆಗೆ ಆ ಸಾಧನೆ ಆದರೆ, ಅದು ಆಚಾರ್ಯತ್ರಯರಿಗೆ ಮಾತ್ರ. ಪೂರಕವಾಗಿ ಆ ಪಾರ್ಥನೂ ಗೌರವಭಾವದಿಂದ ಅವರನ್ನೇನೂ ಮಾಡಲಾರನೆಂಬ ವಿಶ್ವಾಸವಿದೆ. ಅನ್ಯರು ಯಾರಾದರು ತುಡುಕಿದರೆ ಪರ್ವತವನ್ನೂ ಹಾರಿಸಬಲ್ಲ ಆತನ ಶರಗಳು ಅಂತಕ, ಬಡಬಾಗ್ನಿ, ಮೃತ್ಯು ಸದೃಶವಾಗಿ ಸರ್ವನಾಶ ಮಾಡೀತು. ಧನಂಜಯ ಏನನ್ನೂ ಉಳಿಸಲಾರ ಅರಿತುಕೋ.” ಎಂದು ಮನವರಿಕೆ ಮಾಡಿಸಿದ ಗುರುಪುತ್ರ ಅಶ್ವತ್ಥಾಮ.

ದ್ರೋಣರ ಮಾತುಗಳನ್ನು ಕೇಳಿದ್ದ ದುರ್ಯೋಧನನಿಗೆ ಮಾತ್ರ ಹರ್ಷೋತ್ಕರ್ಷವೇ ಆಗಿತ್ತು. ಕರ್ಣ ಕೃಪಾಚಾರ್ಯ, ಅಶ್ವತ್ಥಾಮರ ವಾದ ಪ್ರತಿವಾದಗಳೂ ಕಿವಿಗೆ ಬಿದ್ದ ಹಾಗಿಲ್ಲ. ಎದುರಾಗಬಹುದಾದ ಆಪತ್ತು ಕೂಡ ಮಂದಮತಿಯಾದ ಆತನಿಗೆ ಗ್ರಾಹ್ಯವಾಗಿಲ್ಲ. ಗುರು ದ್ರೋಣರನ್ನೂ, ಪಿತಾಮಹ ಭೀಷ್ಮರನ್ನೂ ಉದ್ದೇಶಿಸಿ ” ಒಂದು ವೇಳೆ ಅರ್ಜುನ ಈಗ ಪ್ರಕಟನಾದರೆ, ಅಜ್ಞಾತವಾಸದ ಅವಧಿ ಇನ್ನೂ ಮುಗಿದಿಲ್ಲ!. ಇನ್ನೂ ಕೆಲದಿನಗಳಿರುವಾಗ ಮರೆತು, ಪೆದ್ದನಾಗಿ ಅರ್ಜುನ ಬಂದರೆ ಪಣ ಪೂರೈಸದ ಆ ಪಾಂಡವರು ಮತ್ತೆ ವನವಾಸ – ಅಜ್ಞಾತವಾಸಕ್ಕೆ ಹೋಗಬೇಕು. ನಾವು ಗೆದ್ದು ಬಿಡುವೆವು” ಎಂದು ಸಂಭ್ರಮಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page