
ಬೆಂಗಳೂರು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತಿಟ್ಟಿರುವ ಕುರಿತ ದೂರನ್ನು ರಾಜ್ಯ ಸರ್ಕಾರ ಸಣ್ಣ ಪ್ರಕರಣ ಎಂದು ಪರಿಗಣಿಸಿಲ್ಲ. ಸಾಧಕ-ಬಾಧಕ ನೋಡಿ ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವಹಿಸಲಾಗಿದ್ದು ನಾವು ಯಾವುದೇ ಒತ್ತಡಕ್ಕೂ ಮಣಿದು ಎಸ್‌ಐಟಿ ರಚಿಸಿಲ್ಲ. ಆದಷ್ಟು ಬೇಗ ವರದಿ ನೀಡಲು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.
ಯಾವುದೋ ಒಂದು ಒತ್ತಡಕ್ಕೆ ಮಣಿದು ಮಾಡುವುದು ಅಲ್ಲ. ವಸ್ತುಸ್ಥಿತಿ ಪರಿಶೀಲಿಸಿದ ಬಳಿಕ ಇನ್ನೂ ಹೆಚ್ಚಿನ ರೀತಿಯಲ್ಲಿ ತನಿಖೆ ಆಗಬೇಕು ಎಂಬ ಸಾರ್ವಜನಿಕರ ಅಭಿಪ್ರಾಯ ಹಾಗೂ ಅವಶ್ಯಕತೆ ಪರಿಗಣಿಸಿ ಎಸ್ಐಟಿ ಗೆ ನೀಡಲಾಗಿದೆ. ನೂರಾರು ಅಸ್ಥಿಪಂಜರಗಳು ಇರುವುದನ್ನು ಸರ್ಕಾರ ಸಣ್ಣದಾಗಿ ನೋಡಿರುವುದಿಲ್ಲ. ಹಿರಿಯ ಪೊಲೀಸ್ ಆಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು ಅವರು ಪ್ರತಿ ಹಂತದಲ್ಲೂ ಡಿಜಿ-ಐಜಿಗೆ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿ ಅಂತಿಮ ವರದಿಯನ್ನೂ ಕಳುಹಿಸಬೇಕು ಎಂದು ಹೇಳಿದ್ದೇವೆ. ಇದಲ್ಲಿ ಸರ್ಕಾರ ಮುಚ್ಚಿಡುವಂತದ್ದು ಏನೂ ಇಲ್ಲ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು.





