ಭಾಗ 253
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೫೪ ಮಹಾಭಾರತ
ದ್ರೌಪದಿಯು ಮುಂದುವರಿಸುತ್ತಾ, “ಪ್ರಾಣೇಶ್ವರ! ಪತಿವ್ರತೆಯರ ಕಥೆಗಳು ಸ್ತ್ರೀಯರಾದ ನಮಗೆ ಆದರ್ಶ. ಅದನ್ನು ಪಾಲಿಸುವ ನಾವು ಗಂಡಂದಿರನ್ನು ಅನುಸರಿಸಿಯೆ ನಡೆಯುತ್ತೇವೆ. ಪುರುಷರಾದ ನಿಮಗೆ ಪತ್ನಿ ಪ್ರೇಮದ ಕುರಿತು ನಡೆದ ಕಥೆಗಳು ಆದರ್ಶವಾಗಬೇಕಲ್ಲವೆ? ನೀವು ಕೇಳುವುದಾದರೆ ನಾನು ಹೇಳುತ್ತೇನೆ. ಹಿಂದೆ ಭೃಗು ಮಹರ್ಷಿಗಳ ಮೊಮ್ಮಗನಾದ “ಪ್ರಮತಿ” ಎಂಬವನು “ಘೃತಾಚಿ” ಎಂಬ ಅಪ್ಸರೆಯಿಂದ “ರುರು” ಎಂಬ ಮಗನನ್ನು ಪಡೆದಿದ್ದನಂತೆ. ಅದೆ ಸಮಯದಲ್ಲಿ ಸುರಸ್ತ್ರೀ ಮೇನಕೆಗೆ “ವಿಶ್ವಾವಸು” ಎಂಬ ಗಂಧರ್ವನಿಂದ ಒಂದು ಹೆಣ್ಣು ಮಗುವಾಯಿತು. ಮೇನಕೆ ಹೆತ್ತು ತೊರೆದು ಹೋದ ಮಗುವನ್ನು “ಸ್ಥೂಲಕೇಶ” ಎಂಬ ಋಷಿ ತನ್ನಾಶ್ರಮಕ್ಕೆ ತಂದು “ಪ್ರಮದ್ವರೆ” ಎಂದು ನಾಮಕರಣ ಮಾಡಿ ಸಾಕಿ ಬೆಳೆಸಿದ್ದನು. ರುರು ಬೆಳೆದು ಯುವಕನಾಗಿರುವ ಕಾಲ ಆಕಸ್ಮಿಕವಾಗಿ ‘ಪ್ರಮದ್ವರೆ’ ಕಾಣ ಸಿಕ್ಕಳು. ಮೊದಲ ನೋಟದಲ್ಲಿ ಮನಸೋತು ಆಕೆಯನ್ನು ಪ್ರೇಮಿಸತೊಡಗಿದನಂತೆ. ಈ ವಿಚಾರ ಹಿರಿಯರಿಗೆ ತಿಳಿಸಿ, ಸಮ್ಮತಿ ಪಡೆದು ಇವರಿಬ್ಬರ ವಿವಾಹ ನಿಶ್ಚಯವೂ ಆಯಿತಂತೆ. ಮದುವೆಯ ದಿನ ಎರಡೂ ಕಡೆಯ ಬಂಧು, ಬಳಗ, ಹಿತೈಷಿಗಳೆಲ್ಲಾ ಬಂದು ಸೇರಿದ್ದಾರೆ. ವಿವಾಹ ಮುಹೂರ್ತದ ಹೊತ್ತು ಹತ್ತಿರವಾಗುತ್ತಿರುವಾಗ ಒಂದು ವಿಷ ಸರ್ಪ ಕಚ್ಚಿದ ಕಾರಣ ಮದುಮಗಳು ಪ್ರಮದ್ವರೆ ಸಾವನ್ನಪ್ಪಿದಳಂತೆ. ಎಲ್ಲರಿಗೂ ಸಹಜವಾಗಿ ವ್ಯಥೆಯಾಗಿ ದುಃಖತಪ್ತರಾದರೆ, ರುರು ಮಾತ್ರ ಕಲ್ಯಾಣ ಮಂದಿರದ ಒಂದು ಸಂದಿನಲ್ಲಿ ಕುಳಿತು ದೇವಾನುದೇವತೆಗಳಲ್ಲಿ ಪ್ರಾರ್ಥಿಸುತ್ತಾ ‘ನಾನು ತಪಸ್ಸು ಮಾಡಿರುವುದು, ಗುರು ಹಿರಿಯರ ಸೇವೆ ಮಾಡಿರುವುದು, ದಾನ ಮಾಡುತ್ತಿರುವುದು ಸತ್ಯವಾದರೆ ನನ್ನ ಪ್ರಿಯೆ ಪ್ರಮದ್ವರೆ ಬದುಕಿ ಬರಲಿ’ ಎಂದು ಪ್ರಾರ್ಥಿಸಿದನಂತೆ. ಆಗ ದೇವದೂತನೊಬ್ಬ ಬಂದು “ಅಯ್ಯಾ ಅವಳ ಆಯಸ್ಸು ಮುಗಿದು ಹೋಗಿದೆ. ಬದುಕಿಸುವುದು ಹೇಗೆ?” ಎಂದು ಕೇಳಿದನಂತೆ. ಆಗ ರುರುವು “ನನ್ನ ಆಯಸ್ಸಿನ ಉಳಿದ ಭಾಗದ ಸರಿ ಅರ್ಧ ಅವಳಿಗಿತ್ತು ಬದುಕಿಸಿ. ಇರುವಷ್ಟು ಕಾಲ ಜೊತೆಯಾಗಿ ಇರುತ್ತೇವೆ” ಎಂದು ಬೇಡಿದನಂತೆ. ಹಾಗೆಯೇ ಆಗಲಿ, ಎಂದು ದೇವದೂತ ಅನುಗ್ರಹಿಸಿದನಂತೆ. ಅಂತೆಯೆ ಪ್ರಮದ್ವರೆ ಬದುಕಿದಳಂತೆ. ಅವಳನ್ನು ಮದುವೆಯಾಗಿ ಸುಖವಾಗಿದ್ದನಂತೆ. ತನ್ನ ಪ್ರಿಯೆಗಾಗಿ ಆಯಸ್ಸನ್ನು ದಾನ ಮಾಡಿದವರು ಚರಿತ್ರೆಯಲ್ಲಿ ಇದ್ದಾರೆ.”
“ಕಾಂತಾ, ಐದು ಮಂದಿ ಜಗವನ್ನು ಗೆಲ್ಲಬಲ್ಲ ಪತಿಯರಿದ್ದೂ ನಾನು ಅನಾಥಳಾಗದಂತೆ ನೋಡಿಕೊಳ್ಳಿ” ಎಂದು ಬೇಡಿಕೊಂಡಳು ದ್ರೌಪದಿ.
ಕಥೆ ಕೇಳಿಸಿಕೊಂಡ ವಲಲ ಭೀಮ, “ಪಾಂಚಾಲಿ, ರುರು ತನ್ನ ಆಯಸ್ಸನ್ನು ಇತ್ತು ಪ್ರಿಯೆಯ ಪ್ರಾಣ ಉಳಿಸಿದರೆ, ನಾನು ಕೀಚಕನ ಆಯಸ್ಸನ್ನು ಕಿತ್ತು ನನ್ನ ಪ್ರಿಯೆಯ ಮಾನ ಉಳಿಸುವೆ. ಯಾವ ಸಂಶಯವೂ ಬೇಡ ನಿನಗೆ. ಕೊಂದವನು ಭೀಮ ಎಂದು ತಿಳಿದರೆ, ಅಜ್ಞಾತವಾಸದಲ್ಲಿರುವ ನಾವು ಯಾರೆಂದು ಗೊತ್ತಾದರೆ, ಆ ಕೌರವರೆಲ್ಲರನ್ನು ಮುರಿದು ಕೊಂದು ಕೆಡಹಿ ಬಿಡುವೆ. ನಿಶ್ಚಿಂತಳಾಗು ದ್ರೌಪದಿ, ಹೆದರದಿರು.” ಎಂದು ಉಗ್ರನಾಗಿ ನಿರ್ಭೀತಿಯಿಂದ ಘರ್ಜಿಸಿದನು. ದ್ರೌಪದಿ ಆತನನ್ನು ಸಂತೈಸುತ್ತಾ, “ಸ್ವಾಮಿ, ದುಡುಕದಿರಿ, ಇನ್ನೇನು ಒಂದು ತಿಂಗಳ ಕಾಲವಷ್ಟೆ ಉಳಿದಿದೆ. ಆದಷ್ಟು ನಾಜೂಕಿನಿಂದ ಗುಟ್ಟಾಗಿಯೆ ನಮೆಗೆದುರಾದ ಕಂಟಕ ಪರಿಹರಿಸಿಕೊಳ್ಳಬೇಕು” ಎಂದಳು.
ಭೀಮನೂ ಕ್ಷಣಕಾಲ ಮೌನದಿಂದ ಯೋಚಿಸಿ, “ಅವಸರ ಪಟ್ಟರೆ ಅಪಾಯವಿದೆ. ಒಂದು ಉಪಾಯ ಮಾಡುವ, ನೀನು ಕೀಚಕನನ್ನು ನಾಳೆಯ ದಿನ ಹಗಲಿನಲ್ಲಿ ಯಾರಿಗೂ ತಿಳಿಯದಂತೆ ಕಂಡು ಮಾತನಾಡಿಸು. ನಾಳೆಯ ರಾತ್ರಿ ಸುಮಾರು ಈ ಹೊತ್ತು ಮಧ್ಯ ಜಾವದ ಕಾಲದಲ್ಲಿ ಅರಮನೆಯ ಹೊರಭಾಗದ ನೃತ್ಯಶಾಲೆಗೆ ಬರ ಹೇಳು. ನಾನಲ್ಲಿಯೆ ಇದ್ದು, ಯಾರಿಗೂ ಗೊತ್ತಾಗದಂತೆ ಆ ದುಷ್ಟನಿಗೆ ತಕ್ಕ ಶಾಸ್ತಿ ಮಾಡುವೆ” ಎಂದನು. ದ್ರೌಪದಿಗೂ ಈ ತಂತ್ರ ಆದೀತು ಎಂದು ಒಪ್ಪಿದಳು. ತುಸು ಹೊತ್ತು ಅಲ್ಲಿಯೆ ಇದ್ದು, ಯೋಜನೆ ರೂಪಿಸಿ ದ್ರೌಪದಿ ಹೋದಳು. ಭೀಮನೂ ಮಲಗಿ ನಿದ್ರಿಸಿದನು.
ಮುಂದುವರಿಯುವುದು…






























































































































