
ಬೆಂಗಳೂರು: “ಅಭಿನಯ ಸರಸ್ವತಿ” ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ಅವರು ಇಂದು ತಮ್ಮ ಮಲ್ಲೇಶ್ವರಂ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜಾ ದೇವಿ(87) ಯವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿದೆ.
1938 ಜನವರಿ 7ರಂದು ಜನಿಸಿದ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಯ ಚಿತ್ರರಂಗದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದು ಇತ್ತೀಚಿನ ವರ್ಷದಲ್ಲಿ ಕೊನೆಯದಾಗಿ 2019 ರಲ್ಲಿ ಬಂದ ಪುನೀತ್ ರಾಜಕುಮಾರ್ ಅವರ “ನಟ ಸಾರ್ವಭೌಮ” ಸಿನಿಮಾದಲ್ಲಿ ನಟಿಸಿದ್ದರು.
ಚಿತ್ರರಂಗದಲ್ಲಿ ಸರೋಜಾ ದೇವಿ ನೀಡಿದ ಅಪಾರ ಸೇವೆಗೆ ಹತ್ತಾರು ಪ್ರಶಸ್ತಿಗಳು ಬಂದಿದ್ದು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.