
ತಿರುವನಂತಪುರಂ: ನಿನ್ನೆ ಕೇರಳದ ಪಾಲಕ್ಕಾಡ್‌ನ ಕುಮಾರಂಪುತ್ತೂರು ನಿವಾಸಿಯೊಬ್ಬರು ನಿಪಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದು ಈ ಮೂಲಕ ನಿಫಾ ವೈರಸ್ಗೆ ಇದು ಎರಡನೇ ಬಲಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯು ಕೇರಳದ ಆರು ಜಿಲ್ಲೆಗಳಾದ ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮೃತಪಟ್ಟ ವ್ಯಕ್ತಿ ಸುಮಾರು 40 ಜನರನ್ನು ಭೇಟಿ ಮಾಡಿದ್ದು ಹೀಗಾಗಿ ಪಾಲಕ್ಕಾಡ್ ಮತ್ತು ಮಲಪ್ಪುರಂನಲ್ಲಿ ಅನಗತ್ಯ ಆಸ್ಪತ್ರೆ ಭೇಟಿಗಳನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ಮುಂಜಾಗೃತ ಕ್ರಮವಾಗಿ ಕುಮಾರಂಪುತ್ತೂರು ಚಂಗಲೀರಿಯ ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಹಾಗೂ ನಿಪಾದಿಂದ ಮೃತರಾದವರ ಸಂಪರ್ಕದಲ್ಲಿದ್ದವರು ಕೂಡಲೇ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.
ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಸುಮಾರು 500 ಜನರು ನಿಪಾ ಸಂಪರ್ಕ ಪಟ್ಟಿಯಲ್ಲಿದ್ದು ಮಲಪ್ಪುರಂನಲ್ಲಿ 203, ಕೋಝಿಕ್ಕೋಡ್‌ನಲ್ಲಿ 114, ಪಾಲಕ್ಕಾಡ್‌ನಲ್ಲಿ 178 ಮತ್ತು ಎರ್ನಾಕುಲಂನಲ್ಲಿ ಇಬ್ಬರು ಸಂಪರ್ಕ ಪಟ್ಟಿಯಲ್ಲಿದ್ದಾರೆ. ಮಲಪ್ಪುರಂನಲ್ಲಿ 10 ಮಂದಿ ರೋಗ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು ಒಬ್ಬರು ಐಸಿಯುನಲ್ಲಿದ್ದಾರೆ.