ಭಾಗ 251
ಭರತೇಶ ಶೆಟ್ಟಿ, ಎಕ್ಕರ್

ಭೀಮಸೇನನ ಉಗ್ರ ದೃಷ್ಟಿ, ಶಾರೀರಿಕ ಹಾವಭಾವ, ಮಾನಸಿಕ ವೇದನೆ ದ್ವಿಜೋತ್ತಮನಾಗಿದ್ದ ಕಂಕನಿಗೆ ಅರಿವಾಯಿತು. ಸೂಚ್ಯವಾಗಿ ವಾಸ್ತವ ವೇಷಕ್ಕೆ ಅನ್ವಯವಾಗುವಂತೆ ನಿರ್ದೇಶನ ನೀಡಿದ “ಎಲೈ ಪಾಕಶಾಲಾಧ್ಯಕ್ಷನೆ, ನೀನೊಬ್ಬ ಬಲಾಢ್ಯನು ಹೌದೆಂಬುವುದು ಮಲ್ಲಯುದ್ದದ ಸ್ಪರ್ಧೆಯಲ್ಲಿ ಇಲ್ಲಿರುವವರಿಗೆ ಗೊತ್ತಾಗಿದೆ. ಆದರೆ ನಿನ್ನ ಬಲವನ್ನು ಆತುರಪಟ್ಟು ಪ್ರಯೋಗಿಸಬಾರದು. ನೀನು ಆ ಹೆಮ್ಮರವನ್ನು ದಿಟ್ಟಿಸುತ್ತಿರುವೆ, ನಿನ್ನ ಪಾಕಶಾಲೆಯ ಉರುವಲಾದೀತು ಎಂಬ ದೃಷ್ಟಿಯಿಂದ ನೋಡುತ್ತಿರುವಂತಿದೆ. ಆ ಹೆಮ್ಮರವನ್ನು ಹೊಡೆದುರುಳಿಸಿ, ಸೌದೆಯಾಗಿ ಉರಿಸಿ ಸುಟ್ಟು ಬಿಡುವ ಆಲೋಚನೆ ನಿನ್ನ ದೃಷ್ಟಿಯಲ್ಲಿ ಕಾಣುತ್ತಿರುವಂತಿದೆ. ಆದರೆ ಲೋಕಕ್ಕೆ ಧರ್ಮವೇ ಆಧಾರ. ಅದೊ ಆ ಮರದಲ್ಲಿ ಎಷ್ಟೋ ಪಕ್ಷಿಗಳು ಗೂಡುಕಟ್ಟಿಕೊಂಡು ಮರಿಗಳೊಂದಿಗೆ ಸಂಸಾರ ಹೂಡಿ ಸುಖದಿಂದಿವೆ. ಧರ್ಮ ಸದೃಶವಾಗಿ ಆಶ್ರಯದಾತನಾಗಿರುವ ಆ ಮರವನ್ನು ಆತುರದಿಂದ ದುಡುಕಿ ಹಾಳುಗೆಡವಬೇಡ. ನೀನು ಯೋಚಿಸುತ್ತಿರುವುದು ಬಾಣಸಿಗನಾಗಿ ನಿನ್ನ ಅನುಕೂಲಕ್ಕಾಗಿ ಅಲ್ಲವೆ? ಅದಕ್ಕೆ ಅನ್ಯ ಮಾರ್ಗ ಹುಡುಕಿ ಬೇರೆ ಕಡೆ ಹೋಗು, ವಿವೇಚನೆಯಿಂದ ಬೇಕಾದುದನ್ನು ಹೊಂದಿಸಿಕೊಂಡು ಸಾಧಿಸಿಕೊಳ್ಳುವವನಾಗು. ಇಲ್ಲಿ ಆ ಅವಸರದ ಕೆಲಸ ಮಾಡಿದರೆ, ಬಹುಕಾಲದಿಂದ ಆಶ್ರಯಿತ ಸಂಸಾರಗಳಿಗೆ ತೊಂದರೆಯಾಗಿ ನಷ್ಟವಾದೀತು” ಎಂದನು.
ದ್ರೌಪದಿಗೆ ಧರ್ಮರಾಯನ ಧರ್ಮಸೂಕ್ಷ್ಮ ಸ್ಪಷ್ಟವಾಗಿ ಅರ್ಥವಾಯಿತು. ಆದರೂ ಆಕೆಗೆ ಆಗಿರುವ ವೇದನೆ ನೆನಪಾಗಿ, ಅಲ್ಲಿನ ಸಭೆಯಲ್ಲಿ ನೆರೆದಿರುವ ಪಂಡಿತ, ಪಾಮರ, ಪ್ರಾಜ್ಞ, ಜ್ಞಾನಿ, ವಿಕ್ರಮಿ, ಪುರುಷ ಪುಂಗವರು ಎನಿಸಿಕೊಂಡು ಧರ್ಮವನ್ನು ಅರೆದು ಕುಡಿದವರಂತೆ, ವೀರತನಕ್ಕೆ ಪ್ರತಿರೂಪದಂತೆ ಬಿಂಬಿಸಲ್ಪಡುತ್ತಾ ಕುಳಿತಿದ್ದವರು ಈಗ ಅಧರ್ಮ – ಅತಿಕ್ರಮಣವನ್ನು ಪ್ರಶ್ನಿಸದೆ – ಪ್ರತಿಭಟಿಸದೆ ಸಹಿಸಿಕೊಂಡಿದ್ದಾರೆ. ಮೌನಿಗಳಾದವರ ಆ ಅಸಹಾಯಕತೆ – ಷಂಡತನವನ್ನು ನೋಡಿ ಅಸಹನೀಯ ನೋಟವನ್ನು ಬೀರಿದಳು. ಆ ಕರುಣಾದ್ರ ನೋಟವನ್ನು ಏಕಾಗ್ರತೆಯಿಂದ ನೋಡುತ್ತಿದ್ದ ಧರ್ಮರಾಯನಿಗೆ ಕಣ್ಣೋಟದಲ್ಲೆ ಸಾವಿರ ಶರಗಳು ಏಕ ಕಾಲದಲ್ಲಿ ಚುಚ್ಚಿದಷ್ಟು ನೋವು, ಧರ್ಮಸಂಕಟ ಆಯಿತು. ಸ್ವಯಂ ಚಕ್ರವರ್ತಿ ಪೀಠ ಅಲಂಕೃತನಾದ ನನ್ನ ವಾಮಭಾಗದಲ್ಲಿ ಸಾಮ್ರಾಜ್ಞಿಯಾಗಿ ಶೋಭಿಸುವ ಈ ಪುಣ್ಯವತಿಗೆ ಇಂತಹ ದುಸ್ಥಿತಿ, ಅದೂ ತನ್ನ ಕಣ್ಣೆದುರು ಆಗುತ್ತಿರುವಾಗ ಸೈರಿಸಿ ನಿಲ್ಲುವ ಅನಿವಾರ್ಯತೆ ತನ್ನದಾಯಿತಲ್ಲಾ? ಇವರ ಈ ಮತ್ಸ್ಯದೇಶದ ಯಾವ ಸೇನೆ, ವೀರರು, ಚತುರಂಗ ಬಲವಿದ್ದರೂ ನಾವೈವರು ನಿಂತು ಅರೆಕ್ಷಣದಲ್ಲಿ ಮಣಿಸಿ ಮೆರೆಯುವ ಸಾಮರ್ಥ್ಯವಿದ್ದರೂ ಅದುಮಿ ಕಾಯುವ ದರಿದ್ರ ಸನ್ನಿವೇಶ ನಮ್ಮದಾಗಿ ಹೋಯಿತೇ? ಸಹನೆ ಮೀರಿತು, ಮೈ ಬೆವರಿತು. ತಕ್ಷಣ ಜಾಗೃತವಾಯಿತು ಧರ್ಮ ಪ್ರಜ್ಞೆಯ ಬುದ್ಧಿ. ಧರ್ಮವೇ ಜಗದ ನಿತ್ಯ ಸಂರಕ್ಷಕ ಎಂದು ನಂಬಿದವರು, ಈಗಲೂ ನಂಬುತ್ತಿದ್ದೇವೆ, ಮುಂದೆಯೂ ಅದನ್ನೇ ನಂಬಿ ಬದುಕಲಿದ್ದೇವೆ. ಏನು ಕಳಕೊಂಡರೂ ಧರ್ಮವೊಂದನ್ನು ಎಡೆಬಿಡದೆ ಪಾಲಿಸುವ ನಾವು ನಮ್ಮ ಉದ್ವೇಗಗಳನ್ನು ಬಲಿಕೊಡಬೇಕು ಹೊರತು ಅಧರ್ಮಿಗಳಾಗಲಾರೆವು. ಧರ್ಮವೇ ಮಹಾಬಲಿ ಎಂದರಿತು ಉಸಿರೆಳೆದು ಬಿಡುವವರು ನಾವು. ಅದೇ ನಿತ್ಯ ಸತ್ಯವಾಗಲಿ. ಹೀಗೆ ತನ್ನನ್ನು ತಾನು ಸಂತೈಸಿ ಸುಮ್ಮನಾಗಿ ಕುಳಿತು ಬಿಟ್ಟನು.
ಇಷ್ಟೆಲ್ಲಾ ಆಗುತ್ತಿರುವಾಗ ವಿರಾಟ, ಮಹಾರಾಜನಾಗಿ ಸಭೆಯನ್ನುದ್ದೇಶಿಸಿ ಹೇಳತೊಡಗಿದನು,”ನೋಡಿ ನಮ್ಮೆದುರಲ್ಲಿ ಈಗ ಏನು ನಡೆಯಿತು ಅದನ್ನಷ್ಟೆ ನಾವು ನೋಡಿದ್ದೇವೆ. ಹೀಗೇಕಾಯಿತು ಎಂಬ ಪೂರ್ವಾಪರ ನಾವು ಬಲ್ಲವರಲ್ಲ. ಹಾಗಾಗಿ ಪೂರ್ಣ ವಿಚಾರ ತಿಳಿಯದೆ ನ್ಯಾಯ ನೀಡುವುದು ಅಸಮಂಜಸ. ಎಲೈ ಸೈರಂಧ್ರಿಯೆ, ನಾಳೆಯ ಸಭೆಯಲ್ಲಿ ಬಂದು ನೀನು ದೂರಿತ್ತರೆ, ವಿಮರ್ಷೆ ಮಾಡಿ ಮತ್ತೇನೆಂದು ತೀರ್ಮಾನಿಸಬಹುದು” ಎಂದನು.
ಇದನ್ನು ಕೇಳಿದ ಸಭಾಸದರು ತಮ್ಮ ತಮ್ಮೊಳಗೆ ಗುಸು ಗುಸು ಮಾತನಾಡತೊಡಗಿದರು. ಕೆಲವರು ಅಬಲೆಯ ಅಸಹಾಯಕತೆಗೆ ಮರುಗಿದರು. ಇನ್ನು ಕೆಲವರು ಕೀಚಕನ ಕಚ್ಚೆಹರಕುತನ ಬುದ್ಧಿಯನ್ನು ದೂಷಿಸಿದರು. ಧರ್ಮ ಬುದ್ಧಿಯುಳ್ಳ ಸಮಾನ ಮನಸ್ಕರಾದ ಹಲವರು ವಿರಾಟನ ದೌರ್ಬಲ್ಯ, ಕೀಚಕನ ಮೇಲಿನ ಅವಲಂಬನೆ ಮತ್ತು ಆತನ ಬಗೆಗಿನ ಭಯವನ್ನು ಆಡಿಕೊಂಡು ಹಳಿದರು. ಮತ್ತುಳಿದ ಕೆಲವು ಕೀಚಕನ ಬುದ್ಧಿಯವರು ದ್ರೌಪದಿಯ ಸೌಂದರ್ಯವನ್ನು ವರ್ಣಿಸುತ್ತಾ, ಆಸ್ವಾದಿಸಿ ವಿಮರ್ಷಿಸತೊಡಗಿದರು.
ಪರಿಸ್ಥಿತಿ ಹೀಗಾಗುತ್ತಿರುವಾಗ ಧರ್ಮರಾಯನಿಗೆ ಮೈ ಉರಿಯತೊಡಗಿತು. ಆತನ ಸೂಚ್ಯ ನಿರ್ದೇಶನ ದ್ರೌಪದಿಯನ್ನುಳಿದು ಯಾರೊಬ್ಬರಿಗೂ ಅರ್ಥವಾಗಿರಲಿಲ್ಲ. ಹೀಗೆಯೆ ಮುಂದುವರಿಯಗೊಟ್ಟರೆ ಸ್ಥಿತಿ ಉಲ್ಬಣವಾದೀತು ಎಂದು ಅರಿತ ಧರ್ಮರಾಯ ಚಾಣಾಕ್ಷನಾಗಿ ಹೇಳಿದ “ಸೈರಂಧ್ರೀ, ನೀನಿಲ್ಲಿ ನಿಲ್ಲಬೇಡ, ಅರಸನು ಹೇಳಬೇಕಾದುದನ್ನು ಹೇಳಿಯಾಗಿದೆ. ಅದರ ಮೇಲೆ ಇನ್ನೇನನ್ನೂ ನಿರೀಕ್ಷಿಸಿ ಇಲ್ಲಿ ಕಾಯುವುದು ಬೇಡ. ಇಲ್ಲಿಂದ ಹೋಗು, ವೀರ ಪತ್ನಿಯರು ಪತಿಯನ್ನು ಅನುಸರಿಸಿ ಹೋದರೆ ರಕ್ಷಿಸಲ್ಪಡುತ್ತಾರೆ. ಕೋಪಕ್ಕೆ ಅನುಕೂಲಕರ ಕಾಲ ಕೂಡಿ ಬಂದರೆ ಮಾತ್ರ ಯಶಸ್ಸು ಸಿಗುವುದು. ಎಲ್ಲೆಂದರಲ್ಲಿ ಅಂತಹ ಕ್ರೋಧಾವೇಶ ಪ್ರಕಟಿಸಿದರೆ ಆಪತ್ತು ಎದುರಾಗುವುದು ಹೊರತು ಪರಿಹಾರ ಸಿಗದು. ನೀನೂ ಇದ್ದಿಯಾ, ನಿನ್ನವರೂ ಇದ್ದಾರೆ. ಅಲ್ಲಿಗೆ ಹೋಗಿ ನಿನ್ನ ಕ್ಷೇಮವನ್ನು ಹುಡುಕಿ ಪಡೆದುಕೋ. ಹೆಣ್ಣಾದವಳಿಗೆ ಸತ್ಪತಿಯೆ ಸಂಪತ್ತು- ಅಂತಹ ಆಪತ್ಬಾಂಧವನ ಕಕ್ಷೆಯೆ ರಕ್ಷಾ ಕವಚ. ಸುಮ್ಮನೆ ನೀನಿಲ್ಲಿ ನಿಂತು ದ್ಯೂತ ಸಭೆಯ ವಿನೋದಕ್ಕೆ ಅಡ್ಡಿಯಾಗಬೇಡ, ಮಹಾರಾಜನ ಸಂತೋಷಕ್ಕೆ ದೋಷ ತರಬೇಡ”. ಎಂದು ನುಡಿದನು.
ಅಷ್ಟು ಕೇಳಿದ ಕೂಡಲೆ ದ್ರೌಪದಿ ಮರುಭೂಮಿಯಲ್ಲಿ ಒರತೆ ಕಂಡವಳಂತೆ, ಏನು ಉಪಾಯ ಹೊಳೆಯಿತೊ! ಅಲ್ಲಿಂದ ಹೊರಟು ಹೋದಳು. ದ್ರೌಪದಿ ನಿರ್ಗಮಿಸಿದುದನ್ನು ಕಂಡು ಮಾರುತ ನಂದನ ಭೀಮ ಹೊರಬಂದು ಗಾಳಿಗೆ ಗುದ್ದಿ, ಭೂಮಿಗೆ ಒದ್ದು ತನ್ನೊಳಗೆ ಬಂಧಿಸಲ್ಪಟ್ಟಿದ್ದ ಆಕ್ರೋಶವನ್ನು ಹೊರಹಾಕಿ ಪಾಕಶಾಲೆ ಸೇರಿದನು.
ದ್ರೌಪದಿ ಬರಿಗೈಯಲ್ಲಿ ಮರಳಿ ಬಂದುದನ್ನು ಕಂಡು ಸುದೇಷ್ಣೆಗೆ ಆಶ್ಚರ್ಯವಾಯಿತು. ರಾಣಿಗೆ ಒಂದೆಡೆ ಕೀಚಕನ ಭಯ, ಇನ್ನೊಂದೆಡೆ ತನ್ನ ಸೈರಂಧ್ರಿ ಹೇಳಿದ ಆಕೆಯ ಗಂಧರ್ವ ಪತಿಯರ ಹೆದರಿಕೆ. ಈಗ ಏನಾಯಿತೊ ಎಂಬ ಆತಂಕದಿಂದ “ಅಮ್ಮಾ ಮಾಲಿನಿ, ಯಾಕೆ ಮ್ಲಾನವದನೆಯಾಗಿ ಬಂದಿರುವೆ? ಯಾಕೆ ಈ ಚಿಂತಾಕ್ರಾಂತ ಭಾವ ನಿನ್ನ ಮನದೊಳಗಾವರಿಸಿದೆ?” ಎಂದು ಪ್ರಶ್ನಿಸಿದಳು. ದ್ರೌಪದಿ ಅಳುತ್ತಾ ಕೀಚಕ ತನ್ನನ್ನು ಬಲಾತ್ಕರಿಸಲು ಯತ್ನಿಸಿದ, ರಾಜಸಭೆಗೆ ಓಡಿದೆ. ಅಲ್ಲಿ ನನ್ನ ಕೂದಲು ಹಿಡಿದೆಳೆದು ಒದ್ದು ಕೆಡಹಾಕಿದ ಎಲ್ಲ ವೃತ್ತಾಂತ ವಿವರಿಸಿ, ನ್ಯಾಯ ಸಿಗದೆ ಬಂದ ಕಥೆ ಹೇಳಿ ದುಃಖಿಸಿದಳು. ಆಗ ಸುದೇಷ್ಣೆ “ಅಳ ಬೇಡಮ್ಮಾ, ಕೀಚಕ ಅತಿ ಬಲಾನ್ವಿತನಿದ್ದಾನೆ. ಇಲ್ಲಿ ಆತನನ್ನು ನಿಯಂತ್ರಿಸುವವರು ಯಾರು ಇಲ್ಲ. ಆತನಿಗೆ ಸಹಕಾರಿಯಾದವರಿಗೆ ಮಾತ್ರ ಉಳಿಗಾಲ ಎಂಬಂತಾಗಿ ಹೋಗಿದೆ ಇಲ್ಲಿನ ಪರಿಸ್ಥಿತಿ” ಎಂದಳು. ಈ ಮಾತು ಪರೋಕ್ಷವಾಗಿ ಆತನನ್ನು ಒಪ್ಪಿ ಸಹಕರಿಸು ಎಂದೋ ಇಲ್ಲಾ ನಿಜ ವೇದನೆಯ ಪ್ರಕಟನೆಯೋ ಎಂಬ ದ್ವಂದ್ವದಂತಿತ್ತು. ದ್ರೌಪದಿ ಮಾತ್ರ ವಿಚಲಿತಳಾಗದೆ “ಮಹಾರಾಣಿ, ನಾನು ಮೊದಲೆ ಹೇಳಿರುವೆ, ಸೈರಂಧ್ರಿ ವೃತ್ತಿಯನ್ನಷ್ಟೆ ಮಾಡುವುದು. ಅನ್ಯ ಕಾರ್ಯ ಮಾಡಲಾರೆ. ನನ್ನನ್ನು ರೂಪವತಿ ಎಂದು ಬಣ್ಣಿಸಿದ ನಿನ್ನ ಮನದೊಳಗೆ ಸಂಶಯ ಮೂಡಿದಾಗ, ನಿವಾರಿಸಲು ಸತ್ಯ ವಾಕ್ಯವನ್ನು ಪ್ರಮಾಣೀಕರಿಸಿ ಹೇಳಿದ್ದೆ ನೆನಪಿದೆಯೆ? ನನ್ನಿಂದ ಕಾಮಾಚಾರದ ಕೆಲಸ ಯಾವ ಕ್ಷಣದಲ್ಲೂ ಆಗದು. ಪರಪುರುಷರ ಸಹವಾಸ ಸತ್ತರೂ ನಾನು ಮಾಡಲಾರೆನೆಂದು ಖಂಡಿತವಾಗಿ ಹೇಳಿದ್ದೆ. ವಿವಾಹಿತೆಯಾದ ನನ್ನ ಪತಿಯರ ಕುರಿತಾಗಿಯೂ ಎಚ್ಚರಿಸಿದ್ದೇನೆ. ಈಗ ಕೈ ಮೀರಿ ಹೋದ ಈ ಗಳಿಗೆಯಲ್ಲಿ, ನನ್ನ ಪತಿ ಮಹಾಶಯರು ಸುಮ್ಮನುಳಿಯುವರೆ? ಗಂಧರ್ವರಾದ ಅವರು ನನಗೆ ನ್ಯಾಯ ನೀಡದೆ ಬಿಡುವರೆ? ಮತ್ತೆ ಯಾರನ್ನು ದೂಷಿಸಿದರೂ ಫಲವಿಲ್ಲ” ಎಂದಳು. ಸುದೇಷ್ಣೆಗೆ ಭಯವೇರಿತು. ಏನೇನೊ ಯೋಚನೆಗಳು ಮನದೊಳಗೆ ಮಿಂಚಿ ಹೋದವು. ತನು ಕಂಪಿಸಿತು, ತಲೆ ತಿರುಗಿದಂತಾಯಿತು. ಇನ್ನೇನು ಕಾದಿದೆಯೋ ಎಂಬ ದುಃಖ ಸಮುದ್ರದಲೆಗಳಂತೆ ಅಬ್ಬರಿಸಿ – ಅಪ್ಪಳಿಸುತ್ತಾ ಗೊಂದಲಕ್ಕೊಳಗಾದಳು, ಭೀತಳಾಗಿ ಬೆವರಿದಳು.
ಮುಂದುವರಿಯುವುದು…