
ಮಂಗಳೂರು: ಗೃಹ ಸಚಿವ ಡಾ. ಜಿ ಪರಮೇಶ್ವರ್ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ ವೇಳೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 545 ಪಿಎಎಸ್ಐಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ತರಬೇತಿಗೆ ಹೋಗಿದ್ದಾರೆ. ರಾಜ್ಯದಲ್ಲಿ ಇನ್ನೂ 402 ಪಿಎಎಸ್ಐ ಹುದ್ದೆಗಳ ನೇಮಕಾತಿ ಬಾಕಿಯಿದ್ದು ಅದನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ 10-15 ಸಾವಿರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ನಾವು ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಹೊರ ಠಾಣೆ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್ಪಿ ಅವರಿಂದ ಪ್ರಸ್ತಾವನೆ ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಮಂಗಳೂರಿನ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಸಾಧಕ-ಬಾಧಕಗಳನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.