ಭಾಗ -248
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೪೮ ಮಹಾಭಾರತ
ಯುಧಿಷ್ಠಿರನು ಅರಮನೆಯ ಒಳಗೆ ಮಹಾರಾಜನ ಒಡನಾಟದಲ್ಲಿ ಕಾಲಕಳೆಯಬೇಕಾದ ಸಂದರ್ಭ ನಾನು ಹೇಗೆ ನಡೆದುಕೊಳ್ಳಬೇಕೆಂಬ ವಿಚಾರದ ಬಗ್ಗೆ ಗಹನ ಆಲೋಚನೆ ಮಾಡಿದನು. ಹಿಂದೆ ಧೌಮ್ಯರು ಮತ್ತು ಮಹಾತ್ಮರಾದ ಋಷಿಮುನಿಗಳು ಉಪದೇಶಿಸಿದ ಸಖನಾಗುವವನು ಹೇಗಿರಬೇಕೆಂಬ ಸೂಕ್ಷ್ಮಗಳನ್ನು ಮನನ ಮಾಡಿಕೊಳ್ಳುತ್ತಾ ಅಂತೆಯೆ ವ್ಯವಹರಿಸ ತೊಡಗಿದನು.
ಸಖನು ಬಾಗಿಲ ಬಳಿ ಬಂದು ಅಪ್ಪಣೆ ಪಡೆದ ನಂತರವೆ ಒಳ ಪ್ರವೇಶಿಸಬೇಕು. ರಾಜನಲ್ಲಿ ಪೂರ್ಣ ವಿಶ್ವಾಸ ಇಡಕೂಡದು. ಎಲ್ಲರೂ ಬಯಸುವಂತಹ ಸಾಮಾನ್ಯ ಔನ್ನತ್ಯವನ್ನಾಗಲಿ ಆಶಯವನ್ನಾಗಲಿ ಬಯಸಬಾರದು. ರಾಜನಿಗೆ ಪ್ರಿಯನಾಗಿರುವೆನೆಂಬ ಕಾರಣದಿಂದ ರಾಜನ ವಾಹನವನ್ನಾಗಲಿ, ಪರ್ಯಂಕವನ್ನಾಗಲಿ, ಪೀಠ, ಗಜವನ್ನಾಗಲಿ ಏರಿ ಕುಳಿತುಕೊಳ್ಳಬಾರದು. ಬದಲಿಗೆ ಯಜಮಾನನಿಂದ ಅಂತರ ಕಾಯ್ದುಕೊಳ್ಳಬೇಕು. ನಂತರ ಎಲ್ಲಿ ಕುಳಿತರೆ ದುಷ್ಟರು ಸಂಶಯ ಪಡುತ್ತಾರೊ ಅಲ್ಲಿ ಕೂರಬಾರದು. ರಾಜನು ಕೇಳದೆ ಉಪದೇಶ ಮಾಡಬಾರದು. ಗೌರವ ಭಾವದಿಂದ ಸೇವೆ ಮಾಡುತ್ತಾ ಬದುಕಬೇಕು. ಸುಳ್ಳಾಡುವ ಸೇವಕರಿಗೆ ಗೌರವವಿಲ್ಲ, ಬದಲಿಗೆ ಅನುಮಾನ – ಅವಮಾನಕ್ಕೆ ತುತ್ತಾಗುತ್ತಾರೆ. ಜಾಣನಾಗಿದ್ದು ಯಾವ ಕಾರಣಕ್ಕೂ ರಾಜನ ಪತ್ನಿ, ಅಂತಃಪುರದ ಜನರು ಮತ್ತು ರಾಜನನ್ನು ದ್ವೇಷಿಸುವವರ ಜೊತೆ ಸ್ನೇಹ ಸಲುಗೆ ಬೆಳೆಸಬಾರದು. ಲಘುವಾದ ಅಥವಾ ಸಾಮಾನ್ಯವಾದ ಕೆಲಸವೆ ಆದರೂ ರಾಜನಿಗೆ ತಿಳಿದಿರುವಂತೆಯೆ ಮಾಡಬೇಕು. ದೇವರ ಸೇವೆಯಂತೆ ಶ್ರದ್ದೆ- ನಿಷ್ಠೆಯಿಂದ ಸೇವೆ ಮಾಡಬೇಕು. ಸುಮ್ಮನೆ ತೋರಿಕೆಗೆ ಕೆಲಸ ಮಾಡುವ ಸೇವಕನ ಯಶಸ್ಸು ತಾತ್ಕಾಲಿಕ ಮಾತ್ರ. ಭವಿಷ್ಯತ್ತಿನಲ್ಲಿ ಬಣ್ಣ ಬಯಲಾಗಿ ಹಿಂಸೆಗೊಳಗಾಗುತ್ತಾನೆ. ಯಜಮಾನನಾದ ರಾಜ ಯಾವ ಕಾರ್ಯ ವಿಧಿಸುತ್ತಾನೊ ಅದನ್ನು ಒಪ್ಪಿ ಮಾಡಬೇಕು. ರಾಜನ ತಪ್ಪು ಪ್ರಮಾದಗಳನ್ನು ಬಹಿರಂಗವಾಗಿ ಹೇಳುತ್ತಾ ಅವಹೇಳನ ಮಾಡಬಾರದು. ರಾಜನ ಬಗ್ಗೆ ಕೋಪಗೊಳ್ಳ ಬಾರದು. ಸಮರ್ಥಿಸಿಕೊಳ್ಳುವ ಸಂದರ್ಭ ಬಂದಾಗ ಹಿತವೂ ಪ್ರಿಯವೂ ಆದುದನ್ನಷ್ಟೆ ಹೇಳಬೇಕು. ಅನಿವಾರ್ಯತೆ ಬಂದರೆ ಪ್ರಿಯವಾದುದಕ್ಕಿಂತಲೂ ಹಿತವಾದುದನ್ನು ಹೇಳಬೇಕು. ಎಲ್ಲಾ ವಿಚಾರ – ಮಾತುಕತೆಗಳಲ್ಲೂ ಅವನಿಗೆ ಅನುಕೂಲಕರನಾಗಿರಬೇಕು. ಅಪ್ರಿಯವೂ – ಅಹಿತವೂ ಆದುದನ್ನು ಹೇಳಕೂಡದು. ಸೇವಕನಾದ ನಾನು ರಾಜನಿಗೆ ಪ್ರಿಯನಲ್ಲವೆಂದು ತಿಳಿದು ಕೊಂಡು ಪಂಡಿತನಾದ ಸೇವಕ ರಾಜನನ್ನು ಉಪಚರಿಸಬೇಕು. ಪ್ರೀತಿಯ ಸೇವಕ ಎಂಬ ಭಾವನೆ ಮನದಲ್ಲಿ ಮೂಡಿದರೆ ಅದು ಸಲುಗೆಯಾಗಿ ಪರಿವರ್ತನೆಗೊಂಡು ಅನಾಹುತಕ್ಕೆ ಕಾರಣವಾಗುತ್ತದೆ. ಹಾಗಾಗಿ ಅಪ್ರಮತ್ತನಾಗಿ – ಅಹಂಭಾವ ತೊರೆದು ಸಂಯಮದಿಂದ ಹಿತವನ್ನೂ ಪ್ರಿಯವಾದ ಕಾರ್ಯವನ್ನು ಮಾಡುತ್ತಿರಬೇಕು. ರಾಜನಿಗೆ ಇಷ್ಟವಲ್ಲದ್ದನ್ನು ಮಾಡಬಾರದು. ಮತ್ತು ಆತನಿಗೆ ಅಹಿತರಾದವರೊಡನೆ ಇರಕೂಡದು. ತನ್ನ ಜವಾಬ್ದಾರಿಯುತ ಸ್ಥಾನದಿಂದ ಕದಲಬಾರದು. ರಾಜನ ಮುಂದೆ ದೊಡ್ಡ ಮಾತುಗಳನ್ನು ಆಡಕೂಡದು. ರಾಜನಾಡಿದ ಸುಳ್ಳನ್ನು, ತಪ್ಪನ್ನು ಜನರ ಮುಂದೆ ಆಡಿಕೊಳ್ಳಬಾರದು. ರಾಜನಿಗೆ ಹಿತವರಲ್ಲದ ಜನರ ಸ್ನೇಹ ಮಾಡಬಾರದು. ತಾನು ಶೂರ, ಬುದ್ಧಿಶಾಲಿ, ಪ್ರತಿಭಾವಂತ ಎಂದು ರಾಜನೆದುರು ತೋರಿಸಿಕೊಳ್ಳುವುದು, ಹೇಳುವುದು ಮಾಡಕೂಡದು. ರಾಜನ ಮುಂದೆ ಕೋಪಗೊಳ್ಳುವುದು, ಅನಗತ್ಯ ವಿಚಾರಗಳಲ್ಲಿ ಬಾಯಿ ಹಾಕುವುದು, ಸೀನುವುದು, ಉಗುಳುವುದು, ಕೆಮ್ಮುವುದು, ಹೂಸು ಬಿಡುವುದು ಇತ್ಯಾದಿ ಕರ್ಮಗಳನ್ನು ನಿಯಂತ್ರಿಸಿ ಆದಷ್ಟು ಮೆಲ್ಲಗೆ ಮಾಡಿ ಗೌರವ ತೋರಿಸಬೇಕು. ರಾಜನಿಂದ ಹಾಸ್ಯ ಪ್ರಸಂಗಗಳು ನಡೆಯುತ್ತಿರುವಾಗ ಅತಿ ಗಾಢವಾಗಿ ಹರ್ಷ ವ್ಯಕ್ತಪಡಿಸುವುದು, ಹುಚ್ಚನಂತೆ ನಗುವುದು ನಿಷಿದ್ಧ. ಅತಿ ಧೈರ್ಯದಿಂದ ವರ್ತಿಸಬಾರದು, ಅಂತೆಯೆ ಗಾಂಭಿರ್ಯವನ್ನು ತಳೆಯಕೂಡದು. ಪ್ರಸನ್ನತೆಯಿಂದ ಜನಿಸುವ ನಸುನಗೆಯನ್ನು ಮಾತ್ರ ತೋರಬೇಕು. ಲಾಭವಾದಾಗ ಹಿಗ್ಗದೆ, ಅವಮಾನವಾದಾಗ ಕುಗ್ಗದೆ ಜಾಗೃತ ಸ್ಥಿತ ಪ್ರಜ್ಞೆ ತೋರುತ್ತಿರಬೇಕು. ಹಿಂದೆ ಪುರಸ್ಕೃತನಾಗಿದ್ದ ಸೇವಕ, ಯಾವುದೋ ತನ್ನಿಂದಾದ ತಪ್ಪಿಗೆ ದಂಡಿತನಾದರೆ ಸೈರಿಸಿ ತಿದ್ದಿಕೊಳ್ಳಬೇಕೆ ಹೊರತು ರಾಜನನ್ನು ವಿರೋಧಿಸಬಾರದು. ತನ್ನ ಲಾಭಕ್ಕಾಗಿ ಲಾಬಿ ಮಾಡುವುದು, ಒತ್ತಾಯದಿಂದ ತನ್ನ ಪ್ರಯೋಜನಕ್ಕಾಗಿ ರಾಜನನ್ನು ಪ್ರಾರ್ಥಿಸಿ ಕೇಳಿ ಬಯಸಿದ್ದನ್ನು ತನ್ನದಾಗಿಸಿ ಕೊಳ್ಳುವ ಸೇವಕ ಕ್ರಮೇಣ ಮೌಲ್ಯ ಕಳೆದುಕೊಳ್ಳುತ್ತಾನೆ. ಕಳೆಗುಂದದೆ, ಶೂರನಾಗಿ ರಾಜನ ನೆರಳಿನಂತೆ ಅನುಸರಿಸಿ ಸತ್ಯವಾದಿಯಾಗಿ, ಮೃದು ಸ್ವಭಾವದಿಂದ, ಸಂಯಮದಿಂದ ವ್ಯವಹರಿಸಬೇಕು. ಬೇಸಿಗೆ, ಚಳಿ, ಮಳೆ, ಹಗಲು, ರಾತ್ರಿ ಏನೇ ಇರಲಿ ರಾಜಾಜ್ಞೆಯಾದಾಗ ಹಿಂದೆ ಮುಂದೆ ನೋಡದೆ ಪಾಲಿಸಬೇಕು. ಮನೆಯಿಂದ ಹೊರಗಿದ್ದು ದೂರಹೋಗಿ ವಾಸ ಮಾಡುತ್ತಾ ಕರ್ತವ್ಯ ನಿಭಾಯಿಸುವ ಜವಾಬ್ದಾರಿ ಬಂದರೆ ತನ್ನ ಪ್ರಿಯ ಬಂಧುಗಳನ್ನು ನೆನೆದು ದುಃಖಿಸಬಾರದು. ಹಾಗೆಂದು ಮರೆಯಲೂ ಬಾರದು. ರಾಜನಿಗಿಂತ ಉತ್ತಮವಾದ ವಸನ ಭೂಷಣ ಧರಿಸಕೂಡದು, ಗುಪ್ತ ವಿಚಾರಗಳನ್ನು ಬಯಲು ಮಾಡಬಾರದು. ಯಾವುದಾದರೂ ಕಾರ್ಯಕ್ಕೆ ನಿಯುಕ್ತನಾದಾಗ ರಾಜಧನವನ್ನು ಸ್ವಂತಕ್ಕೆ ಬಳಸಬಾರದು- ದ್ರವ್ಯಾಪಹಾರ ಮಾಡಕೂಡದು. ರಾಜನು ತಾನಾಗಿ ನೀಡುವ ವಾಹನ, ವಸ್ತು, ವಸ್ತ್ರ, ಅಲಂಕಾರ, ದ್ರವ್ಯಗಳನ್ನು ಬಳಸಬೇಕು. ಹೀಗೆಲ್ಲಾ ಸೇವಕರಿಗೆ ಉಚಿತಾನುಚಿತ ಪಾಲನಾ ಗುಣಧರ್ಮಗಳಿವೆ. ಅಂತೆಯೆ ರಾಜನ ಬಳಿ ಇರಬೇಕಾದ ನಾನು ಇವುಗಳನ್ನೆಲ್ಲಾ ಗಮನಿಸಿ ವ್ಯವಹರಿಸಿದರೆ ಸೌಖ್ಯವೂ, ಮಾನವೂ ಸ್ಥಿರವಾಗಿ ಉಳಿದು ಬೆಳೆಯುತ್ತದೆ ಎಂದು ಯೋಚಿಸಿ ತೀರ್ಮಾನಿಸಿದನು. ಹೀಗೆ ನಿರ್ಣಯಿಸಿ ಅತಿ ಜಾಗ್ರತೆಯಿಂದ ವಿರಾಟ, ಆತನ ಬುದ್ಧಿವಂತ ಮಂತ್ರಿ ಮಾಂಡಲೀಕರು, ಪುರೋಹಿತರು, ಆಚಾರ್ಯರು, ಮಹಾರಾಣಿಯರು, ರಾಜಕುಮಾರ ರಾಜಕುಮಾರಿಯರು ಎಲ್ಲರ ಬಗ್ಗೆಯೂ ಎಚ್ಚರದಿಂದಿದ್ದು ಎಷ್ಟು ಬೇಕೊ ಅಷ್ಟೆ ವ್ಯವಹಾರ ಮಾಡುತ್ತಾ ಕಾಲ ಕಳೆಯತೊಡಗಿದನು. ದ್ರೌಪದಿ, ಅರ್ಜುನ, ಭೀಮ, ನಕುಲ ಸಹದೇವರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುತ್ತಾ ಉತ್ಕೃಷ್ಟ ಸೇವಕರಾಗಿ ವಿಶಿಷ್ಟ ಪ್ರೀತಿಗೆ ಪಾತ್ರರಾದರು.
ಮತ್ಸ್ಯ ದೇಶದ ಅರಸನಾದ ವಿರಾಟರಾಜನಿಗೆ ಇಬ್ಬರು ರಾಣಿಯರು. ಹಿರಿಯವಳು ‘ಸುರಥೆ’. ಶಂಖ ಮತ್ತು ಶ್ವೇತ ಎಂಬ ಇಬ್ಬರು ಮಕ್ಕಳು ಅವಳಿಗಿದ್ದಾರೆ. ಕಿರಿಯವಳು ಸುದೇಷ್ಣೆ. ಮಗ ಉತ್ತರ ಕುಮಾರ (ಭೂಮಿಂಜಯ ಎಂಬ ಹೆಸರೂ ಇದೆ) ಮತ್ತು ಅವಳ ಮಗಳು ಉತ್ತರೆ.
ಕಿರಿಯ ರಾಣಿ ಸುದೇಷ್ಣೆ ಕೇಕಯ ದೇಶದ ರಥಕಾರ ಎಂಬ ರಾಜನ ಮಗಳು. ರಾಜಾ ರಥಕಾರನಿಗೂ ಇಬ್ಬರು ಪತ್ನಿಯರು. ಸುದೇಷ್ಣೆ ಕಿರಿಯ ರಾಣಿ ಮಾಳವಿಯ ಮಗಳು. ಹಿರಿಯ ರಾಣಿಗೆ ಕೀಚಕ ಮತ್ತವನ ಸೋದರರು ಒಟ್ಟು ನೂರ ಆರು ಮಂದಿ ಗಂಡು ಮಕ್ಕಳು. ಈ ರಥಕಾರ ಸೂತ (ಸಾರಥ್ಯ) ಜಾತಿಯವನು. ಆದರೂ ಕ್ಷತ್ರಿಯನಾದ ವಿರಾಟ ಸುದೇಷ್ಣೆಯ ಅಪ್ರತಿಮ ಚೆಲುವಿಗೆ ಮನಸೋತು ಕಿರಿಯ ರಾಣಿಯ ಸ್ಥಾನಮಾನ ನೀಡಿ ಮದುವೆಯಾಗಿದ್ದ. ಆ ಸಮಯ ವಿರಾಟ ವಯೋವೃದ್ಧನಾಗಿದ್ದ. ಈ ವೈವಾಹಿಕ ಸಂಬಂಧದಿಂದ ಕೀಚಕನು ಕ್ಷತ್ರಿಯ ರಾಜನ ಸಂಬಂಧದಿಂದ ರಾಜಪರಿವಾರ ಎಂಬ ಅಹಂಕಾರ ಬೆಳೆಸತೊಡಗಿದ್ದನು. ಮಾತ್ರವಲ್ಲ ಸೋದರಿ ಸುದೇಷ್ಣೆಯ ಜೊತೆ ವಿರಾಟ ದೇಶಕ್ಕೆ ತನ್ನ ಶತ ಸಹೋದರರ ಜೊತೆಯಾಗಿ ಬಂದಿದ್ದನು. ಮೊದಲೆ ವೀರ ವಿಕ್ರಮಿಯಾಗಿದ್ದ ಕೀಚಕನಿಗೆ ಮತ್ಸ್ಯ ದೇಶದ ಸೇನಾಧಿಪತ್ಯ ನೀಡಿ ರಾಜ ವಿರಾಟ ನಿಶ್ಚಿಂತನಾಗಿ ಕಿರಿಯರಾಣಿ ಸುದೇಷ್ಣೆಯ ಜೊತೆ ಸುಖವಾಗಿ ಕಾಲಕಳೆಯತೊಡಗಿದ್ದನು. ಕೀಚಕ ಮಾತ್ರ ಸೈನ್ಯದ ಅಧಿಕಾರ ದೊರೆತ ಕೂಡಲೆ ತನ್ನ ಸಹೋದರರೆಲ್ಲರಿಗೂ ಸೇನೆಯ ಎಲ್ಲಾ ಪ್ರಮುಖ ಹುದ್ದೆಗಳನ್ನು ನೀಡಿ ಪೂರ್ಣ ನಿಯಂತ್ರಣ ಹಿಡಿತ ಸಾಧಿಸಿದ್ದನು. ವೃದ್ದನೂ ಆಗಿದ್ದ ವಿರಾಟನ ಮೇಲೂ ಅಧಿಕಾರ ಚಲಾಯಿಸುವಷ್ಟು ಬಲಾಢ್ಯನಾಗಿ ಹೋದನು. ಹಾಗೆಂದು ಕೀಚಕನೇನೂ ಸಾಮಾನ್ಯನಲ್ಲ. ಭೀಮ, ದುರ್ಯೋಧನ, ಶಲ್ಯ, ಬಲರಾಮ, ಜರಾಸಂಧ ಮೊದಲಾದ ಮಲ್ಲ ಜಗಜಟ್ಟಿಗಳ ಸರಿಸಮ ಸಾಲಿನಲ್ಲಿ ನಿಲ್ಲಬಲ್ಲ ಸಮರ್ಥನೇ ಆಗಿದ್ದನು. ಕೀಚಕನ ಮಹಾಬಲದ ಭೀತಿ ನೆರೆ ರಾಜ್ಯಗಳಲ್ಲೂ ಹಬ್ಬತೊಡಗಿ ಮತ್ಸ್ಯ ದೇಶ ವೈರಿಗಳ ಆಕ್ರಮಣದ ಭಯದಿಂದ ಮುಕ್ತವಾಗಿತ್ತು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್