
ಹುಬ್ಬಳ್ಳಿ: ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವೇದಿಕೆಯಲ್ಲಿ ಅಪಮಾನಕ್ಕೀಡಾದ ಧಾರವಾಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿ ಈಗಾಗಲೇ ಎರಡು ಪುಟಗಳ ರಾಜೀನಾಮೆ ಪತ್ರವನ್ನು ಕೂಡ ಇಲಾಖೆಗೆ ಕಳುಹಿಸಿದ್ದಾರೆ.
ಎನ್ ವಿ ಭರಮನಿ ಅವರು ತಮ್ಮ ವಿಆರ್ ಎಸ್ ಪತ್ರದಲ್ಲಿ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದು ಈ ಪತ್ರದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಹಿರಿಯ ಅಧಿಕಾರಿಗಳು ನಾರಾಯಣ ಭರಮನಿ ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಸಿಎಂ ಹಾಗೂ ಗೃಹ ಸಚಿವರು ಕೂಡ ಈ ವಿಷಯವಾಗಿ ಭರಮನಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾ ಎಎಸ್ ಪಿ ನಾರಾಯಣ ಭರಮನಿ ಕೆಲ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆಯಲು ರಾಜೀನಾಮೆ ಪತ್ರ ಸಲ್ಲಿಸಿದ್ದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕರೆದು ಈ ವಿಷಯವಾಗಿ ಮಾತನಾಡಿಸಿ ಸದ್ಯಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಅದು ಪೆಂಡಿಂಗ್ ಇದೆ ಎಂದು ಹೇಳಿದ್ದಾರೆ.