ಭಾಗ – 241
ಭರತೇಶ್ ಶೆಟ್ಟಿ,ಎಕ್ಕರ್

ಸಂಚಿಕೆ ೨೪೨ ಮಹಾಭಾರತ
ನಿನ್ನಿಂದ ಅನುಗ್ರಹಿತರಾದ ನಮಗೆ ನಿನ್ನ ಮೂರ್ತ ಸ್ವರೂಪದ ಕಲ್ಪನೆ ಹಾಗು ತಿಳುವಳಿಕೆಯನ್ನು ಅರಿಯಬೇಕೆಂಬ ಬಯಕೆಯಾಗಿದೆ. ನಮಗೆ ಆ ಯೋಗ್ಯತೆ ಇದ್ದರೆ ದಯವಿಟ್ಟು ತಿಳಿಯಪಡಿಸಿ” ಎಂದು ವಿನಮ್ರನಾಗಿ ಬೇಡಿಕೊಂಡನು ಯುಧಿಷ್ಠಿರ.
“ಧರ್ಮರಾಯಾ! ನಿನ್ನ ಜಿಜ್ಞಾಸೆ ಸಾಧುವಾಗಿಯೆ ಇದೆ. ಯಮನ ಚಿತ್ರಣ ಅರಿಯುವ ಕೌತುಕವೆ? ಯಮನ ರೂಪ ಕಾಣುವ ಅವಕಾಶ ಭೌತಿಕವಾದ ಶರೀರ ಹೊಂದಿರುವಾಗ ಅಸಾಧ್ಯ. ಹಾಗೆಂದು ನಾನು ಏಕರೂಪದಲ್ಲಿ ಇರಲಾರೆ. ಆಯಸ್ಸು ಮುಗಿದು ಕಾಲ ಕೂಡಿಬಂದ ಸಂದರ್ಭ ಕಾಲಪಾಶದ ಸೆಳೆತದಿಂದ ಭೌತಿಕವಾದ ಶರೀರ ತೊರೆದವರು ನನ್ನ ಬಳಿ ಬರುತ್ತಾರೆ. ಸಂಚಿತ ಪಾಪ ಪುಣ್ಯಕ್ಕನುಗುಣವಾಗಿ ಅವರಿಗೆ ನನ್ನ ರೂಪದ ದರ್ಶನವಾಗುತ್ತದೆ. ಪಾಪಿಗೆ ರೌದ್ರಮೂರ್ತಿಯಾಗಿ, ಪುಣ್ಯಾತ್ಮನಿಗೆ ಸೌಮ್ಯ ಮೂರ್ತಿಯಾಗಿ ಕಾಣಸಿಗುವೆ. ಯಮಲೋಕದಲ್ಲಿ ನಾಲ್ಕು ದಿಕ್ಕುಗಳಿವೆ. ನಾಲ್ಕೂ ದಿಕ್ಕಿನಲ್ಲಿ ನ್ಯಾಯ ಸಭೆಗಳಿವೆ. ತೆಂಕು ದಿಕ್ಕಿನಲ್ಲಿ ವಿಕಾರ ರೂಪಿಯಾಗಿ ಕಾಲದಂಡವನ್ನು ಹಿಡಿದು ‘ಕೀನಾಶ’ ನೆಂಬ ಹೆಸರಿನಿಂದ ಭಯಂಕರ ಮೂರ್ತಿಯಾಗಿ ಉಪಸ್ಥಿತನಿರುತ್ತೇನೆ. ಉತ್ತರ ದಿಕ್ಕಿನಲ್ಲಿ ದಾನ ಶೀಲ ಪುಣ್ಯವಂತರೊಂದಿಗೆ ‘ಧರ್ಮರಾಜ’ ಎಂಬ ನಾಮದಲ್ಲಿ ಶಾಂತ ಮೂರ್ತಿಯಾಗಿ ರಾರಾಜಿಸುತ್ತೇನೆ. ಪೂರ್ವ ದಿಕ್ಕಿನ ಸಭೆಯಲ್ಲಿ ಸತ್ಕರ್ಮ ನಿರತರಾದ ಸತ್ಪುರುಷರ ಜೊತೆ ಕಾರುಣ್ಯ ಮೂರ್ತಿಯಾಗಿ ‘ಕಾಲ’ ಎಂದೆಣಿಸಿ ವಿರಾಜಿಸುತ್ತೇನೆ. ಪಶ್ಚಿಮ ದಿಕ್ಕಿನ ಓಲಗದಲ್ಲಿ ದೈವ ಭಕ್ತರೊಂದಿಗೆ ದರ್ಶನಕಾರನಾಗಿ ‘ವಿವಸ್ವಂತ’ ಎಂಬ ಹೆಸರಿನಿಂದ ರಂಜಿಸುತ್ತೇನೆ. ಈ ಸತ್ಯವನ್ನರಿತ ಜ್ಞಾನಿಗಳಾದ ಕೆಲವರು ಯೋಗ ಮಾರ್ಗ ಅವಲಂಬಿಸಿ ಧ್ಯಾನದಿಂದ ಅರಿತು, ಅವರ ಅನುಭವದ ಯೋಗಮಾರ್ತಿಯಾಗಿ ನನ್ನನ್ನು ಕಲ್ಪಿಸಿ, ದರ್ಶಿಸುವ ಕರ್ಮಮಾರ್ಗವನ್ನು ನಿರೂಪಿದ್ದಾರೆ. ಯಶಸ್ಸು, ಸತ್ಯ, ದಯೆ, ಶೌಚ, ಋಜುತ್ವ, ನಾಚಿಕೆ, ಚಾಪಲ್ಯವಿಲ್ಲದಿರುವಿಕೆ, ದಾನ, ತಪಸ್ಸು, ಬ್ರಹ್ಮಚರ್ಯ ಇವು ನನ್ನ ದೇಹವು. ಅಹಿಂಸೆ, ಸಮತೆ, ಶಾಂತಿ, ತಪಸ್ಸು , ಅನಸೂಯ ಇವು ನನ್ನನ್ನು ಕಾಣುವ ಮಾರ್ಗಗಳು”
ಯಮಧರ್ಮನ ಮೂರ್ತ ಸ್ವರೂಪದ ದುರ್ಲಭ ದರ್ಶನ ರಹಸ್ಯ ಅರಿತುಕೊಂಡು, ಯೋಗ ಮಾರ್ಗದಿಂದ ಕಾಣಬಹುದೆಂಬ ಸೂಕ್ಷ್ಮ ಅರಿತಾಗ, ಕೌತುಕ ಹೆಚ್ಚಾಯಿತು ಧರ್ಮರಾಯನಿಗೆ. “ದೇವಾ! ಯೋಗಮಾರ್ಗದಿಂದ ನಿನ್ನನ್ನು ಕಂಡವರು ಯಾರಾದರೂ ಇದ್ದಾರೆಯೇ? ಇದ್ದರೆ ಯಾರು? ತಿಳಿಯಪಡಿಸಬಹುದೇ?” ಎಂದು ಕೇಳಿಕೊಂಡನು.
ಆಗ ಯಮದೇವನು “ಮಗ ಯುಧಿಷ್ಠಿರಾ! ಹಿಂದೆ ‘ವಾಜಶ್ರವಸ’ ಎಂಬ ಮುನಿಯಿದ್ದನು. ತಾನು ಎಲ್ಲವನ್ನೂ ಬಲ್ಲವನು ಎಂಬ ಹೆಮ್ಮೆ ಆತನಿಗಿತ್ತು. ಅವನೊಮ್ಮೆ ಯಾಗವೊಂದನ್ನು ಮಾಡಿದನು. ಆ ಸಮಯದಲ್ಲಿ ಅನೇಕ ದಾನಗಳನ್ನು ಮಾಡುತ್ತಿದ್ದನು. ಅವನ ಮಗನಾದ ನಚಿಕೇತ ಅವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಅವನಿಗೆ ಅಯ್ಯೋ ಹೀಗೇಕೆ ಮಾಡುತ್ತಿರುವುದು ಎಂಬ ಗೊಂದಲ ಉತ್ಪನ್ನವಾಯಿತು. ಬಡಕಲಾದ ಗೋವುಗಳನ್ನು ತನ್ನ ತಂದೆ ದಾನ ಮಾಡುತ್ತಿದ್ದಾನೆ, ಇದು ಯುಕ್ತವಾದ ದಾನವಾಗಲು ಸಾಧ್ಯವೆ? ಎಂದು ಆತನಿಗೆ ಸಂದೇಹವಾಗುತ್ತಿತ್ತು. ಅಂತೆಯೆ ನೇರವಾಗಿ ಬಂದು ತಂದೆಯನ್ನು ಪ್ರಶ್ನಿಸಿದ, ” ಅಪ್ಪಾ ಈ ಯಾಗಕ್ಕೂ ದಾನಕ್ಕೂ ಏನು ಸಂಬಂಧ?” ಆಗ ಅಪ್ಪಾ “ಇಲ್ಲಿರುವುದೆಲ್ಲವನ್ನೂ ದಾನ ಮಾಡುವುದು ಈ ಯಾಗದ ವಿಶೇಷ” ಎಂದನು. ಕೇಳಿಸಿಕೊಂಡ ಮಗ,”ಅಪ್ಪಾ ನಾನೂ ಇಲ್ಲಿಯೆ ಇದ್ದೇನೆ, ನನ್ನನ್ನು ಯಾರಿಗೆ ದಾನ ನೀಡುವೆ?” ಎಂದು ಕೇಳಿದ. ಅಪ್ಪ ಉತ್ತರಿಸಲಿಲ್ಲ. ಮಗ ಬಿಡಲಿಲ್ಲ ಪದೆ ಪದೆ ಕೇಳತೊಡಗಿದ ಮಗನಚಿಕೇತ. ಅಪ್ಪ ನಿರುತ್ತರನಾದ. ಹಠ ಬಿಡದೆ ಮಗ ನಚಿಕೇತ ಮತ್ತೂ ಕೇಳಿದಾಗ ಕೋಪಗೊಂಡ ಮುನಿ ವಾಜಶ್ರವಸ “ನಿನ್ನನ್ನು ಮೃತ್ಯುವಿಗೆ ದಾನ ನೀಡುವೆ” ಎಂದು ಬಿಟ್ಟನು. ಯಜ್ಞಕಾಲದಲ್ಲಿ ನುಡಿದ ಮಾತು ಪಾಲಿಸ ಬೇಕಾದದ್ದು. ನಚಿಕೇತ ಅದಕ್ಕೆ ಸಿದ್ಧನಾಗಿಯೂ ಬಿಟ್ಟ. ತಂದೆಗೆ ನಾನು ಏನು ಹೇಳಿದೆ- ಮಾಡಿದೆ ಎಂಬ ಪ್ರಜ್ಞೆ ಈಗ ಎಚ್ಚರಿಸಿದಂತಾಯಿತು. ಮಗನನ್ನು ಮೃತ್ಯುವಿಗೆ ದಾನ ನೀಡುವುದೆ? ಅಯ್ಯೋ ಏನು ಮಾಡಲಿ ಈಗ ಎಂದು ದುಃಖಿತನಾದ. ಆದರೆ ನಚಿಕೇತ ದಾನ ನೀಡು ಅಪ್ಪಾ ಎಂದು ಜ್ಞಾಪಿಸುತ್ತಿದ್ದಾನೆ. ಆಯಸ್ಸು ತೀರದ ಮಗನನ್ನು ಮೃತ್ಯುವಿಗೆ ನೀಡುವುದಾದರೂ ಹೇಗೆ? ನೀಡಲು ತಾನೆ ಸಲಹಿದ ಮಗನಲ್ಲವೆ? ಮುನಿ ಚಿಂತೆಗೊಳಗಾಗಿದ್ದಾನೆ. ಕೋಪ ಮತ್ತು ಅವಸರ ಅನಾಹುತಕ್ಕೆ ಕಾರಣವಾಗಿಬಿಟ್ಟಿದೆ. ಇದಕ್ಕೀಗ ಪರಿಹಾರ ಹೇಗೆ ಎಂದು ಸಂಕಟಕ್ಕೊಳಗಾಗಿದ್ದಾನೆ.
ಮುಂದುವರಿಯುವುದು