ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ 28.06.2025ರ ಶನಿವಾರದಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರುಗಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಆನಂದ್ರಾಯ ನಾಯಕ್ ವಹಿಸಿದ್ದರು. ರಾಜ್ಯಮಟ್ಟದಲ್ಲಿ ಆರನೇ ರಾಂಕ್ ವಿಜೇತೆ ಕುಮಾರಿ ಅನ್ವಿತಾ ರಾಜೇಶ್ ಪೆರ್ತಿಮಾರ್ ಇವಳನ್ನು ನಗದು ಪುರಸ್ಕಾರಗಳೊಂದಿಗೆ ಸನ್ಮಾನಿಸಲಾಯಿತು. ಶಾಲಾ ದಾನಿಗಳು ಹಾಗೂ ಕಲಿಯುಗದ ಕಾಮಧೇನು ಎಂದು ಪ್ರಸಿದ್ಧಿ ಪಡೆದಿರುವ ವಿಶ್ರಾಂತ ಲೆಕ್ಕ ಪರಿಶೋಧಕರಾದ ಕಾರ್ಕಳ ಕಮಲಾಕ್ಷ ಕಾಮತ್ ಇವರು ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ, ಗೌರವ ನೀಡುವ ಮನೋಭಾವದೊಂದಿಗೆ ಉತ್ತಮ ಪರಿಶ್ರಮ ಪಟ್ಟರೆ ಜೀವನದಲ್ಲಿ ಕಾರ್ಯ ಸಾಧನೆ ಸಾಧ್ಯ ಎಂದು ತಿಳಿಸಿದರು. ಅದೇ ಸಂದರ್ಭದಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ಆರು ವಿದ್ಯಾರ್ಥಿಗಳಿಗೆ ಒಟ್ಟು ರೂ.44,000/- ನಗದು ಪುರಸ್ಕಾರವನ್ನು ನೀಡಿದರು. ಇದರ ಜೊತೆಗೆ ಶಾಲಾ ದತ್ತಿನಿಧಿ ಮತ್ತು ಇತರ ದಾನಿಗಳ ಪ್ರೋತ್ಸಾಹಧನದೊಂದಿಗೆ ಸುಮಾರು ಒಂದು ಲಕ್ಷದ ನಗದು ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರದ ರೂವಾರಿಗಳು ಹಾಗೂ ಕಾರ್ಕಳ ನ್ಯಾಯವಾದಿ ಸಂಘದ ಅಧ್ಯಕ್ಷರು ಆದಂತಹ ಸುನಿಲ್ ಕುಮಾರ್ ಶೆಟ್ಟಿ, ಎಸ್.ಡಿ.ಎಂ.ಸಿ. ರಘುರಾಮ ಕಾಮತ್, ಸ್ಥಳೀಯ ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ, ನಿವೃತ್ತ ಮುಖ್ಯಶಿಕ್ಷಕರಾದ ಹರ್ಷಿಣಿ ಕೆ., ಯುವ ವಕೀಲರಾದ ವಿಖ್ಯಾತ್ ಜೈನ್, ಎಸ್. ಡಿ. ಎಂ. ಸಿ. ಸದಸ್ಯರಾದ ಹರಿಪ್ರಕಾಶ್ ಶೆಟ್ಟಿ, ಪ್ರಕಾಶ್ ರಾವ್, ವೀಣಾ ರಾಜೇಶ್ ಭಂಡಾರಿ, ಶ್ರೀಮತಿ ಅಶ್ವಿನಿ, ಕೃಷ್ಣ ಮಡಿವಾಳ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಶಾಂತ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಿತ ಶಿಕ್ಷಕರಾದ ಹರಿಶ್ಚಂದ್ರ ಬಾಯರಿ ನಿರೂಪಿಸಿ ವಿಜ್ಞಾನ ಶಿಕ್ಷಕಿಯಾದ ಲಲಿತ ವಂದಿಸಿದರು.









