ಭಾಗ – 237
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೩೮ ಮಹಾಭಾರತ
ಧರ್ಮರಾಯ ಸಹೋದರರನ್ನು ಹುಡುಕುತ್ತಾ ಸರೋವರದೆಡೆಗೆ ಬಂದು ತಲುಪಿದನು. ನಯನ ಮನೋಹರ ಪ್ರದೇಶ. ಭಿನ್ನ ವಿಭಿನ್ನ ಸೊಬಗಿನ ಸುಮಗಳು. ಮಂದ ಮಾರುತನ ಬಳಸಿ ಬರುವ ಸೌರಭವನ್ನು ಆಘ್ರಾಣಿಸುತ್ತಾ ಒಂದು ಸುತ್ತು ನೋಡಿದ. ನೀರವ ಪ್ರಶಾಂತ ಪ್ರದೇಶ. ತಪೋಭೂಮಿಯಂತೆ ಮೌನವಾಗಿದೆ. ಏಕಾಗ್ರತೆಗೆ ತೊಡಕಾಗದ ಎಲ್ಲಾ ಸ್ಥಿತಿಗಳೂ ಅಲ್ಲಿವೆ. ಕಣ್ಣು ಹೊರಳಿಸುತ್ತಾ ದೂರದ ನೋಟ ಸವಿಯುತ್ತಿದ್ದ ಕಂಗಳು ಕಾಲ ಬುಡದ ದಡದೆಡೆಗೆ ಹರಿದಾಗ ಏನು ನೋಡುವುದು! ತಮ್ಮಂದಿರು ಧರಾಶಾಯಿಗಳಾಗಿದ್ದಾರೆ. ಹತ್ತಿರ ಸರಿದು ನೋಡಿದರೆ ಉಸಿರಾಟವಿಲ್ಲ, ಕೊಸರಾಟವೂ ಇಲ್ಲ. ಅಂದರೆ ನಾಲ್ವರೂ ಹತಪ್ರಾಣರಾಗಿದ್ದಾರೆ. ಉದ್ವೇಗಕ್ಕೆ ಒಳಗಾದರೂ ಒಬ್ಬೊಬ್ಬರನ್ನೆ ಮೈದಡವಿ ಎಬ್ಬಿಸಲು ನೋಡಿದರೆ, ಏಳುವರೇ? ಸತ್ತು ಬಿದ್ದಿದ್ದಾರೆ. ಪರಿಶೀಲಿಸಿದರೆ ಮೈಯಲ್ಲಿ ಗಾಯಗಳಿಲ್ಲ – ಹಾಗಾದರೆ ಯಾರೂ ಹೊಡೆದುರುಳಿಸಿದಲ್ಲ. ವಿಷ ಜಂತುಗಳೇನಾದರೂ? ಮೈ ನೀಲವರ್ಣಗೊಂಡಿಲ್ಲ. ಕೊರಳ ಭಾಗ ನೋಡಿದರೆ! ಯಾರೂ ಕತ್ತು ಹಿಸುಕಿದ ಕುರುಹೂ ಇಲ್ಲ. ಏನಾಯಿತು ಈ ನಾಲ್ವರು ವೀರ ಕೇಸರಿಗಳಿಗೆ? ಓಹ್! ದಣಿದು ಮರುಕವಾಗಿ ಬಿದ್ದಿರಬಹುದು. ನೀರು ಚುಮುಕಿಸಿದರೆ ಚೈತನ್ಯ ಬಂದೀತು ನೋಡೋಣ ಎಂಬ ಭ್ರಾಂತಿಯಾಯಿತು.
ತರಾತುರಿಯಿಂದ ಸರೋವರಕ್ಕೆ ಇಳಿದು ಬಾಗಿದನು. ಕೈಗೆ ನೀರು ಸೋಕುವ ಮುನ್ನ ಒಂದು ಧ್ವನಿ ಕೇಳಿಸಿತು. “ತಡೆ ತಡೆ, ನಾನು ಇಲ್ಲಿಯ ಮೀನು ತಿಂದು ಬದುಕುವ ಬಕನು. ನಿನ್ನ ತಮ್ಮಂದಿರು ನನ್ನ ಮಾತು ಮೀರಿದ ಕಾರಣ ಸತ್ತು ಬಿದ್ದಿದ್ದಾರೆ. ಈ ಸರೋವರ ನನ್ನ ಅಧೀನದಲ್ಲಿದೆ. ನನ್ನ ಅಪ್ಪಣೆಯಿಲ್ಲದೆ ಈ ಸರೋವರದ ನೀರನ್ನು ಸ್ಪರ್ಶಿಸಿದವರನ್ನು ಬಿಡಲಾರೆ. ನೀನು ನನ್ನ ಮಾತು ಮೀರಿ ಮುಂದುವರಿದೆ ಎಂದಾದರೆ ನಿನ್ನ ತಮ್ಮಂದಿರ ಗತಿ ನಿನಗಾಗುವುದು. ನಾನು ಕೇಳುವ ಪ್ರಶ್ನೆಗಳಿಗೆ ಸದುತ್ತರ ನೀಡಿ ಸಮಾಧಾನ ಪಡಿಸಿದರೆ, ಧಾರಾಳವಾಗಿ ನೀರನ್ನು ಕುಡಿಯಬಹುದು. ನಿನ್ನ ತಮ್ಮಂದಿರಿಗೂ ಇದೇ ಸೂಚನೆ ನೀಡಿದೆ. ಕೇಳದೆ ದುಡುಕಿ ಅನಾಹುತಕ್ಕೆ ಕಾರಣರಾಗಿದ್ದಾರೆ”
ಧರ್ಮರಾಯ ಸುತ್ತ ವೃತ್ತಾಕಾರದಲ್ಲಿ ತಿರು ತಿರುಗಿ ನೋಡಿದರೆ ಯಾರೂ ಕಾಣಿಸುತ್ತಿಲ್ಲ. ತಕ್ಷಣ ಆಲೋಚಿಸಿದ ಹಿಂದೆ ರಾಜ ನಹುಷೇಂದ್ರನಿಂದ ಭೀಮನ ವಿಚಾರವಾಗಿ ಇದೇ ರೀತಿ ಪರೀಕ್ಷೆಗೊಳಗಾಗಿದ್ದೆ. ಇಂದು ಮತ್ತೆ ಅದೇ ರೀತಿ ಯಾವುದೊ ಅತಿಮಾನುಷ ಶಕ್ತಿ ಈ ರೀತಿ ನಮ್ಮೊಂದಿಗೆ ವ್ಯವಹರಿಸುತ್ತಿದೆ. ಹೀಗೆ ಮೇಲ್ನೋಟದಲ್ಲಿಯೆ ಅರಿತುಕೊಂಡ ಧರ್ಮರಾಯ ತಾಳ್ಮೆವಹಿಸಿ, ಆತಂಕ ನಿಯಂತ್ರಿಸಿ ಮರು ಪ್ರಶ್ನೆ ಕೇಳತೊಡಗಿದನು.
“ಅಯ್ಯಾ! ಮಹಾತ್ಮನೆ, ನೀನು ನಿಜವಾಗಿಯೂ ಯಾರು ಹೇಳು? ಬಕ ನೀನೆಂದು ಹೇಳಿರುವೆ. ಒಂದು ಪಕ್ಷಿ ಎಷ್ಟೇ ಬಲಿಷ್ಟವಾಗಿದ್ದರೂ, ಒಂದೊಮ್ಮೆಗೆ ಭಗವಾನ್ ವಿಷ್ಣುವಿನ ಗರುಡನೆ ಎದುರಾಗಿ ಬಂದಿದ್ದರೂ ಎದುರಿಸುವಷ್ಟು ಸಮರ್ಥರು ನನ್ನ ತಮ್ಮಂದಿರು. ಕೇವಲ ಬಕಪಕ್ಷಿಯಿಂದ ಇಷ್ಟು ದೊಡ್ಡ ಸಾಧನೆ ಅಸಾಧ್ಯ. ನೀನ್ಯಾರೊ ದೇವನೇ ಆಗಿರಬೇಕು. ಇಲ್ಲವಾದರೆ ಹಿಮವಂತ, ಪಾರಿಯಾತ್ರ, ವಿಂಧ್ಯ, ಹಾಗೂ ಮಲಯ ಪರ್ವತಗಳಂತೆ ಸರ್ವ ಬಲ ಸಮರ್ಥರಾದ ನನ್ನ ತಮ್ಮಂದಿರನ್ನು ಈ ರೀತಿ ಉರುಳಿಸುವುದು ಅಸಂಭವ. ದೈತ್ಯ, ದಾನವ, ಯಕ್ಷ, ರಾಕ್ಷಸರ್ಯಾರಿಗೂ ಮಾಡಲಾಗದ ಅದ್ಬುತವೂ, ಅಸಾಧಾರಣವೂ ಆದ ಈ ಕೆಲಸ ನೀನು ಮಾಡಿರುವೆ. ಯಾವ ಉದ್ದೇಶದಿಂದ ನಮ್ಮ ಜೊತೆ ಈ ರೀತಿ ವರ್ತಿಸುತ್ತಿರುವೆ ಎಂಬುವುದು ತಿಳಿಯದಾಗಿದೆ. ಕೇವಲ ನಿನ್ನ ಮಾತು ಮೀರಿದರು ಎಂಬ ಕಾರಣ ನೆಪ ಮಾತ್ರ. ಕೇವಲ ಅಷ್ಟೆ ಆಗಿದ್ದರೆ ಇಷ್ಟು ಮಹಾ ಶಕ್ತಿ ಸಂಪನ್ನನಾದ ನೀನು ಕ್ಷುಲ್ಲಕ ಕಾರಣ ಹೇಳಿ ಘನಘೋರವಾದ ವೀರಹತ್ಯೆಯನ್ನು ಮಾಡುವಲ್ಲಿ ಮುಂದಾಗುತ್ತಿರಲಿಲ್ಲ. ಅದೂ ವಿಸ್ಮಯ ರೂಪದಲ್ಲಿ ನೀನು ನನ್ನ ತಮ್ಮಂದಿರ ಪ್ರಾಣ ಕಸಿದಿರುವೆ. ಮೈಯಲ್ಲಿ ಗಾಯಗಳಿಲ್ಲ ಎಂದಾದರೆ ಹೋರಾಟ ಆಗಲಿಲ್ಲ. ನನ್ನ ತಮ್ಮಂದಿರು ನನಗಾಗಿ ಸರ್ವಸ್ವವನ್ನೂ ಪಣಕ್ಕಿಟ್ಟು ಬದುಕುತ್ತಿರುವ ಮಹಾತ್ಯಾಗಿಗಳು. ಅವರು ಇಲ್ಲದ ಬದುಕು ನನಗೂ ಅನಗತ್ಯ. ಸತ್ಯ ಹೇಳು – ಯಾರು ನೀನು? ಯಾಕಾಗಿ ಹೀಗೆ ಮಾಡಿದೆ? ನನ್ನ ತಮ್ಮಂದಿರ ಜೊತೆ ನಿನ್ನ ಈ ನಡೆಯ ಹಿಂದಿನ ಉದ್ದೇಶವೇನು? ಇಷ್ಟು ಮಹತ್ತರ ಸಾಹಸ ಮಾಡಿದ ನೀನ್ಯಾರು? ದಯವಿಟ್ಟು ಕೃಪೆದೋರಿ ನನಗೆ ದೃಶ್ಯನಾಗಿ ದರುಶನ ನೀಡು” ಎಂದು ಬೇಡಿಕೊಂಡನು.
ಧರ್ಮರಾಯನ ಬೇಡಿಕೆ ಮನ್ನಿಸಿ “ಧರ್ಮರಾಜಾ! ನಾನೊಬ್ಬ ಯಕ್ಷನು. ನಿನ್ನ ತರ್ಕ ಸರಿಯಾಗಿಯೆ ಇದೆ. ನಾನೊಬ್ಬ ಸಾಮಾನ್ಯ ನೀರು ಹಕ್ಕಿಯಲ್ಲ. ನಿನ್ನ ಅನುಜರು ನನ್ನ ಮಾತನ್ನು ಉಪೇಕ್ಷಿಸಿದ ಕಾರಣ ನನ್ನ ಸಂಕಲ್ಪದಿಂದ ಅವರ ಪ್ರಾಣ ಕಿತ್ತುಕೊಂಡಿರುವೆ. ಶಾಪ ಕೊಡಲಿಲ್ಲ, ಅಂತಹ ಸಂದರ್ಭವೂ ಸೃಷ್ಟಿಯಾಗಲಿಲ್ಲ. ನನ್ನನ್ನು ನೋಡುವ ಬಯಕೆ ನಿನ್ನದ್ದಾಗಿದೆಯಲ್ಲ – ಪ್ರಕಟನಾಗುತ್ತೇನೆ ನೋಡು.” ಎಂದನು. ಆ ಕೂಡಲೆ ಧರ್ಮರಾಯನ ಎದುರಲ್ಲಿ ತಾಳೆಯ ಮರದಂತೆ ಎತ್ತರ, ಪರ್ವತದಂತೆ ಸ್ಥೂಲ, ವಿಕಾರವಾಗಿ ಉರಿಯುತ್ತಿರುವ ಅಗ್ನಿ ಗೋಲಗಳಂತಹ ಕಂಗಳು, ಅಸಾಧಾರಣ ತೇಜಸ್ಸಿನಿಂದ ಕಾಣಿಸಿಕೊಂಡನು. ಧರ್ಮರಾಯ ಅಪಾದಮಸ್ತಕವಾಗಿ ನೋಡಿದ, ತಿರುಗಿ ಸತ್ತು ಬಿದ್ದಿರುವ ತಮ್ಮಂದಿರನ್ನು ಒಮ್ಮೆ ನೋಡಿ ಮರುಗಿದ. “ಅಯ್ಯಾ! ಧರ್ಮರಾಯ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವೆಯಾ?” ಎಂದು ಮೇಘ ಘರ್ಜನೆಯಂತಹ ಧ್ವನಿಯಲ್ಲಿ ಘರ್ಜಿಸಿದನು.
ಧರ್ಮರಾಯನ ವ್ಯಕ್ತಿತ್ವ ಎಷ್ಟು ಶ್ರೇಷ್ಠವಾದದ್ದು ಎನ್ನುವುದು ಈಗ ಹೇಳುವ ಆತನ ಮಾತುಗಳಲ್ಲಿ ಅನಾವರಣಗೊಂಡಂತಿದೆ. “ಅಯ್ಯಾ ಮಹಾನುಭಾವ! ಈ ಸರೋವರವೇನೊ ನಿನ್ನದ್ದು ಆಗಿರಬಹುದು. ನೀರು ನಿನ್ನ ವಶದಲ್ಲಿ ಇರಬಹುದು. ಆದರೆ ಇಲ್ಲಿ ಬಿದ್ದಿರುವ ನನ್ನ ತಮ್ಮಂದಿರು ನನ್ನವರು. ಅವರ ರಕ್ಷಣೆ ನನ್ನ ಕರ್ತವ್ಯ. ನೀನು ಕೇಳುವ ಪ್ರಶ್ನೆಗಳಿಗೆ ನನಗೆ ತಿಳಿದ ಜ್ಞಾನದ ವ್ಯಾಪ್ತಿಯಲ್ಲಿ ಉತ್ತರಿಸಬಲ್ಲೆ. ಹಾಗೆಂದು ನಾನೇನು ಎಲ್ಲಾ ತಿಳಿದ ಸರ್ವಜ್ಞನಲ್ಲ. ಆಗಲಿ ನಿನ್ನ ಅಪೇಕ್ಷೆಯಂತೆ ಪ್ರಶ್ನೆ ಕೇಳು – ನನಗೆ ತಿಳಿದಷ್ಟನ್ನು ಉತ್ತರವಾಗಿ ಹೇಳುತ್ತೇನೆ.
ಯಕ್ಷ ಪ್ರಶ್ನೆ ಕೇಳಲಾರಂಭಿಸಿದನು…
ಮುಂದುವರಿಯುವುದು…






















































