
ಮಂಗಳೂರು: ಕರಾವಳಿಯಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು ಇದೀಗ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದ ಬಜ್ಪೆ ಠಾಣೆ ಹೆಡ್ ಕಾನ್ಸ್‌ಟೇಬಲ್ ರಶೀದ್ ಸೇರಿದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
56 ಪೊಲೀಸ್ ಸಿಬ್ಬಂದಿಯ ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದು, ಇನ್ನೂ ನೂರಾರು ಸಂಖ್ಯೆಯಲ್ಲಿ ಸಿಬ್ಬಂದಿ ವರ್ಗಾವಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಕೋಮಹಿಂಸಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಬದಲಾವಣೆ ಮಾಡಬೇಕು ಎಂಬ ಆಗ್ರಹಿಸಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವರು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು ಇದೀಗ ಜೂನ್ 13 ರಂದು ಮಂಗಳೂರಿನಲ್ಲಿ ಸ್ಪೆಷಲ್ ಆ್ಯಕ್ಷನ್ ಫೋರ್ಸ್ಗೆ ಚಾಲನೆ ನೀಡಿದ್ದಾರೆ. ಸದ್ಯ, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ವಿಶೇಷ ಕಾರ್ಯಪಡೆಯ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ.