“ಆರೋಗ್ಯದ ಬಗ್ಗೆ ನಿತ್ಯವೂ ಕಾಳಜಿ ಇರಲಿ”-ಅನುಷಾ ನಾಯಕ್

ಮಳೆಗಾಲದಲ್ಲಿ ಹರಡುವ ಸಾಮಾನ್ಯ ಕಾಯಿಲೆಗಳಲ್ಲಿ ಹೆಚ್ಚಿನವು ಸೊಳ್ಳೆಗಳ ಕಡಿತದಿಂದ ಮತ್ತು ಕಲುಷಿತ ನೀರಿನಿಂದ ಬರುವಂತದ್ದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಿಗಾ ವಹಿಸಿದರೆ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದು. ಯಾವುದೇ ಜ್ವರ ಶೀತಗಳಿಗೆ ಮನೆಯಲ್ಲೇ ಔಷಧ ತಯಾರು ಮಾಡಿ ಸೇವಿಸುವ ಬದಲು, ಹತ್ತಿರದ ಆಸ್ಪತ್ರೆಗೆ ಭೇಟಿ ಕೊಡುವುದು ಉತ್ತಮ. ಕುದಿಸಿ ಆರಿಸಿದ ನೀರನ್ನೆ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮುದ್ರಾಡಿಯ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಅನುಷಾ ನಾಯಕ್ ಹೇಳಿದರು. ಅವರು ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ಕೈ ತೊಳೆಯುವ ಕ್ರಮದ ಬಗ್ಗೆಯೂ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಸರಿತಾ , ಆರೋಗ್ಯ ಸಂಘದ ಕಾರ್ಯದರ್ಶಿ ಸಮೀಕ್ಷಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ವಹಿಸಿ ಸ್ವಾಗತಿಸಿದರು. ಆರೋಗ್ಯ ಸಂಘದ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಕೊಠಾರಿ ನಿರೂಪಿಸಿದರು. ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ವಂದಿಸಿದರು. ಶಿಕ್ಷಕರಾದ ಆನಂದ, ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಮಹೇಶ್ ಎಂ. ಸಹಕರಿಸಿದರು.



















