
ಉಡುಪಿ: ಜಿಲ್ಲೆಯಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದ್ದು ಮೂಡು ಪೆರಂಪಳ್ಳಿ ಸಮೀಪ ನೂರಾರು ಮೀಟರ್ ಉದ್ದ ಭೂಮಿ ಕುಸಿತವಾಗಿ ಮೂರ್ನಾಲ್ಕು ಮೀಟರ್ ಭೂಮಿ ನದಿಯ ಭಾಗಕ್ಕೆ ಜಗ್ಗಿದ್ದು ಜನತೆಗೆ ಆತಂಕ ಮೂಡಿಸಿದೆ.
15 ದಿನಗಳ ಹಿಂದೆ ಬಿದ್ದ ಮಳೆಗೆ ಭೂಮಿ ಬಿರುಕಾಗಿ ಸಾಲು ಸಾಲು ತೆಂಗಿನ ಮರಗಳು ಬುಡ ಕಿತ್ತುಕೊಂಡು ನದಿಯತ್ತ ವಾಲಿದೆ. ಇದರಿಂದ ಕೊಂಕಣ ರೈಲ್ವೆಯ ಸೇತುವೆ ಪಕ್ಕದಲ್ಲಿ ಇರುವುದರಿಂದ ಅನಾಹುತ ಆಗುವ ಸಾಧ್ಯತೆ ಇದೆ.
30-40 ವರ್ಷದ ಹಿಂದೆ ಇಲ್ಲಿ ನದಿಗೆ ಕಲ್ಲುಗಳನ್ನು ತಡೆಗೋಡೆಯಾಗಿ ಕಟ್ಟಲಾಗಿದ್ದು ನೀರಿನ ಅಲೆಗಳ ಹೊಡೆತ, ನೀರಿನ ಉಬ್ಬರ ಇಳಿತದ ಸಮಸ್ಯೆಯಿಂದ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಸಮಸ್ಯೆ ಹೆಚ್ಚಾಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಆಗಬಹುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



















