22.3 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 221

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೨೨ ಮಹಾಭಾರತ

ಅರ್ಜುನ ಬಂದು ಹಿರಿಯರಿಗೂ ಋಷಿ ಮುನಿಗಳಿಗೂ ನಮಸ್ಕರಿಸಿ ಆಶೀರ್ವಾದ ಪಡೆದನು. ಕಿರಿಯರು ಅರ್ಜುನನಿಗೆ ವಂದಿಸಿದರು. ಸರಿ ಸುಮಾರು ಐದು ವರ್ಷ ಕಳೆದು ಅರ್ಜುನ ಮರಳಿ ಬಂದಿದ್ದಾನೆ. ಎಲ್ಲರಿಗೂ ಮಿತಿ ಮೀರಿದ ಸಂತೋಷವಾಗುತ್ತಿದೆ.

ಅರ್ಜುನ ಎಲ್ಲರನ್ನೂ ಸೇರಿಸಿ ಕುಳಿತು ಅಣ್ಣ ಧರ್ಮಜನನ್ನು ಉದ್ದೇಶಿಸಿ, ಎಲ್ಲರಿಗೂ ಕೇಳುವಂತೆ ತನ್ನನ್ನು ಇಂದ್ರ ಕೀಲಕಕ್ಕೆ ತಪಸ್ಸಿಗೆ ಹೋಗಲು ಬೀಳ್ಕೊಟ್ಟಲ್ಲಿಂದ ಮೊದಲ್ಗೊಂಡು ನಡೆದ ವೃತ್ತಾಂತಗಳನ್ನು ವಿವರಿಸಿ ಹೇಳ ತೊಡಗಿದನು. ದೇವರಾಜ ಇಂದ್ರನಿಂದ ಪರೀಕ್ಷೆ, ಶಿವ ಪರಮಾತ್ಮನ ಕಿರಾತ ಲೀಲೆ, ಹಂದಿಯ ರೂಪದಲ್ಲಿದ್ದ ಮೂಕಾಸುರನ ವಧೆ, ಕಿರಾತನೊಡನೆ ಯುದ್ದ, ಮಹಾದೇವ ಪರಮೇಶ್ವರ – ಪಾರ್ವತಿ, ಶಿವಗಣ ಸಹಿತ ಸಾಕ್ಷಾತ್ಕಾರ, ಪಾಶುಪತಾಸ್ತ್ರ ಪ್ರಾಪ್ತಿ, ಗಿರಿಜೆಯ ಅನುಗ್ರಹ ಅಂಜಲಿಕಾಸ್ತ್ರ ಪ್ರಾಪ್ತಿ, ಗಣಪತಿ – ಷಣ್ಮುಖ ರಿಂದಲೂ ಕೊಡುಗೆ. ಇದೆಲ್ಲಾ ನಡೆದಾದ ಮೇಲೆ ದಿವ್ಯ ರಥದಲ್ಲಿ ದೇವ ಲೋಕ ಯಾನ, ದೇವೇಂದ್ರನಿಂದ ಸನ್ಮಾನ. ದಿಗ್ದೇವತೆಗಳಿಂದ ದೇವತಾಸ್ತ್ರ ಸಂಪ್ರಾಪ್ತಿ, ನಿವಾತ ಕವಚರ ಹಾಗೂ ಕಾಲಕೇಯರ ಸಂಹಾರ, ಇಂದ್ರನ ಸುಧರ್ಮ ಸಭೆಯಲ್ಲಿ ದಿವ್ಯ ಕಿರೀಟ ಪ್ರಾಪ್ತಿ, ನಾಟ್ಯಶಾಸ್ತ್ರಾಧ್ಯಯನ, ಹೀಗೆ ಎಲ್ಲಾ ಸಂಗತಿಗಳನ್ನೂ ವಿಸ್ತೃತವಾಗಿ ವಿವರಿಸಿ ಹೇಳಿದನು. ಇದನ್ನೆಲ್ಲಾ ಕೇಳುತ್ತಿದ್ದಂತೆ ಎಲ್ಲರಿಗೂ ಅತುಲಾನಂದವೆ ಆಯಿತು.

ಭೀಮಸೇನನು ಸೋದರನನ್ನು ಬಿಗಿದಪ್ಪಿ ಅಭಿನಂದಿಸಿ, “ಅರ್ಜುನಾ, ದ್ರೌಪದಿಯ ಆಸೆಯಂತೆ ಸೌಗಂಧಿಕಾ ಪುಷ್ಪ ಅರಸುತ್ತಾ ಹೋದ ನನಗೆ ಮುಖ್ಯಪ್ರಾಣ ಹನೂಮಂತನ ದರ್ಶನ ಭಾಗ್ಯ ಒದಗಿತು. ಕೊನೆಗೆ ರಾಮಭಕ್ತನಾದ ಆಂಜನೇಯನಲ್ಲಿ ಒಂದು ಭಕ್ತಿಯ ಬೇಡಿಕೆಯನ್ನಿತ್ತೆನು. ಅರ್ಜುನನ ರಥಾಗ್ರದ ಧ್ವಜದಲ್ಲಿ ಪ್ರತ್ಯಕ್ಷ ಸಾನಿಧ್ಯನಾಗಬೇಕೆಂದು. ಒಪ್ಪಿ ಅನುಗ್ರಹಿಸಿರುವುದು ತುಂಬಾ ಸಂತೋಷದ ವಿಚಾರ”. ಅಣ್ಣ ಭೀಮಸೇನನ ಮಾತು ಕೇಳಿ ಅರ್ಜುನ ಸಂತೋಷದಿಂದ ಕೃತಜ್ಞತೆ ವ್ಯಕ್ತಪಡಿಸಿದನು.

ಒಂದೆರಡು ದಿನ ಕಳೆದ ಮೇಲೆ ತನ್ನ ಸಹೋದರರನ್ನೂ ದ್ರೌಪದಿಯನ್ನೂ ಜೊತೆ ಸೇರಿಸಿ ದೇವಲೋಕದಲ್ಲಾದ ಊರ್ವಶಿ ಪ್ರಕರಣದ ಕಥೆಯನ್ನು ಹೇಳಿ ಶಾಪಗ್ರಸ್ಥನಾದ ವಿಚಾರ, ಆ ಶಾಪವೂ ವರವಾಗಿ ಬದಲಾಗುವಂತೆ ಇಂದ್ರ ಅನುಗ್ರಹಿಸಿದ ಘಟನೆಗಳನ್ನು ಹೇಳಿದನು. ಈ ಮಾತುಕಥೆ ರಹಸ್ಯವಾಗಿ ಅಣ್ಣ ತಮ್ಮಂದಿರು ಮತ್ತೆ ದ್ರೌಪದಿ ಸೇರಿ ಗೌಪ್ಯವಾಗಿ ನಡೆದಿತ್ತು. ಕಾರಣ ಅರ್ಜುನನಿಗೆ ಊರ್ವಶಿಯ ಶಾಪದ ಅನುಷ್ಠಾನ ಅಜ್ಞಾತವಾಸದಲ್ಲಿ ಆಗಲಿಕ್ಕಿದೆ. ಈ ಸಂಗತಿ ಅನ್ಯರ್ಯಾರಿಗೂ ತಿಳಿಯಕೂಡದು.

ಊರ್ವಶಿಯಂತಹ ಅಪ್ಸರೆಗೆ ಮನಸೋಲದೆ ಉಳಿದ ಅರ್ಜುನನ ಚಿತ್ತ ಸ್ಥೈರ್ಯದ ಕುರಿತು ದ್ರೌಪದಿಗೆ ಅಭಿಮಾನ ಮೂಡಿತು. ಅರ್ಜುನನ ಪಾದಗಳನ್ನು ಕೈಗಳಿಂದ ಮುಟ್ಟಿ ಕಣ್ಣಿಗೊತ್ತಿಕೊಂಡಳು. ಅರ್ಜುನನ್ನು ದೇವರಂತೆ ಕಂಡು ಹಾಗೆ ಕರೆದು ” ದೇವಾ, ತಪಸ್ಸಿನ ಮೂಲಕ ಕಾಮನನ್ನು ದಹಿಸಿದ ಶಿವನನ್ನು ಮೆಚ್ಚಿಸಿದಿರಿ. ದೇವಲೋಕದಲ್ಲಿ ಜಿತೇಂದ್ರಿಯನಾಗಿ ಹರವೈರಿಯನ್ನು (ಮನ್ಮಥ ಎಂಬ ಭಾವ) ಗೆದ್ದು ಬಂದಿದ್ದೀರಿ. ನಿಮ್ಮ ಈ ಸಾಧನೆ ಚರಿತ್ರಾರ್ಹವಾಗಿದೆ” ಎಂದು ಪ್ರಶಂಸೆಯ ಮಳೆಗರೆದಳು. ಹೆಂಡತಿ ಗಂಡನ ಸಾಧನೆ ಮೆಚ್ಚಿ ಹೊಗಳಿದರೆ ಅದಕ್ಕಿಂತ ಮಿಗಿಲಾಗ ಹೊಗಳಿಕೆ ಇನ್ನೇನಿದೆ ?

ಗಂಧಮಾದನ ಪ್ರದೇಶ ಪಾಂಡವರಿಗೆ ಸಂಭ್ರಮವನ್ನು ತಂದು ಕೊಟ್ಟಿದೆ. ಮತ್ತೆ ಎಲ್ಲರೂ ಜೊತೆ ಸೇರಿ ಯಾತ್ರೆಗೈಯುತ್ತಾ ದ್ವೈತವನಕ್ಕೆ ಬಂದರು.

ಒಂದು ದಿನ ಭೀಮಸೇನನು ಬೇಟೆಗೆ ಹೋಗಿದ್ದನು. ಅಲ್ಲಿ ಒಂದು ಕಡೆಯಲ್ಲಿ ಮರದ ದಿಮ್ಮಿಯಂತೆ ಬಿದ್ದಿದ್ದ ಹೆಬ್ಬಾವೊಂದು ಭೀಮನನ್ನು ಸುತ್ತಿ ಬಿಗಿದು ಬಿಟ್ಟಿತು. ಭೀಮ ತನ್ನ ಸರ್ವಶಕ್ತಿ ಉಪಯೋಗಿಸಿ ಹೋರಾಡಿದರೂ ಬಿಗಿತ ಸಡಿಲಿಸಲಾಗುತ್ತಿಲ್ಲ. ಅಯ್ಯೋ ಎಂತೆಂತಹ ಬಲಾಢ್ಯ ರಾಕ್ಷಸರನ್ನು ಮುರಿದು ಎಸೆದ ನನಗೆ ಈ ಹೆಬ್ಬಾವಿನ ಬಾಯಲ್ಲೇ ಮರಣವೆಂದು ವಿಧಾತ ಬರೆದಿರುವಂತಿದೆಯಲ್ಲಾ! ಸೋತು ಕಂಗಾಲಾಗಿ ದೇವರನ್ನು ಸ್ಮರಿಸತೊಡಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page