ಭಾಗ – 218
ಭರತೇಶ್ ಶೆಟ್ಟಿ,ಎಕ್ಕಾರ್

ಕಥನ ಶ್ರವಣ ಮಾಡಿದ ಧರ್ಮರಾಯ ಮತ್ತವನ ಸೋದರರು ಮಾಂಧಾತನು ಶತ ರಾಜಸೂಯಾಧ್ವರ ಮತ್ತು ಅಶ್ವಮೇಧ ಯಾಗ ಮಾಡಿದ್ದ ಪುಣ್ಯ ಕ್ಷೇತ್ರಕ್ಕೆ ವಂದಿಸಿ ಮುನ್ನಡೆದರು.
ಸೋಮಕಾಶ್ರಮ, ಮಾರ್ಕಾಂಡೇಯಾಶ್ರಮ, ಮುಂತಾದವುಗಳನ್ನೆಲ್ಲಾ ನೋಡಿಕೊಂಡು ಮುಂದೆ ಬಹಳಷ್ಟು ಪುಣ್ಯ ಕ್ಷೇತ್ರ, ಋಷ್ಯಾಶ್ರಮಗಳನ್ನೆಲ್ಲಾ ಸಂದರ್ಶಿಸಿ ಅಲ್ಲಿನ ಮಹಿಮೆಯ ಕಥೆಗಳನ್ನು ಕೇಳುತ್ತಾ ಸಾಗಿದರು. ಪಾಂಡವರು ಹೀಗೆ ಬರುತ್ತಾ ಗಂಧಮಾದನ ಪ್ರದೇಶದಲ್ಲಿ ಬಂದು ವಿಶ್ರಾಂತರಾದರು. ಆ ಪರಿಸರದಲ್ಲಿ ತಂಗಿದ್ದು ಕೆಲ ದಿನಗಳನ್ನು ಕಳೆದರು. ಪ್ರಶಾಂತ ಪ್ರದೇಶ, ಸುಮ ಸೌರಭ ಮಾರುತ, ಪ್ರಕೃತಿಯ ಅಧಮ್ಯ ಸೌಂದರ್ಯ ಸವಿಯುತ್ತಾ ಅಲ್ಲಿ ದಿನಗಳೆದರು. ಒಂದು ದಿನ ದ್ರೌಪದಿ ನಿಂತು ನಿಸರ್ಗದ ರಮಣೀಯತೆಯನ್ನು ಸವಿಯುತ್ತಿರುವಾಗ ವಿಶೇಷ ಪರಿಮಳ ಪೂರಿತ ಗಾಳಿ ಬೀಸಿ ಬರತೊಡಗಿತು. ಆಸ್ವಾದಿಸುತ್ತಾ ಗಾಳಿ ಬೀಸಿ ಬರುತ್ತಿದ್ದ ಈಶಾನ್ಯ ದಿಕ್ಕಿನತ್ತ ತಿರುಗಿದಾಗ ಸುಂದರ ಸುಮವೊಂದು ಗಾಳಿಯಲ್ಲಿ ಹಾರಿ ಬಂದು ಬಿತ್ತು. ದ್ರೌಪದಿ ಅದನ್ನು ನೋಡಿ- ಓಡಿ ಹೋಗಿ ಎತ್ತಿಕೊಂಡಳು. ಆಹಾ ಎಂತಹ ಸುಮಧುರ ಸೌರಭ. ಆ ಹೂವನ್ನು ಹಿಡಿದೆತ್ತಿಕೊಂಡು ಭೀಮನ ಬಳಿ ಬಂದಳು. ಭೀಮನಿಗೆ ಹೂವನ್ನು ತೋರಿಸುತ್ತಾ ” ಏನು ಚೆಲುವು, ಎಂತಹಾ ಸೌಗಂಧ! ಈ ಹೂವನ್ನು ನೋಡಿದಾಕ್ಷಣ ನನ್ನ ಮನಸ್ಸು ಉಲ್ಲಾಸದಿಂದ ಕುಣಿದಾಡಿತು. ಈ ಸಂಭ್ರಮ ಮನಮಾಡಿರುವುದನ್ನು ಅರ್ಥೈಸಿಕೊಂಡಾಗ ಏಕೋ ಇದು ಶುಭ ಸೂಚನೆಯೆ ಹೌದೆಂಬ ಶಕುನದಂತೆ ಭಾಸವಾಗುತ್ತಿದೆ. ನನಗೇಕೋ ಇಂತಹ ಹೂವುಗಳು ಇನ್ನೂ ಬೇಕೆಂಬ ಆಶೆಯಾಗಿದೆ. ಈಶಾನ್ಯ ದಿಕ್ಕಿನಿಂದ ಹಾರಿ ಬಂದಿದೆ. ಗಾಳಿಯಲ್ಲೂ ಈ ಪುಷ್ಪದ ಪರಿಮಳ ತೇಲಿಬರುತ್ತಿದೆ. ನನಗಾಗಿ ಇನ್ನಷ್ಟು ಹೂವುಗಳನ್ನು ತಂದು ಕೊಡುವಿರಾ” ಎಂದು ಕೇಳಿಕೊಂಡಳು.
ಭೀಮನಿಗೆ ಅತ್ಯಾನಂದವಾಯಿತು. ರಾಜಕುವರಿಯಾದ ದ್ರೌಪದಿ ವಿವಾಹದ ದಿನದಿಂದ ಕಷ್ಟದ ದಿನಗಳನ್ನು ಅನುಭವಿಸುತ್ತಾ ಬಂದಿದ್ದಾಳೆ. ಈಗ ವನವಾಸದಲ್ಲಿದ್ದರೂ ಅಪರೂಪವೆಂಬಂತೆ ಮನದಾಸೆ ಕೇಳಿದ್ದಾಳೆ. ಈಗಲೆ ತಂದು ಕೊಡುವೆನೆಂದು ಭೀಮಸೇನ ತನ್ನ ಗದೆಯನ್ನು ಹೆಗಲೇರಿಸಿ ಹೊರಟು ಬಿಟ್ಟನು.
ಗಂಧಮಾದನ ಪ್ರದೇಶದ ತಂಪುಗಾಳಿ ಯಾರಿಗಾದರೂ ನವ ಚೈತನ್ಯ ತುಂಬುವಂತಿತ್ತು. ಕಾಡು ಮೇಡು, ಪರ್ವತ ಗಿರಿ – ಶಿಖರ, ತೊರೆ – ಝರಿ ಹೀಗೆ ಏರಿ ಇಳಿದು, ದಾಟುತ್ತಾ ಭೀಮ ಹೂವನ್ನು ಹುಡುಕುತ್ತಾ ಇದ್ದಾನೆ. ಹೀಗೆ ಸಾಗುತ್ತಿರಬೇಕಾದರೆ ಭೀಮನಿಗೆ ಏಕೋ ಕೌರವರ ಮೋಸ, ಪರಿಣಾಮವಾಗಿ ಒದಗಿದ ವನವಾಸದ ಕಷ್ಟಗಳನ್ನೆಲ್ಲಾ ನೆನೆದು ಅಂತರಂಗದಲ್ಲಿ ಉಕ್ಕೇರಿದ ರೋಷಕ್ಕೆ ಶರೀರ ಕೊತ ಕೊತ ಕುದಿಯತೊಡಗಿತು. ಅಕ್ರೋಶದಿಂದ ಘರ್ಜಿಸಿದಾಗ ಸಿಂಹ, ಆನೆಯಾದಿ ಕಾಡಮೃಗಗಳು ಭಯಗೊಂಡು ದಿಕ್ಕೆಟ್ಟು ಓಡಿದವು.
ಮತ್ತೆ ದ್ರೌಪದಿ ಬಯಸಿರುವ ಸುಮದ ಸ್ಮರಣೆಯಾಗಿ ಮುಂದೆ ಸಾಗಿದನು. ಆಗ ಎದುರಾಗಿ ಬಾಳೆ ವನ ಕಾಣಿಸಿತು. ಮಾಗಿದ ಬಾಳೆಗೊನೆಗಳು ಕಾಣಿಸಿದವು. ಅಲ್ಲಿಯೆ ಪಕ್ಕದಲ್ಲಿ ಧುಮ್ಮಿಕ್ಕುತ್ತಿದ್ದ ನೀರ್ಝರಿಯಲ್ಲಿ ಮುಳಗೆದ್ದು ಶುಚಿರ್ಭೂತನಾದನು. ದೇಹಕ್ಕೆ ಆಹ್ಲಾದವಾಗುತ್ತಿತ್ತು. ಜಲಾಶಯದಿಂದ ಮೇಲೆ ಬಂದು ತನ್ನ ಬಳಿಯಿದ್ದ ಶಂಖವನ್ನೂದಿ ನಾದವೆಬ್ಬಿಸಿದನು. ಈ ಶಂಖನಾದ ಗಿರಿ ಗಹ್ವರ, ಶಿಖರ ಪರ್ವತಗಳಲ್ಲೆಲ್ಲಾ ಪ್ರತಿಧ್ವನಿಸಿತು. ಭೀಮನು ಹಣ್ಣುಗಳನ್ನೊಂದಿಷ್ಟು ತಿಂದು ಶುದ್ಧೋದಕ ಕುಡಿದು ಹಸಿವು ಬಾಯಾರಿಕೆ ನೀಗಿಸಿಕೊಂಡು ಬಾಳೆ ತೋಟ ನುಗ್ಗುವ ಮದ್ದಾನೆಯಂತೆ ಭೀಮ ಮುನ್ನುಗ್ಗಿ ಸಾಗಿದನು. ಆ ಕದಳೀವನದೊಳಗೆ ಶ್ರೀರಾಮನ ಕರಕಿಂಕರನಾದ ಆಂಜನೇಯ ರಾಮಧ್ಯಾನ ನಿರತನಾಗಿದ್ದನು. ಭೀಮನ ಶಂಖಧ್ವನಿಯ ನಿನಾದದಿಂದ ವಿಮುಖನಾಗಿ ಏನಿದು ಧ್ವನಿ ಎಂಬ ಹಾಗೆ ವಿವೇಚನೆಗೆ ಒಳಗಾಗಿದ್ದಾನೆ.
ಮುಂದುವರಿಯುವುದು…





