
ಬೆಂಗಳೂರು: ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು/ಚಿಕ್ಕಿ ವಿತರಿಸಲಾಗುತ್ತಿದ್ದು ಆದರೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮೂರು ವರ್ಷಗಳ ಅವಧಿಗೆ ವಾರದ ಉಳಿದ ನಾಲ್ಕು ದಿನಗಳಿಗೆ ಮೊಟ್ಟೆ ನೀಡಲು 1,500 ಕೋಟಿ ರೂಗಳ ಒಪ್ಪಂದವನ್ನು ಸರಕಾರದೊಂದಿಗೆ ಮಾಡಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಸರ್ಕಾರವು ತೀರ್ಮಾನಿಸಿದೆ.
ಪೂರಕ ಪೌಷ್ಟಿಕಾಂಶ ರೂಪದಲ್ಲಿ ಮಕ್ಕಳಿಗೆ ವಿತರಿಸುವ ಮೊಟ್ಟೆಯು ಉತ್ತಮ ಗುಣಮಟ್ಟ ಹೊಂದಿದ್ದು ಕನಿಷ್ಠ 50 ಗ್ರಾಂ ತೂಕ ಇರಬೇಕು. ಮೊಟ್ಟೆ ಸೇವಿಸದ ಮಕ್ಕಳಿಗೆ ಪ್ರತಿದಿನ ಎರಡು ಬಾಳೆಹಣ್ಣು ನೀಡಬೇಕು. ಜೊತೆಗೆ ಬೆಳಗ್ಗಿನ ಪ್ರಾರ್ಥನೆ ವೇಳೆ 10 ನಿಮಿಷಗಳ ಕಾಲ ಮೊಟ್ಟೆ ಹಾಗೂ ಬಾಳೆಹಣ್ಣಿನ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತೆ ಮುಖ್ಯ ಶಿಕ್ಷಕರಿಗೆ ಶಾಲಾ ಆಯುಕ್ತರು ಸೂಚನೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.





