19.1 C
Udupi
Tuesday, December 23, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 216

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೨೨೭ ಮಹಾಭಾರತ

ಮಹಾತ್ಮರಾದ ಮಾರ್ಕಾಂಡೇಯರು ಮೃಕಂಡು ಮಹರ್ಷಿಗಳ ಮಗ. ಇವರ ಹುಟ್ಟು ಬಹಳ ವೈಶಿಷ್ಟ್ಯತೆಯನ್ನು ಹೊಂದಿದೆ. ಬಹುವರ್ಷಗಳ ಕಾಲ ಮಕ್ಕಳಾಗದೆ ಪರಿತಪಿಸುತ್ತಿದ್ದರು. ಇವರ ಮಾತಾಪಿತರು ಸಂತಾನ ಭಾಗ್ಯ ಪ್ರಾಪ್ತಿಗಾಗಿ ಪರಶಿವನ ಮೊರೆ ಹೋಗಿ ಗಾಢ ತಪಸ್ಸನ್ನು ಆಚರಿಸಿದರು. ಒಂದು ಸುದಿನ ಸುಪ್ರೀತನಾದ ಮಹಾದೇವ ಒಲಿದು ಪರೀಕ್ಷೆ ಮಾಡುವ ರೀತಿಯಲ್ಲಿ ವರಪ್ರದನಾದನು. ಸತ್ಪುರುಷ, ಅಲ್ಪಾಯುಷಿ ಆದ ಓರ್ವ ಮಗ ಆಗಬಹುದೊ? ಅಥವಾ ದುಷ್ಟರಾದ ಬಹುಮಂದಿ ಮಕ್ಕಳು ಬೇಕೊ? ಎಂಬ ಆಯ್ಕೆ ಮುಂದಿಟ್ಟನು. ಆಗ ಆ ದಂಪತಿಗಳು ಅಲ್ಪಾಯುಷಿಯಾದರೂ ಸತ್ಪುತ್ರನಾದ ಒಬ್ಬನೇ ಮಗ ಸಾಕೆಂದು ಬೇಡಿಕೊಂಡರು. ಅನುಗ್ರಹಿಸಿದ ಮಹಾದೇವ ಅದೃಶ್ಯನಾದನು. ಹೀಗೆ ಶಿವಪ್ರಸಾದವಾಗಿ ಮಾತಾ ಪಿತರ ತಪಸ್ಸಿಗೆ ಪ್ರಾಪ್ತವಾದ ವರಬಲದಿಂದ ಹುಟ್ಟಿದವರು ಮಹರ್ಷಿ ಮಾರ್ಕಾಂಡೇಯರು.

ದಿನಗಳೆಯುತ್ತಿಯಲು ಮೃಕಂಡು ದಂಪತಿಗಳಿಗೆ ಸುಪುತ್ರನ ಜನನವಾಯಿತು. ಸಂತೋಷದಿಂದ ಜಾತಕರ್ಮಾದಿಗಳನ್ನು ಪೂರೈಸಿ, ಉಪನಯನ, ವೇದಾಭ್ಯಾಸಾದಿಗಳೂ ಸಕಾಲದಲ್ಲಿ ನಡೆದವು. ಜನನ ಕುಂಡಲಿ ವಿಮರ್ಷೆಯಂತೆ ಈ ಮಗುವಿನ ಆಯಸ್ಸು ಕೇವಲ ಹದಿನಾರು ವರ್ಷ ಮಾತ್ರ ಎಂದು ತಿಳಿದ ಹೆತ್ತವರು ಕಡು ದುಃಖವನ್ನು ತಡೆಯುತ್ತಾ ಇರುವಷ್ಟು ಕಾಲ ಮಗನ ಜೊತೆ ಏನೂ ತೋರಗೊಡದೆ ಸಂಭ್ರಮದಿಂದ ಇರೋಣ ಎಂದು ದಿನಗಳೆಯುತ್ತಿದ್ದರು.

ವೇದ ಪಾರಂಗತ, ಸುಜ್ಞಾನಿ, ಸುಭಾಷಿತ, ಸಜ್ಜನನಾದ ಮಾರ್ಕಾಂಡೇಯರನ್ನು ನೋಡಿದ ನಾರದರಿಗೆ ಬಾಲಕನ ಗುಣ, ಶೀಲ, ಸ್ವಭಾವ ಕಂಡು ಮಹದಾನಂದ ಆಯಿತು. ತ್ರಿಕಾಲ ಜ್ಞಾನಿಯೂ ಆದ ಅವರಿಗೆ ಈ ಮಗು ಇನ್ನು ಕೆಲ ಸಮಯದಲ್ಲಿ ಮರಣ ಹೊಂದಲಿದ್ದಾನೆ ಎಂದು ತಿಳಿದು ಚಿಂತೆಯಾಯಿತು. ಆದರೂ ಪ್ರಯತ್ನಿಸೋಣ ಎಂದು ಬಾಲಕನಿಗೆ ‘ಮೃತ್ಯುಂಜಯ ಮಂತ್ರ’ ವನ್ನು ಉಪದೇಶ ಮಾಡಿ, “ಮಗೂ, ನೀನು ದಿನ ನಿತ್ಯ ಸಾಧ್ಯವಿದ್ದಷ್ಟು ಈ ಮಂತ್ರವನ್ನು ಜಪಿಸು. ನಿನಗೆ ಹದಿನಾರು ವರುಷ ತುಂಬುವ ದಿನ ಲಿಂಗರೂಪಿ ಶಿವನನ್ನು ನಿರಾಹಾರನಾಗಿ ಸದ್ಭಕ್ತಿಯಿಂದ ಅರ್ಚಿಸಿ, ಅನನ್ಯವಾಗಿ ಧ್ಯಾನಿಸುತ್ತಿರುವವನಾಗು. ಭಯ, ವೇದನೆ ಮನಸ್ಸಿಗಾದರೆ ಸರ್ವಾರ್ಪಣ ಬುದ್ದಿಯಿಂದ ಶರಣಾಗಿ ನಿರಂತರವಾಗಿ ಎಡೆಬಿಡದೆ ಸದಾಶಿವನನ್ನು ಸ್ತುತಿಸಿ ಪ್ರಾರ್ಥನೆ ಮಾಡುತ್ತಿರು” ಎಂದು ಉಪದೇಶ ಮಾಡಿ ಹೋದರು. ಅಂದಿನಿಂದ ನಿತ್ಯಾನುಷ್ಟಾನ, ಜಪ ಧ್ಯಾನ ನಿರತನಾದ ಮಾರ್ಕಾಂಡೇಯರು ತನ್ನ ಕಲಿಕೆಯನ್ನು ಮುಂದುವರಿಸುತ್ತ ವಿದ್ವಾಂಸರೂ ಆದರು.

ಹದಿನಾರು ಸಂವತ್ಸರ ತುಂಬುವ ದಿನ ಬಂದು ಬಿಟ್ಟಿತು ನಾರದರ ಉಪದೇಶದಂತೆ ಶುಚಿರ್ಭೂತರಾಗಿ ನಿರಾಹಾರರಾಗಿದ್ದು ಮಾತಾಪಿತರ ಆಶೀರ್ವಾದ ಪಡೆದು ಶಿವನ ಗುಡಿಗೆ ಹೋಗಿ ಮಹಾಲಿಂಗೇಶ್ವರನನ್ನು ಅನವರತ ಅರ್ಚಿಸಿ ಪೂಜಿಸಿ ಧ್ಯಾನ ನಿರತರಾದರು. ಆ ದಿನ ಸೂರ್ಯಾಸ್ತಮಾನ ಕಾಲಕ್ಕೆ ಮಾರ್ಕಾಂಡೇಯರ ಆಯುಷ್ಯ ಮುಗಿದು ಮೃತ್ಯು ದೇವತೆ ಸಹಿತ ಯಮನು ಬಂದು ಬಾಲಕನ ಸೂಕ್ಷ್ಮ ಜೀವವನ್ನು ಸೆಳೆಯಲು ಮುಂದಾದರು. ಆ ಹೊತ್ತಿಗೆ ಭಯಗೊಂಡ ಬಾಲಕ ಸರ್ವ ಸಮರ್ಪಣಭಾವದಿಂದ ಲಿಂಗರೂಪಿ ಶಿವನನ್ನು ಬಿಗಿದಪ್ಪಿ ರಕ್ಷಣೆಗಾಗಿ ಪ್ರಾರ್ಥಿಸತೊಡಗಿದನು. ಆ ಸಮಯ ಯಮನು ಸ್ವಯಂ ತಾನೇ ಕಾರ್ಯಕ್ಕೆ ತೊಡಗಿ ಯಮಪಾಶವನ್ನೆಸೆದು ಎಳೆದನು‌. ಆದರೆ ಮಾರ್ಕಾಂಡೇಯರ ಪ್ರಾಣ ಬರಲಿಲ್ಲ. ಮಾರ್ಕಾಂಡೇಯರು ಲಿಂಗಾಲಿಂಗನವನ್ನು ಬಿಗಿಗೊಳಿಸಿ ಅಪ್ಪಿ ಅಂಟಿಕೊಂಡಂತೆ ಹಿಡಿದುಕೊಂಡಿದ್ದರು. ವೈಫಲ್ಯದಿಂದ ಕ್ರೋಧಾವೇಶಕ್ಕೊಳಗಾದ ಯಮಧರ್ಮ ತನ್ನ ಕಾಲದಂಡದಿಂದ ಲಿಂಗವನ್ನು ದೂಡಿ, ಪಾಶದಿಂದ ಎಳೆದು ಬಾಲಕನನ್ನು ಬೇರ್ಪಡಿಸುವ ಪ್ರಯತ್ನ ಮಾಡತೊಡಗಿದನು. ಕಾಲದಂಡ ಲಿಂಗಕ್ಕೆ ಘಾತಿಸಿದಾಗ ಲಿಂಗ ಮಧ್ಯದಿಂದ ಮಹಾರುದ್ರೇಶ್ವರ ಮೇಲೆದ್ದು ತನ್ನ ನಿಟಿಲಾಗ್ನಿಯಿಂದ ಯಮನನ್ನು ಸುಟ್ಟು ಬಿಟ್ಟನು. ಬ್ರಹ್ಮಾದಿ ದೇವತೆಗಳು ಪ್ರಕಟರಾಗಿ ಮಹಾರುದ್ರನನ್ನು ಶಾಂತನಾಗಲು ಪ್ರಾರ್ಥಿಸಿದರು. ಋಷಿ ಮುನಿಗಳು ಅನವರತ ಸ್ತುತಿಸಿದರು. ಆ ಹೊತ್ತಿಗೆ ಮೃಕಂಡು ಮಹರ್ಷಿಯೂ ಪತ್ನಿ ಸಹಿತನಾಗಿ ಬಂದು ನೋಡಿ ಬೆರಗಾಗಿ ಭಗವಂತನನ್ನು ಪ್ರಾರ್ಥಿಸತೊಡಗಿದರು. ಶಾಂತನಾದ ಪರಮೇಶ್ವರ ಯಮಧರ್ಮನನ್ನು ಪುನರುಜ್ಜೀವಗೊಳಿಸಿ ಎಬ್ಬಿಸಿದರು. “ಅಯ್ಯಾ, ಯಮನೇ, ನನ್ನ ಭಕ್ತನ ಭಕ್ತಿಗೆ ಪರವಶನಾಗಿ ನಿನ್ನ ಕಾರ್ಯಕ್ಕೆ ಅಡ್ಡಿ ಪಡಿಸಿದೆ. ನನ್ನಿಂದ ನಿನ್ನ ಕರ್ತವ್ಯಕ್ಕೆ ಆತಂಕ ಉಂಟು ಮಾಡುವಂತಾಯಿತು” ಎಂದು ಹೇಳಿ, ಮಾರ್ಕಾಂಡೇಯನನ್ನು ಮುಂದೆ ನಿಲ್ಲಿಸಿ ಕರೆದೊಯ್ಯುವಂತೆ ಕೇಳಿಕೊಂಡನು.

ಬಾಲಕನ ಭಕ್ತಿಯ ಶಕ್ತಿಗೆ ಮೆಚ್ಚಿದ ಯಮಧರ್ಮನು “ವಿಧಿಲಿಖಿತವನ್ನು ತಿದ್ದಲಾಗದು. ಈ ಬಾಲಕನ ಆಯಸ್ಸು ಹದಿನಾರು ವರ್ಷ ಮಾತ್ರವೇ ಇರಲಿ. ಆದರೆ ಆ ಹದಿನಾರು ವರ್ಷಗಳು ಭೂಲೋಕದ ಗಣನೆಯದ್ದಲ್ಲ, ದೇವಲೋಕದ ಕಾಲಮಾನದ್ದೂ ಅಲ್ಲ, ಶಿವಲೋಕದ್ದು ಆಗಲಿ” ಎಂದು ಅನುಗ್ರಹಿಸಿ ಮಗುವನ್ನು ಹೆತ್ತವರಿಗೊಪ್ಪಿಸಿ ಆಶೀರ್ವದಿಸಿ ಅಂತರ್ಧಾನನಾದನು. ಪರಶಿವ, ಬ್ರಹ್ಮಾದಿ ದೇವತೆಗಳು ಹರಸಿ ಅಂತರ್ಹಿತರಾದರು. ಋಷಿ ಮುನಿಗಳು ಮಾರ್ಕಾಂಡೇಯ ಬಾಲಕನಾಗಿದ್ದರೂ ಆತನಿಗೆ ನಮಿಸಿ ನಿಂತು ಹೊಗಳತೊಡಗಿದರು. ಸುದೀರ್ಘ ತಪಸ್ಸಿಗೂ ದುರ್ಲಭವಾದ ಶಿವ ದರ್ಶನವನ್ನು ನಮಗೆ ಒದಗಿಸಿದ ಪುಣ್ಯಾತ್ಮ ನೀನಾದೆ ಕಂದಾ ಎಂದು ಶ್ಲಾಘಿಸಿ ಹರಸಿದರು.

ಇಂತಹ ಸಜ್ಜನ ಸದ್ಭಕ್ತ, ಸಕಲ ಶಾಸ್ತ್ರ ಜ್ಞಾನ ಸಂಪನ್ನ, ಲೋಕಾನುಭವ ವಿಶಾರದರಾದ ಮಾರ್ಕಾಂಡೇಯರು ತಾವಾಗಿಯೆ ಧರ್ಮರಾಯನಲ್ಲಿಗೆ ಬಂದಿದ್ದಾರೆ. ಸುಮ್ಮನೆ ಕಾರ್ಯಕಾರಣವಿಲ್ಲದೆ ಬರುವವರೆ ಮಾರ್ಕಾಂಡೇಯರು?

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page