
ಮಲ್ಪೆ: ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪ್ರವಾಸಿಗರ ತಾಣ ಮಲ್ಪೆ ಕಡಲ ತೀರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನೀರಿಗಿಳಿಯುವುದಕ್ಕೆ ನಿಷೇಧ ಹೇರಲಾಗಿದೆ.
ದಿನನಿತ್ಯ ಸಾವಿರಾರು ಪ್ರವಾಸಿಗರು ಮಲ್ಪೆ ಕಡಲ ತೀರಕ್ಕೆ ಆಗಮಿಸುತ್ತಿದ್ದು ಸಮುದ್ರ ಪ್ರಕ್ಷುಬ್ದಗೊಂಡು ಅಲೆಗಳ ಅಬ್ಬರ ಜೋರಿದ್ದರೂ ಜೀವ ರಕ್ಷಕ ದಳದ ಕಣ್ಣು ತಪ್ಪಿಸಿ ನೀರಿಗಿಳಿದು ಅನಾಹುತ ಸಂಭವಿಸುವುದು ಸಾಮಾನ್ಯ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಒಂದು ಕಿಲೋಮೀಟರ್ ದೂರ ತಡೆಬೇಲಿ ನಿರ್ಮಿಸಲು ಗುರುವಾರದಿಂದ ಕೆಲಸ ಆರಂಭಗೊಂಡಿದ್ದು ಶನಿವಾರ ಕೆಲಸ ಪೂರ್ಣಗೊಂಡಿದೆ.
ಸಮುದ್ರ ತೀರದಿಂದ ಸುಮಾರು 20 ಅಡಿಗಳಷ್ಟು ದೂರ ಒಂದು ಕಿಲೋಮೀಟರ್ ಬೀಚ್ನ ಉದ್ದಕ್ಕೂ 10 ಅಡಿ ಎತ್ತರದಲ್ಲಿ ಫಿಶ್ನೆಟ್ ಬಳಸಿ ತಡೆ ಬೇಲಿಯನ್ನು ಹಾಕಲಾಗಿದ್ದು ಕಂಬಗಳಲ್ಲಿ ಕೆಂಪು ಬಾವುಟವನ್ನು ಎಲ್ಲರಿಗೂ ಗೋಚರಿಸುವಂತೆ ಕಟ್ಟಲಾಗಿದೆ. ಸಮುದ್ರದ ವಾತಾವರಣವನ್ನು ನೋಡಿಕೊಂಡು ಸಪ್ಟೆಂಬರ್ ಆರಂಭದಲ್ಲಿ ತಡೆಬೇಲಿಯನ್ನು ತೆರವುಗೊಳಿಸಿದ ಬಳಿಕ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಹುದಾಗಿದೆ ಎಂದು ಇಲಾಖೆಯು ತಿಳಿಸಿದೆ.





















































