
ಮಂಗಳೂರು: ವರುಣನ ಆರ್ಭಟಕ್ಕೆ ಮೇ 30ರ ಬೆಳಗಿನ ಜಾವ ಮೊಂಟೆಪದವು ಕೋಡಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಮಹಿಳೆ ಎರಡೂ ಕಾಲುಗಳ ಸ್ವಾಧಿನ ಕಳೆದುಕೊಂಡಿದ್ದು ಇದರಿಂದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಎರಡೂ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ ಎಂದು ವರದಿಯಾಗಿದೆ.
ಅವಶೇಷಗಳ ಅಡಿ ಸಿಲುಕಿದ್ದ ಮಹಿಳೆ ಅಶ್ವಿನಿ, ಅವರ ಇಬ್ಬರು ಮಕ್ಕಳನ್ನು ಬಿಗಿದಪ್ಪಿ ಕಾಪಾಡಲು ಯತ್ನಿಸಿದ್ದರೂ ಒಂದು ಮಗು ಅಲ್ಲಿಯೇ ಸಾವನ್ನಪ್ಪಿತ್ತು. ಇನ್ನೊಂದು ಮಗು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿತ್ತು. ಗಾಯಗೊಂಡಿದ್ದ ಅಶ್ವಿನಿಯವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತದೇಹವನ್ನು ಮನೆಯ ಪಕ್ಕದಲ್ಲಿಯೇ ಮಣ್ಣಿನಲ್ಲಿ ಹೂಳಲಾಗಿದೆ. ಪಕ್ಕದಲ್ಲೇ ಅಜ್ಜಿ ಪ್ರೇಮಾ ಅವರ ಶವಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ.
ಮಹಿಳೆಯ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಕಾಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಒಂದು ಕಾಲಿನ ಪಾದದ ಭಾಗದಿಂದ ಕತ್ತರಿಸಲಾಗಿದೆ. ಮತ್ತೊಂದು ಪೂರ್ತಿ ಕಾಲು ಕತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.






















































