
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ಬಾವಿಯಲ್ಲಿ ಪ್ರಿಯಕರನ ಜೊತೆ ವಿವಾಹಿತೆಯ ಶವಪತ್ತೆಯಾದ ಘಟನೆ ನಡೆದಿದೆ.
ಬಡಗಮಿಜಾರು ನಿವಾಸಿ ನಮೀಕ್ಷಾ ಶೆಟ್ಟಿ ಮತ್ತು ಪ್ರಿಯಕರ ನಿಡ್ಡೋಡಿಯ ಪ್ರಶಾಂತ್ ಮೃತದೇಹ ಎಂದು ಗುರುತಿಸಲಾಗಿದ್ದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತ: ಬಾಗಲಕೋಟೆ ನಿವಾಸಿಯಾದ ಪ್ರಶಾಂತ್ ಗೆ ಮದುವೆಯಾಗಿ ವಿಚ್ಛೇದನ ಆಗಿದ್ದು ನಮೀಕ್ಷಾ ಶೆಟ್ಟಿಗೆ ಇನ್ಸ್ಟಾಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿತ್ತು. ನಮೀಕ್ಷಾ ಗಂಡನ ಜೊತೆ ಸಂಸಾರ ಸರಿ ಬಾರದೆ ತನ್ನ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಪ್ರಿಯಕರ ಪ್ರಶಾಂತ್ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ನಿನ್ನೆ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಶಾಂತ್ ಬಂದಿದ್ದು, ಈ ವೇಳೆ ಪ್ರಶಾಂತ್-ನಮೀಕ್ಷಾ ಮಧ್ಯೆ ಜಗಳ ನಡೆದಿದೆ. ಪಕ್ಕದಲ್ಲಿದ್ದ ಬಾವಿಗೆ ಆಕೆಯನ್ನು ತಳ್ಳಿದ್ದನ್ನು ನಮೀಕ್ಷಾ ಪುತ್ರ ನೋಡಿದ್ದಾನೆ. ಇದನ್ನು ಕಂಡ ಪ್ರಶಾಂತ್ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ.






















































