ಭಾಗ 104
ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೦೫ ಮಹಾಭಾರತ
ಕೆಲಹೊತ್ತು ಕಳೆದು ಹೋದಾಗ ಚೇತರಿಸಿ ಎಚ್ಚೆತ್ತು ಕೊಂಡನು ನಳ ಚಕ್ರವರ್ತಿ. ಕಣ್ತೆರೆದು ನೋಡಿದರೆ, ಬಳಿಯಲ್ಲಿ ಓರ್ವ ದಿವ್ಯ ಪುರುಷ ನಿಂತಿದ್ದಾನೆ. ಆ ವ್ಯಕ್ತಿ “ನಳ ಚಕ್ರವರ್ತಿ ಮೊದಲಾಗಿ ನಿನಗೆ ಪ್ರಣಾಮಗಳು. ನಿನ್ನನ್ನು ಕಚ್ಚಿ ಕಾರ್ಕೋಟಕ ಸರ್ಪವಾಗಿದ್ದ ನಾನು ಶಾಪ ವಿಮೋಚಿತನಾಗಿ ಪುನರಪಿ ನನ್ನ ಮೂಲ ಸ್ವರೂಪವಾದ ಗಂಧರ್ವನಾಗಿದ್ದೇನೆ. ಪರಮ ಧರ್ಮಿಷ್ಟನೂ ಅತಿರೂಪವಂತನೂ ಆದ ನಿನಗೆ ಈ ಸ್ಥಿತಿ ಬರಬಾರದಿತ್ತು. ಆದರೆ ಗ್ರಹಚಾರವೊ, ನಿಯತಿಯ ನಿಯಮವೊ ಹೀಗಾಗುವಂತೆ ಮಾಡಿಸಿದೆ. ಈಗ ವನವಾಸಿಯಾದ ನೀನು ಇನ್ನು ಕೆಲಕಾಲ ಹೀಗೆಯೆ ಕಾಲಕಳೆಯಬೇಕಾಗಿದೆ. ನಿನ್ನದ್ದಾಗಿದ್ದ ನಿಜರೂಪದಲ್ಲಿ ನೀನಿರುತ್ತಿದ್ದರೆ ಬದುಕು ಕಷ್ಟಕರವಾಗುತ್ತಿತ್ತು. ಕಾರ್ಕೋಟಕ ವಿಷದಿಂದಾಗಿ ನಿನ್ನ ಶರೀರವೇ ಕಮರಿ ಕರುಟಿ ಮುರುಟಿದೆ. ರುಂಡ ಮುಂಡಗಳೆರಡೂ ಅಷ್ಟವಕ್ರತೆಗಳನ್ನು ಹೊಂದಿ ವಿಕಾರವಾಗಿದೆ. ನಿನ್ನನ್ನು ಈ ಸ್ಥಿತಿಯಲ್ಲಿ ಯಾರೂ ಗುರುತಿಸಲಾರರು. ಮುಂದೆ ಒಂದು ದಿನ ಪಕ್ಷಿಗಳಿಂದ ಅಪಹೃತವಾದ ಧೋತ್ರಾದಿ ವಸ್ತ್ರಗಳು ಮರಳಿ ನಿನ್ನ ಕೈ ಸೇರಲಿವೆ. ನೀನು ಆ ವಸ್ತ್ರಗಳನ್ನು ಧರಿಸುವ ಹೊತ್ತಿಗೆ ದೇವಾನುಗ್ರಹವೂ ಒದಗಿ ನೀನು ಕಳೆದುಕೊಂಡ ಸರ್ವಸ್ವ – ರೂಪ, ಪತ್ನಿ, ಪರಿವಾರ, ರಾಜ್ಯ, ಪ್ರಜಾವರ್ಗ, ಕೋಶ ಹೀಗೆ ಸಮಸ್ತ ಸೌಭಾಗ್ಯಗಳೂ ಮರಳಿ ಕೈಸೇರಲಿವೆ. ನಿನಗೆ ಕ್ಷೇಮವಾಗಲಿ” ಎಂದು ನುಡಿದು ಅದೃಶ್ಯನಾದನು. ನಳ ತನ್ನ ಶರೀರದ ಅಂಗಾಂಗಗಳನ್ನು ನೋಡುತ್ತಾನೆ, ಅಯ್ಯೋ ವಿಕಾರವಾಗಿ ವಿಚಿತ್ರವಾಗಿ ಕಾಣುತ್ತಿದೆ. ಅಜಾನುಬಾಹುವಾಗಿದ್ದ ನಳ ಚಕ್ರವರ್ತಿ ಬಾಹುಕ ನಾಗಿದ್ದಾನೆ.
ಕುರೂಪಿ ಬಾಹುಕ ಅಲೆದಲೆದು ಸಾಗಿ ಗಂಗಾನದಿಯನ್ನು ದಾಟಿ ಬಂದು ಆಯೋಧ್ಯೆ ಸೇರಿದನು. ವರ್ತಮಾನ ಕಾಲದಲ್ಲಿ ಅಯೋಧ್ಯೆಯ ಮಹಾರಾಜ ಋತುಪರ್ಣನಲ್ಲಿ ರಾಜಾಶ್ರಯ ಬೇಡಿದನು. ಋತುಪರ್ಣನಿಗೂ ಬಾಹಕನಾಗಿರುವ ನಳನನ್ನು ಕಾಣುವಾದ ಅನನ್ಯ ಭಕ್ತಿ ಗೌರವ ಭಾವ ಮನದಲ್ಲಿ ಅವ್ಯಕ್ತವಾಗಿ ಮೂಡಿತು. ಕುರೂಪಿಯಾಗಿದ್ದು ಎಲ್ಲಾ ವಿಕಾರತೆಗಳನ್ನು ಶರೀರದಲ್ಲಿ ಹೊಂದಿದ್ದರೂ ಆಶ್ರಯ ಬೇಡಿದ ಬಾಹುಕನಿಗೆ ಕುದುರೆಲಾಯದಲ್ಲಿ ಕೆಲಸ ನೀಡಿದನು. ಸುಲಭದಲ್ಲಿ ಅನ್ಯರ ಮುಂದೆ ಕೈಯೊಡ್ಡಿ ಬೇಡಿ ತಿನ್ನಲು ಬೇಕಾದ ಸರ್ವ ವೈಕಲ್ಯಗಳೂ ತನ್ನ ಶರೀರದಲ್ಲಿದ್ದರೂ, ಸ್ವಾಭಿಮಾನಿ ನಳ ಚಕ್ರವರ್ತಿ ಇಂತಹ ಕಠಿಣ ಸ್ಥಿತಿಯಲ್ಲಿಯೂ ತನ್ನ ಉದರಪೋಷಣೆಗೆ ದುಡಿದು ಸಂಪಾದಿಸಿಕೊಳ್ಳುವ ಮನಸ್ಸು ಮಾಡಿದ್ದು ಯೋಗ್ಯತೆಯನ್ನು ಬಿಂಬಿಸುತ್ತದೆ.
ಇತ್ತ ವಿದರ್ಭ ದೇಶದ ದೊರೆ ಭೀಷ್ಮಕ ಮಹಾರಾಜನಿಗೆ ತನ್ನ ಮಗಳು ದಮಯಂತಿ ಸಿಕ್ಕಿದರೂ ಅಳಿಯ ನಳ ಚಕ್ರವರ್ತಿ ಕಾಣದಾಗಿದ್ದಾನೆ. ಸರ್ವ ಯತ್ನಗಳೂ ವ್ಯರ್ಥವಾಗುತ್ತಿದ್ದರೂ ಛಲ ಬಿಡದೆ ಮತ್ತೂ ಹುಡುಕಿಸುತ್ತಾ ಇದ್ದಾನೆ. ದಮಯಂತಿ ಯೋಚಿಸಿ, ಜಾಣನೂ, ನಿಷ್ಠಾವಂತ ಆಪ್ತ ಸೇವಕನೂ ಆದ ‘ಪರ್ಣಾದ’ ಎಂಬವನನ್ನು ಕರೆದು ಹೇಳಬೇಕಾದುದನ್ನು ಹೇಳಿ ಸುತ್ತು ಮುತ್ತಲ ರಾಜ್ಯಗಳಿಗೆ ಕಳುಹಿಸಿದಳು.
ಹಾಗೆಯೇ ಪರ್ಣಾದ ಎಲ್ಲಾ ರಾಜ್ಯಗಳನ್ನು ಸಂಚರಿಸುತ್ತಾ ಆಯೋಧ್ಯೆಗೂ ಬಂದನು. ರಾಜಬೀದಿಗಳಲ್ಲಿ ಹುಚ್ಚನಂತೆ ನಟಿಸುತ್ತಾ ಹೆಂಡತಿಗೆ ಗಂಡ ಬೇಕು, ಆದರೆ ಗಂಡನಿಗೆ ಅವಳ ಸೀರೆಯ ತುಂಡು ಮಾತ್ರ ಸಾಕು ಕಂಡವರುಂಟೇ? ಕೇಳಿದವರುಂಟೇ? ಉಂಟೇ ಉಂಟೇ ? ಎಂದು ಹೇಳುತ್ತಾ, ಕೇಳುತ್ತಾ, ನಗುತ್ತಾ ಸಾಗುತ್ತಿದ್ದ. ಹೀಗೆಯೇ ಪುನರಾವರ್ತಿಸಿ ಹುಚ್ಚನಂತೆ ನಗುತ್ತಾ ಸಾಗುತ್ತಿದ್ದ ಪರ್ಣಾದ ಮಾತ್ರ ಸೂಕ್ಷ್ಮಮತಿಯಾಗಿ ಜನರ ಪ್ರತಿಕ್ರಿಯೆ, ಸ್ಪಂದನೆ, ಪ್ರತ್ಯುತ್ತರಗಳನ್ನೂ ಗಮನಿಸುತ್ತಲೇ ಇದ್ದ. ಬಾಹುಕನೂ ಈತನ ಮಾತುಗಳನ್ನು ಕೇಳಿದಾಗ ” ಉಂಟೇ ಉಂಟು. ಜೂಜುಗಾರನನ್ನು ಕಂಡು ಕೋ.. ಆತನಿಗೂ ಹೆಂಡತಿಯುಂಟು. ಹೆಂಡತಿ ಅವನಿಗೂ ಬೇಕು ” ಎಂದು ಒಗಟಾಗಿಯೇ ಹೇಳಿಕೊಂಡನು. ಉತ್ತರ ನೀಡಿದ ವ್ಯಕ್ತಿಯನ್ನು ಪರ್ಣಾದ ಸೂಕ್ಷ್ಮವಾಗಿ ಗಮನಿಸಿದ. ಗುರುತು ಹಿಡಿಯುವ ಪ್ರಯತ್ನವೂ ಮಾಡಿಕೊಂಡ. ನೇರವಾಗಿ ಬಂದು ದಮಯಂತಿಗೆ ವಿಚಾರ ಅರುಹಿದ.
ದಮಯಂತಿ ಉತ್ತರವನ್ನು ವಿಮರ್ಶಿಸಿಕೊಂಡಳು. ತನ್ನ ತಾಯಿಯಲ್ಲಿ ಈ ವಿಚಾರವಾಗಿ ಚರ್ಚಿಸಿದಳು. ಬಳಿಕ ಅಪ್ಪನೂ, ರಾಜನೂ ಆಗಿರುವ ಭೀಷ್ಮಕನಲ್ಲೂ ತನ್ನ ಯೋಚನೆಯನ್ನು ವಿವರಿಸಿ ಹೇಳಿಕೊಂಡಳು. ಪರಿಣಾಮ ಯೋಜನೆಯೊಂದು ಸಿದ್ಧವಾಯಿತು. ಅದರಂತೆ ಮೊದಲ ನಡೆಯಾಗಿ ನೆರೆ ರಾಷ್ಟ್ರಗಳಿಗೆಲ್ಲಾ ಕ್ಲಪ್ತ ಸಮಯದಲ್ಲಿ ಓಲೆ ರವಾನೆಯಾಯಿತು. ಆದರೆ ಅಯೋಧ್ಯೆಗೆ ಕೇವಲ ಒಂದು ದಿನದ ಅಂತರದಲ್ಲಿ ಓಲೆ ಕಳುಹಿಸಿ ತಲುಪಿಸಿದರು. ಓಲೆಯ ವಿಚಾರ ಏನೆಂದರೆ ” ನಳ ಚಕ್ರವರ್ತಿಯ ಪತ್ನಿ ದಮಯಂತಿ ಗಂಡನನ್ನು ಕಳಕೊಂಡು ಬಹುಕಾಲವಾಗಿದೆ. ಆಕೆಗೆ ಸಂಸಾರ ಜೀವನದ ಬಯಕೆಯಾಗಿದ್ದು ಸಮರ್ಥ ಪತಿಯ ಆಯ್ಕೆಗಾಗಿ ಸ್ವಯಂವರ ರಚಿಸಲ್ಪಟ್ಟಿದೆ. ನಿಮಗೂ ಆತ್ಮೀಯ ಆಮಂತ್ರಣ”
ಎಲ್ಲ ದೇಶಗಳಿಗೆ ಆಮಂತ್ರಣ ತಲುಪಿ ಅವರು ವಿದರ್ಭಾ ದೇಶದತ್ತ ಪಯಣಿಸಿ ತಲುಪಿದರು. ತಡವಾಗಿ ತಲುಪಿಸುವ ಉದ್ದೇಶವಿದ್ದ ಅಯೋಧ್ಯೆಗೆ ಓಲೆಯ ದೂತ ಕೇವಲ ಒಂದು ದಿನದ ಅಂತರದಲ್ಲಿ ಬಂದು ತಲುಪಿದನು. ಓಲೆಯನ್ನು ರಾಜಾ ಋತುಪರ್ಣನ ಕೈಗಿತ್ತಾಗ ಓದಿ ವಿಚಾರ ತಿಳಿದು ವಿಪರೀತ ಸಿಟ್ಟು ಬಂತು. ಮಾತೆ ದಮಯಂತಿ ನಮ್ಮ ಚಕ್ರವರ್ತಿಗಳಾದ ನಳ ಭೂಪತಿಯವರ ವಲ್ಲಭೆ. ಏನೋ ಆಗಬಾರದ್ದು ಆಗಿ ಪತಿ ಪತ್ನಿ ಪ್ರತ್ಯೇಕರಾಗಿ ಹೋಗಿರುವುದು ನಿಜವಾದರೂ ಆಕಸ್ಮಿಕ. ಸಾಮ್ರಾಜ್ಞಿಯನ್ನು ಮಾತೃ ಸ್ಥಾನದಲ್ಲಿ ಕಂಡವರು ನಾವು. ಪತಿವೃತೆಯೆಂದು ಅವರನ್ನು ಆರಾಧಿಸುತ್ತಿದ್ದ ಸಾಮ್ರಾಜ್ಯದ ಅಧಿರಾಜರು, ಸಾಮಂತರೆಲ್ಲಾ ಇಂದು ಆಕೆಯ ಕರಗ್ರಹಣಕ್ಕೆ ಮುಂದಾಗುವುದೆ? ಎಂತಹ ಅನರ್ಥ ಸಾಗುತ್ತಿದೆ. ತಡೆಯಬೇಕು, ಬಂದವರನ್ನು ಬಡಿದೋಡಿಸಬೇಕು. ನಮ್ಮ ಆದರ್ಶ ಚರಿತ್ರಾವಂತ ನಳ ಚಕ್ರವರ್ತಿ ಮರಳಿ ಬಂದೇ ಬರಬಹುದು. ಹಾಗಾಗಿ ಇದನ್ನು ನಿಲ್ಲಿಸ ಬೇಕು. ಏನು ಮಾಡೋಣ? ಒಂದು ದಿನವೂ ಪೂರ್ತಿ ಇರದ ಈ ಕಿರುಸಮಯದಲ್ಲಿ ವಿದರ್ಭ ದೇಶದ ಕುಂಡಿನಾಪುರ ಸೇರುವ ಬಗೆಯಾದರೂ ಹೇಗೆ. ಈಗಿಂದೀಗಲೆ ನಾನು ಹೊರಟರೂ ಅಲ್ಲಿ ಮುಟ್ಟುವುದರೊಳಗೆ ಸ್ವಯಂವರ ಪಣ ಮುಗಿದು ದಮಯಂತಿ ಯಾರದ್ದೊ ಪಾಲಾಗಿ ಹೋದರೆ? ಇಲ್ಲ ದಮಯಂತಿ ದೇವಿ ಆರೀತಿ ವ್ಯವಹರಿಸಲಾರರು. ಛೇ! ಕಾಲದ ಕೈಗೊಂಬೆಯಾಗಿ ಏನಾದರೂ ಆರೀತಿ ವ್ಯವಹರಿಸಿದರೆ? ಏನು ಮಾಡೋಣ? ಹೇಗೆ ತಡೆಯುವುದು ಎಂಬುವುದಾಗಿ ಪರಿತಪಿಸತೊಡಗಿದನು. ಬಾಹುಕ ಬಂದು “ರಾಜಾ ನನಗೊಂದು ಅವಕಾಶ ನೀಡುವಿರಾ? ಸಾರಥ್ಯದ ಪ್ರಾವಿಣ್ಯತೆ ನನಗಿದೆ. ನಿಮ್ಮನ್ನು ಪಣದ ಮುಹೂರ್ತದ ಒಳಗಾಗಿ ಅಲ್ಲಿಗೆ ಸೇರಿಸುವ ಜವಾಬ್ದಾರಿ ನನ್ನದು” ಎಂದು ವಿನಮ್ರನಾಗಿ ಅವಕಾಶ ಕರುಣಿಸಲು ಬೇಡಿಕೊಂಡನು.
ಅನ್ಯ ಮಾರ್ಗವಿಲ್ಲದೆ ರಾಜಾ ಋತುಪರ್ಣನೂ ಒಪ್ಪಿಕೊಂಡನು. ಬಾಹುಕನ ಮಾರ್ಗದರ್ಶನದಂತೆ ರಥವೂ – ಕುದುರೆಗಳೂ ಸಿದ್ದವಾಗಿ ಹೊರಟು ನಿಂತಿತು.
ಮುಂದುವರಿಯುವುದು…






















































