27.7 C
Udupi
Friday, April 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 199

ಭರತೇಶ್ ಶೆಟ್ಟಿ ,ಎಕ್ಕಾರ್

“ಮಾತೆ, ನಾನು ಧರ್ಮಜ್ಞನೆಂದು ಅಹಂಕಾರ ಭಾವ ತಳೆದು ಈ ರೀತಿ ಉತ್ತರಿಸುತ್ತಿಲ್ಲ. ಆದರೆ ಯಾವುದು ಅಧರ್ಮವೆಂದು ತಿಳಿದಿದೆಯೊ, ಅದನ್ನು ಖಂಡಿತವಾಗಿಯೂ ಮಾಡಲಾಗದು. ಹಾಗೆಯೆ ಯಾವುದು ಧರ್ಮಯುಕ್ತವೆಂದು ತಿಳಿದಿದೆಯೋ ಅದನ್ನು ಮಾಡದೇ ಬಿಡಲೂ ಆಗದು. ಈಗ ಪುಣ್ಯದ ಕಿರುಪಾಲನ್ನು ನಷ್ಟಗೊಳಿಸಿಯಾದರೂ ನೀವು ಹೇಳಿದಂತೆ ನಡೆದು ಸ್ವರ್ಗದ ಸುಖ ಭೋಗ ಅನುಭವಿಸು ಎಂಬ ಸಲಹೆ ನನಗೆ ಅಧರ್ಮವಾಗಿಯೆ ಪರಿಗಣಿತವಾಗಿದೆ. ಪುಣ್ಯದ ಅತುಲ ಸಂಚಯವಿದೆಯೆಂದು ಅಧರ್ಮಕ್ಕೆ ತೊಡಗುವುದು ಸಮ್ಮತವಲ್ಲ” ಎಂದು ನುಡಿದನು ಪಾರ್ಥ.

ಊರ್ವಶಿಗೆ ಅರ್ಜುನನ ನಿಲುವಿನಿಂದ ನಿರಾಸೆಯೆ ಆಯಿತಾದರೂ, ಹಠಕ್ಕೆ ಬಿದ್ದು ಒಪ್ಪಿಸುವ ಪ್ರಯತ್ನಕ್ಕೆ ಮುಂದಾದಳು. ಈ ಅರ್ಜುನನ ಶಯನಾಗಾರದ ಹೊರಗೆ ನನ್ನ ಸಖಿಯರು ನಿಂತಿದ್ದಾರೆ. ಬಂದ ಕಾರ್ಯ ಪೂರೈಸದೆ ಹೊರ ಹೋದರೆ – ವಿಚಾರ ಅವರಿಗೆ ತಿಳಿದು ನಾಳೆ ರಂಭಾದಿ ಅಪ್ಸರಾಂಗನೆಯರು ನನ್ನ ಬಗ್ಗೆ ಏನು ಹೇಳಿಯಾರು? ಆ ಅಪಮಾನ ಹೇಗೆ ಸಹಿಸಲಿ? ಈಗ ನನಗೆ ಪ್ರತಿಷ್ಠೆಯ ಪಣವಾಗಿ ಈ ಪ್ರಕರಣ ಬೆಳೆದು ಬಿಟ್ಟಿದೆ. ಜಿತೇಂದ್ರಿಯನಂತೆ ವರ್ತಿಸುವ ಈ ಅರ್ಜುನನ ನಿಯಂತ್ರಣವನ್ನು ಮುರಿದು ನನ್ನ ದಾರಿಗೆ ತರಬೇಕೆಂದು ನಿರ್ಣಯಿಸಿ ಆತುರಕ್ಕೊಳಗಾದಳು.

ಆತುರಗಾರನಿಗೆ ಬುದ್ದಿ ಎಷ್ಟು ಸ್ಥಿತವಾಗಿ ಉಳಿದೀತು ಹೇಳಿ? ಇಲ್ಲಿ ಊರ್ವಶಿಯ ನಡೆಯೂ ಹಾಗೆಯೆ ಆಯಿತು. ಏನಾದರು ಮಾಡಿ ಒಲಿಸಿಕೊಳ್ಳಲೆ ಬೇಕು ಎಂಬಂತಾಗಿ ಅರ್ಜುನನ ಮೇಲೆ ಮುಗಿ ಬೀಳುವಂತಹ ಪರಿಸ್ಥಿತಿ ಆಕೆಯದ್ದಾಯಿತು.

“ಅರ್ಜುನಾ, ಧರ್ಮ ಸಮ್ಮತವಾಗಿ ನಿನ್ನ ದಾರಿಯಲ್ಲಿ ಬಂದು ಬೇಡುತ್ತೇನೆ. ನನ್ನ ಈಗಿನ ಆಸೆಗಳಿಗೆ ನೀನು ಕಾರಣ. ನಿನ್ನ ಅಸದಳವಾದ ಸಾಧನೆಯಿಂದ ಸ್ವರ್ಗವನ್ನೇರಿ ಬಂದು ಸನ್ಮಾನಿತನಾದೆ. ನೀನು ಕೇಂದ್ರ ಬಿಂದುವಾಗಿ ನಮ್ಮ ಕಲಾ ಪ್ರದರ್ಶನ ನಡೆದಾಗ, ನನ್ನನ್ನು ನೋಡುತ್ತಾ, ನನ್ನ ಅಂಗಾಂಗಗಳನ್ನೆಲ್ಲಾ ಅಸ್ವಾದಿಸುತ್ತಾ ಮನರಂಜನೆ ಪಡೆದಿರುವೆ. ನಿನ್ನ ಪ್ರತಿಕ್ರಿಯೆಯಿಂದ ನನಗೂ ಪ್ರೇಮಾಂಕುರವಾಯಿತು. ಪೂರಕವಾಗಿ ದೇವರಾಜನಿಂದ ನಿನ್ನ ಸೇವೆಗೆ ನಾನು ನಿಯೋಜಿತಳಾದಾಗ ಮಹದಾಸೆ ಗರಿಗೆದರಿತು. ಈಗ ನಿನ್ನ ತಿರಸ್ಕಾರದಿಂದ ನಾನು ನೊಂದವಳಿದ್ದೇನೆ. ನೀನು ಕ್ಷತ್ರಿಯನೂ, ಧರ್ಮ ಪಾಲಕನೂ ಹೌದು ತಾನೇ? ಗೋ, ಬ್ರಾಹ್ಮಣ, ಸ್ತ್ರೀಯರು ಆರ್ತರಾದರೆ ರಕ್ಷಣೆ ಮಾಡುವುದು ಉಚಿತ ಧರ್ಮ ಹೌದಲ್ಲವೆ? ಈಗ ನಿನ್ನ ಬಳಿ ಹೆಣ್ಣಾಗಿ, ನಿನಗೆ ಸೋತು ಆರ್ತಳಾಗಿ ಬೇಡುತ್ತಿದ್ದೇನೆ. ಒಲಿದು ಬಂದ ಹೆಣ್ಣನ್ನು ತಿರಸ್ಕರಿಸಬಾರದೆಂಬ ಧರ್ಮ ಶಾಸ್ತ್ರವೂ ಇದೆ. ಈ ವರೆಗೆ ನನ್ನ ಬಳಿ ನನಗಾಗಿ ಹಾತೊರೆಯುತ್ತಾ ಬರುವ ಪುರುಷನ್ನು ಕಂಡಿದ್ದೇನೆ ಹೊರತು ನಾನಾಗಿ ಯಾರಲ್ಲೂ ಬೇಡುವ ಪ್ರಸಂಗ ಒದಗಿಲ್ಲ. ನನ್ನ ಸ್ವಾಭಿಮಾನ, ಪ್ರತಿಷ್ಠೆ ಎಲ್ಲವನ್ನೂ ಮೀರಿದ ಯಾಚನೆ ನಿನ್ನ ಮುಂದಿಡುತ್ತಿದ್ದೇನೆ. ಧರ್ಮ ಪಾಲನೆಯ ದಾರಿಯಲ್ಲಿ ಕ್ರಮಿಸಿ ಆರ್ತಳೂ, ದೀನಳೂ ಆದ, ಒಲಿದು ಬಂದ ಸ್ತ್ರೀಯಾಗಿ ನನ್ನನ್ನು ಸ್ವೀಕರಿಸಬೇಕು” ಎಂದು ದಯನೀಯ ಭಾವದಿಂದ ಶರಣಾರ್ಥಿಯಾಗಿ ಬೇಡಿಕೊಂಡಳು.

ಅರ್ಜುನನಿಗೆ ಈಗ ಅಸಹಾಯಕ ಪರಿಸ್ಥಿತಿ. “ಅಯ್ಯೋ ಇವಳ ಬುದ್ದಿಯೇ?” ಎಂಬ ಭಾವದಿಂದ ಜಿಗುಪ್ಸೆ ಉತ್ಪತ್ತಿಯಾಯಿತು. ಆದರೂ ತಾನು ವಿನಯಭಾವ ತ್ಯಜಿಸಬಾರದೆಂದು ನಿಶ್ಚಯಿಸಿ “ಅಮ್ಮಾ.. ಈ ಹೊತ್ತಿನಲ್ಲಿ ನಾನು ಯಾವ ಸ್ತ್ರೀಯನ್ನೂ ಬಯಸುವುದಾಗಲಿ, ಸ್ವೀಕರಿಸುವುದಾಗಲಿ ಮಾಡಲಾಗದು. ಮಾತೆ, ನಿನ್ನ ಘನತೆ – ಗೌರವಗಳಿಗೆ ಅನುಗುಣವಾದ ಸ್ವಾಭಿಮಾನ ನಿನಗಿರಬೇಕು. ಅದನ್ನು ನೀನು ನನಗಾಗಲಿ ಅಥವಾ ಇನ್ಯಾರಿಗಾಗಲಿ ತೊರೆಯಕೂಡದು. ಶೃಂಗಾರ – ಭೋಗ ವೃತ್ತಿಧರ್ಮದಿಂದ ನಿನಗೆ ಭೂಷಣವೆ ಸರಿ. ಹಾಗೆಂದು ಇಲ್ಲಿ ಅದು ನಿರರ್ಥಕವಾಯಿತೆಂಬ ಹಾಗೆ ತಿಳಿಯಬಾರದು. ತಾಯಿ ಮಗನನ್ನು ಕಾಣಲೋ, ಇಲ್ಲ ಮುತ್ತಜ್ಜಿ ಮರಿ ಮೊಮ್ಮಗನನ್ನು ಕಾಣಲೋ ಉಲ್ಲಾಸದಿಂದ ಬಂದು ಕಾಣಬಹುದಲ್ಲವೇ? ನೀವು ಆ ಎರಡೂ ಸ್ಥಾನಗಳಿಂದಲೂ ನನಗೆ ಪೂಜನೀಯರು ಆಗಿರುವ ಕಾರಣ ಇಲ್ಲಿ ಯಾರ ಗೌರವಕ್ಕೂ ಭಂಗವುಂಟಾಗದು. ನಾಳೆ ಲೋಕವೂ ಈ ವ್ಯವಹಾರವನ್ನು ಮೆಚ್ಚುತ್ತಾರೆಯೆ ಹೊರತು ದೂಷಿಸಲಾರರು. ಮಹಾ ಮಾತೆ, ನಿಮ್ಮ ವಂಶಜನಾದ ನನ್ನಿಂದ ಮುಂದಣ ಭವಿಷ್ಯದಲ್ಲಾಗಬೇಕಾಗಿರುವ ಬಹುವಿಧ ಕಾರ್ಯಗಳು ಯಶಸ್ವಿಯಾಗಲಿ ಎಂದು ಹರಸಿ ಆಶಿರ್ವದಿಸಬೇಕು” ಎಂದು ಪಾದಪದ್ಮಗಳಿಗೆರಗಿದನು.

ಊರ್ವಶಿ ಹರಸಿ ಆಶೀರ್ವದಿಸುವ ಭಾವನೆ ಹೊಂದಿದ್ದಾಳೆಯೆ ಈಗ? ಉರಿದು ಬಿಸಿಯಾಗಿದೆ ತನು ಮನ. ಬಯಸದೆ ಇದ್ದರೂ ದೇವರಾಜನ ಅಪ್ಪಣೆಯೆಂದು ಮಹಾ ಉಗ್ರ ತಪಸ್ವಿಗಳ ಮನಸ್ಸನ್ನು ವಿಚಲಿತ ಗೊಳಿಸಿದ ನನಗೆ ಹೀನಾಯ‌ ಸೋಲೆ? ನಾಳೆಯ ದಿನ ದೇವರಾಜನೋ, ಇಲ್ಲ ಚಿತ್ರ ಸೇನನೊ ಅರ್ಜುನನೊಂದಿಗೆ ಕಳೆದ ಸಮಯ ಹೇಗಿತ್ತು ಎಂದರೆ ಏನೆಂದು ಉತ್ತರಿಸಲಿ? ರಂಭಾದಿ ಸಹಸ್ಪರ್ಧಿಗಳು ಓರ್ವ ಮಾನವನೆದುರು ಸೋತ ಊರ್ವಶಿ ಎಂದು ಹಂಗಿಸಿದರೆ ತಾಳಿಕೊಳ್ಳಲಾದೀತೆ? ಇವಳ ಸಾಮರ್ಥ್ಯ ಇಷ್ಟೆಯಾ ಎಂದು ಉಳಿದವರು ಅವರವರೊಳಗೆ ಮಾತನಾಡಿಕೊಂಡರೆ ಎಂತಹ ಘೋರ ಅಪಮಾನ ಎನಗಾದೀತು? ಊರ್ವಶಿಯ ಬದುಕಿನ ಸಾಧನಗೋಪುರವನ್ನು ಬುಡದಿಂದಲೆ ಕುಸಿಯುವಂತೆ ಮಾಡಿದನಲ್ಲಾ ಈ ಮಾನವ! ರೂಪ ಗುಣಾತಿಶಯಗಳ ಸಾಕಾರಮೂರ್ತಿ ಎಂಬ ನೆಗಳ್ತೆ, ತ್ರಿಲೋಕ‌ಸುಂದರಿ, ಚಿತ್ತ ಚಾಂಚಲ್ಯಗೊಳಿಸುವ ಮೋಡಿಗಾತಿ ಎಂಬ ಬಿರುದುಗಳಿಗಿನ್ನು ಬೆಲೆ ಉಳಿದೀತೆ? ಹೀಗೆ ನಿಂತಲ್ಲಿ ಸ್ಥಂಭೀಭೂತಳಾಗಿ ಗ್ರಹಿಸುತ್ತಾ ಇದ್ದಳು. ಒಮ್ಮೆಲೆ ನಡುಗಿತು ಕೋಮಲೆಯ ಕಾಯ. ಪ್ರಣಯಭಂಗದಿಂದ ಉತ್ಪನ್ನವಾದ ಕ್ರೋಧಾಗ್ನಿಯಿಂದ ಸೇಡಿನ ಉರಿಯಾಗಿ – ಜ್ವಾಲೆಯಾಗಿ ಪರಿವರ್ತಿತವಾಯಿತು. ವಿನೀತಭಾವದಿಂದ ನಿಂತಿದ್ದ ಅರ್ಜುನನತ್ತ ದುರುಗುಟ್ಟಿ ನೋಡಿ “ಎಲಾ ಅರ್ಜುನಾ! ಕೊನೆಗೂ ನಿನ್ನ ಹಠವನ್ನೇ ಸಾಧಿಸಿದೆ. ತಾನಾಗಿ ನಿನ್ನ ಬಳಿ ಸರ್ವಾಲಂಕೃತಳಾಗಿ ಕನಸಿನ ಸೌಧ ಕಟ್ಟುತ್ತಾ, ನವವಧುವಿನಂದದಿ ಭಾಗ್ಯದೇವತೆಯಾಗಿ ಬಂದರೆ ಕಡೆಗಣಿಸಿದೆಯಾ? ಛೀ.. ಥೂ.. ನಿನ್ನ ಷಂಡತನಕ್ಕೆ. ಗಂಡೆಂದು ನಿನ್ನ ಅವ್ವೆ ನಿನ್ನನ್ನು ಹಡೆದಳೇ? ಗಂಡಸು ಎಂದು ಪತ್ನಿಯರು ನಿನ್ನನ್ನು ಗಂಡನಾಗಿ ವರಿಸಿದರೇ? ನಿಜವಾಗಿಯೂ ನೀನೋರ್ವ ಪುರುಷನೇ? ಪೌರುಷ ವೀರ್ಯ ನಿನ್ನಲಿದೆಯೇ? ಖಂಡಿತಾ ಸಾಧ್ಯವಿಲ್ಲ. ನೀನೊಬ್ಬ ಗಂಡು ರೂಪದ ಹೆಣ್ಣು. ಅತ್ತ ಗಂಡೂ ಅಲ್ಲ ಇತ್ತ ಹೆಣ್ಣೂ ಅಲ್ಲದ ಷಂಡ ಹೌದೆಂಬಂತೆ ಕಾಣುತ್ತಿರುವೆ. ನನ್ನಂತಹ ಅತಿ ಚೆಲುವೆಯನ್ನು ಒಲ್ಲದ ನೀನು ನಪುಂಸಕ ಹೆಣ್ಣಿಗನಂತೆ ವರ್ತಿಸಿರುವೆ. ಇನ್ನು ನೀನು ನಪುಂಸಕತ್ವದಿಂದ ಷಂಡನಾಗಿ ಹೋಗು” ಎಂದು ಶಪಿಸಿ ಅರೆ ಕ್ಷಣವೂ ಅಲ್ಲಿ ನಿಲ್ಲದೆ ಬುಸುಗುಟ್ಟುತ್ತಾ ಊರ್ವಶಿ ಹೊರಟು ಹೋದಳು.

ಏನಿದು ದುರ್ವಿಧಿ? ಸ್ವರ್ಗ ಸುಖದ ತಾಣವಾದರೂ ನಾನಿಲ್ಲಿ ಪರೀಕ್ಷೆಗೆ ಒಳಗಾದಂತೆ ಆಗಿಬಿಟ್ಟೆ. ಭಗವಂತ ಎಲ್ಲವೂ ನಿನ್ನ ಇಚ್ಚೆಯಂತೆಯೆ ನಡೆಯುವುದಲ್ಲವೆ? ಇದೂ ಹಾಗೆಯೆ ಆಯಿತು ಎಂದು ತಿಳಿಯುವೆ ಎಂದು ತನ್ನನ್ನು ತಾನು ಸಂತೈಸಿ ಕೊಂಡನು.

ಅರ್ಜುನ ಊರ್ವಶಿಯಿಂದ ಶಾಪಗ್ರಸ್ಥನಾದ ವಿಚಾರ ಇಂದ್ರನಿಗೆ ತಿಳಿದು ಅರ್ಜುನನಿದ್ದಲ್ಲಿಗೆ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page