
ಬೆಂಗಳೂರು 2026-27ನೇ ಶೈಕ್ಷಣಿಕ ಸಾಲಿನಿಂದ ಜೂನ್ 1ಕ್ಕೆ ಆರು ವರ್ಷ ತುಂಬಿರುವ ಮಕ್ಕಳನ್ನು ಮಾತ್ರ 1ನೇ ತರಗತಿಗೆ ಸೇರಿಸಿಕೊಳ್ಳಲು ಅವಕಾಶವಿದ್ದು ಹೀಗಾಗಿ 2025-26ನೇ ಶೈಕ್ಷಣಿಕ ವರ್ಷದಿಂದ LKG ದಾಖಲಾತಿಗೆ ನಾಲ್ಕು ವರ್ಷ ಮತ್ತು UKG ದಾಖಲಾತಿಗೆ ಐದು ವರ್ಷ ತುಂಬುವುದು ಕಡ್ಡಾಯವಾಗಿದೆ ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
2023-24 ರಿಂದಲೇ ರಾಜ್ಯದಲ್ಲಿ LKG ಗೆ ಸೇರ್ಪಡೆ ಮಾಡಲು ನಾಲ್ಕು ವರ್ಷ ತುಂಬಿರಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಹಲವು ಶಾಲೆಗಳು ಇದನ್ನು ಪಾಲಿಸದೆ ಇದ್ದಿದ್ದರಿಂದ ಹಲವು ಪೋಷಕರು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿ ಈ ವರ್ಷದಿಂದ ಜಾರಿಯಾಗಬೇಕಿದ್ದ ಒಂದನೇ ತರಗತಿ ಸೇರ್ಪಡೆಗೆ ಜೂನ್ ಒಂದಕ್ಕೆ ಆರು ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸಡಿಲ ಮಾಡುವಲ್ಲಿ ಯಶಸ್ವಿಯಾದರು.
ಆದರೆ ಕೆಲವು ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್ 1ಕ್ಕೆ ನಾಲ್ಕು ವರ್ಷ ತುಂಬಿರದಿದ್ದರೂ ಮಕ್ಕಳನ್ನು ಎಲ್ಕೆಜಿಗೆ ದಾಖಲಿಸಿಕೊಳ್ಳುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಕ್ಕಳ ದಾಖಲಾತಿಗೆ ವಯೋಮಿತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.













