ಹಿಂದಿ ಗಾಯಕ ಸೋನು ನಿಗಮ್ ಕ್ಷಮೆ ಕೋರಿ ಪೋಸ್ಟ್

ಬೆಂಗಳೂರು: ಗಾಯಕ ಸೋನು ನಿಗಮ್ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡುತ್ತಿರುವ ವೇಳೆ ಕನ್ನಡ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ್ದು ಈ ಘಟನೆಗೆ ಬಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಸೋನು ನಿಗಮ್ ಕೊನೆಗೂ ಕನ್ನಡಿಗರ ಮುಂದೆ ‘ಕ್ಷಮಿಸಿ ಕನ್ನಡಿಗರೇ, ನಿಮ್ಮ ಮೇಲಿನ ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಂಚಿಕೊಂಡಿದ್ದಾರೆ.
ಕಾಲೇಜ್ ನಲ್ಲಿ ನಡೆದ ಈ ಘಟನೆ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ್ದು ಆದರೂ ಸೋನು ನಿಗಮ್ ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಗೂಂಡಾಗಳು ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಈ ಮೂಲಕ ದುರ್ವರ್ತನೆ ತೋರಿಸಿದ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗದಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಭೆ ನಡೆಸಿ, ಅವರ ವಿರುದ್ಧ ಅಸಹಕಾರ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲಿಯೇ ಇದೀಗ ಸೋನು ನಿಗಮ್ ಕನ್ನಡಿಗರ ಮುಂದೆ ಕ್ಷಮೆ ಯಾಚಿಸಿದ್ದಾರೆ.













