ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕದಲ್ಲಿ ನಾವು ಕೇವಲ ಜಾತಿ ಗಣತಿ ನಡೆಸದೇ ಅದರ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ನಡೆಸಿದ್ದೇವೆ. ಈ ದತ್ತಾಂಶಗಳ ಆಧಾರದಲ್ಲಿ ಈಗಿನ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಅದರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಜಾತಿ ಗಣತಿಯ ಜೊತೆಯಲ್ಲಿ ಈ ಪ್ರಕ್ರಿಯೆಯನ್ನು ಕೂಡಾ ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.
ಜಾತಿ ಗಣತಿ ಜೊತೆಯಲ್ಲಿ ಮೀಸಲಾತಿ ಮಿತಿ ಏರಿಕೆಯ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸಿ ಅದನ್ನು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರೂಪಿಸಿ ದೇಶಾದ್ಯಂತ ಪ್ರಚಾರ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರ ಅವಿರತ ಪ್ರಯತ್ನದ ಒತ್ತಡದಿಂದಾಗಿಯೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನುವುದನ್ನು ಅವರು ಒಪ್ಪಿಕೊಳ್ಳದೇ ಇರಬಹುದು, ಆದರೆ ದೇಶ ಖಂಡಿತಾ ಒಪ್ಪುತ್ತದೆ ಎಂದು ಹೇಳಿದರು.





