ಭರತೇಶ್ ಶೆಟ್ಟಿ ಎಕ್ಕಾರ್
ಭಾಗ 176

ಸಂಚಿಕೆ ೧೭೭ ಮಹಾಭಾರತ
ಪಾಂಡವರು ವನವಾಸಕ್ಕೆ ಹೊರಟಾಗ ಪ್ರಜಾವರ್ಗ ಕಣ್ಣೀರಧಾರೆ ಸುರಿಸತೊಡಗಿದರು. ಒಬ್ಬೊಬ್ಬರು ಒಬ್ಬೊಬ್ಬರನ್ನು ಆರೋಪಿಗಳಾಗಿ ಕಂಡು ಕೆಲವರು ದುರ್ಯೋಧನನಿಗೆ, ದುಶ್ಯಾಸನನಿಗೆ, ಉಳಿದವರು ಶಕುನಿ, ಕರ್ಣನಿಗೆ ಮನಬಂದಂತೆ ಬೈದು ಶಪಿಸತೊಡಗಿದರು. ಪಾಂಡವರ ಸಜ್ಜನಿಕೆಯನ್ನು ಕಂಡು ಹರಸಿ ಪ್ರಾರ್ಥಿಸತೊಡಗಿದರು.
ಪಾಂಡವರು ರಾಜಗೋಪುರ ದಾಟಿ ರಾಜಬೀದಿಯಲ್ಲಿ ಸಾಗುತ್ತಿದ್ದಾರೆ. ದ್ರೌಪದಿ, ಕುಂತಿ, ಅಭಿಮನ್ಯು, ಸುಭದ್ರೆ ಹೀಗೆ ಪರಿವಾರ ಸಮೇತರಾಗಿ ಹೋಗುತ್ತಿದ್ದಾರೆ. ಪ್ರಜಾಜನರೂ ಮೆರವಣಿಗೆಯಂತೆ ಇವರನ್ನೇ ನೆಚ್ಚಿ ಹಿಂಬಾಲಿಸಿ ಹೋಗ ತೊಡಗಿದ್ದಾರೆ. ಪಾಂಡವ ಪುರೋಹಿತರೂ ಆಗಿರುವ ಧೌಮ್ಯರು ಧರ್ಮರಾಯನ ಜೊತೆ ಹೆಜ್ಜೆ ಹಾಕಿ ಧರ್ಮ ಜಿಜ್ಞಾಸೆ ನಿರತರಾಗಿ ಸಾಗುತ್ತಿದ್ದಾರೆ. ಧೌಮ್ಯರ ಜೊತೆ ಅವರ ಅರುವತ್ತು ಸಾವಿರ ಶಿಷ್ಯರೂ ಪಯಣಿಗರಾಗಿ ಹಿಂಬಾಲಿಸುತ್ತಿದ್ದಾರೆ. ವಿದುರಾದಿ ಪ್ರಮುಖರೂ ಬೀಳ್ಗೊಡಲೋಸುಗ ಜೊತೆಯಾಗಿ ಮರುಗುತ್ತಾ ಭವಿಷ್ಯವನ್ನು ಚಿಂತನೆ ಮಾಡಿ ಜಾಗೃತೆಯ ನುಡಿಗಳನ್ನಾಡುತ್ತಾ ಮುನ್ನಡೆಯುತ್ತಿದ್ದಾರೆ. ಆದರೆ ಪ್ರಜಾ ಪರಿವಾರ ಮಾತ್ರ ಹಸುವಿನ ಬೆಂಬತ್ತುವ ಕರುವಿನಂತೆ ಬರುತ್ತಿದೆ. ಹಿಂದಿರುಗುವ ಸೂಚನೆ ಕಾಣುತ್ತಿಲ್ಲ.
ಹೀಗೆ ಪಾಂಡವರ ವನವಾಸಗಮನ ಮಹಾನದಿಯು ಹರಿಯುವಂತೆ ಸಾಗುತ್ತಾ ಓಘವತೀ ನದಿ ತೀರ ತಲುಪಿತು. ನಿರಂತರ ನಡೆದು ಸುಸ್ತಾಗಿದ್ದ ಮಾತೆ ಕುಂತಿ ಬಳಲಿಕೆಯಿಂದ ನಿಸ್ತೇಜಳಾಗಿ ಬಿದ್ದಳು. ಗಾಬರಿಗೊಂಡ ಪಾಂಡವರು ಆರೈಕೆ ಮಾಡತೊಡಗಿದರು. ಭೀಮ ಓಡಿ ಹೋಗಿ ನದಿಯಿಂದ ನೀರು ತಂದರೆ, ಧರ್ಮರಾಯ ಮುಖಕ್ಕೆ ನೀರು ಚಿಮುಕಿಸಿ ಒರೆಸಿದನು. ಅರ್ಜುನ ಗಾಳಿ ಬೀಸುತ್ತಿದ್ದಾನೆ. ನಕುಲ ಸಹದೇವರು ಕೈ ಕಾಲು ಒತ್ತುತ್ತಿದ್ದಾರೆ. ಹೀಗೆ ಎಲ್ಲರ ಆರೈಕೆಯಿಂದ ಕುಂತಿ ಚೇತರಿಸಿಕೊಂಡಳು. ಅಲ್ಲಿದ್ದವರೆಲ್ಲರಿಗೂ ಆತಂಕ ದೂರವಾಗಿ ಸಮಾಧಾನವಾಯಿತು.
ವಿದುರ ತನ್ನಲ್ಲೇ ತರ್ಕಿಸಿ, ತೀರ್ಮಾನಿಸಿ ಧರ್ಮರಾಯನನ್ನು ಬಳಿ ಕರೆದು ಹೇಳತೊಡಗಿದನು “ಧರ್ಮರಾಯ, ನೀವೀಗ ಕೈಗೊಂಡಿರುವ ಕಾರ್ಯ ಸುದೀರ್ಘ ಕಾಲದ ವ್ಯಾಪ್ತಿ ಹೊಂದಿದೆ. ವಸತಿ, ವಾಹನ, ಪರಿಚಾರಕರ ಸೌಕರ್ಯವಿರದೆ ಅಲೆಮಾರಿಗಳಾಗಿ ಹನ್ನೆರಡು ವರ್ಷ ಕಾನನ ವಾಸ. ವಯೋವೃದ್ಧೆಯಾದ ಕುಂತಿಗೆ ನಿಮ್ಮ ಜೊತೆಯಿದ್ದು ಸಹಕರಿಸಲು ಕಷ್ಟ ಸಾಧ್ಯವಾದೀತು. ಹಾಗಾಗಿ ನನ್ನ ಕೋರಿಕೆಯಂತೆ ನನಗೂ ಮಾತೃ ಸಮಾನಳಾಗುವ ಅತ್ತಿಗೆಯನ್ನು ನನ್ನ ಅರಮನೆಗೆ ಕರೆದೊಯ್ಯಲು ಅನುಮತಿ ನೀಡಿದರೆ, ನಿಮ್ಮ ವನವಾಸ -ಅಜ್ಞಾತವಾಸ ಪೂರೈಸಿ ಬರುವವರೆಗೆ ಸೌಖ್ಯದಿಂದ ಸಲಹುವೆ”
ವಿದುರನ ಅಭಿಪ್ರಾಯ ಸಹಜವೆ ಆದರೂ ಧರ್ಮರಾಯ ತಾಯಿ ಕುಂತಿಯತ್ತ ನೋಡತೊಡಗಿದನು. ಕುಂತಿಗೂ ವಿದುರನ ಮಾತು ಸಾಧುವೆಂದು ಭಾವಿಸಲ್ಪಟ್ಟು ಸಮ್ಮತಿ ನೀಡಿದಳು. ವಿದುರ ಅತಿ ಸಂತೋಷದಿಂದ ಅಣ್ಣ ಪಾಂಡು ಚಕ್ರವರ್ತಿಯ ಸೇವೆಯೆಂದು ಶಿರಸಾವಹಿಸಿ ನಿಮ್ಮನ್ನು ಗೌರವದಿಂದ ಸಲಹುವೆ ಎಂದು ನೋವಿನಲ್ಲೂ ಸ್ಮಿತವದನನಾದನು.
ಕುಂತಿ ತನ್ನ ಒಬ್ಬೊಬ್ಬರೇ ಮಕ್ಕಳನ್ನು ಕರೆದು ಬುದ್ದಿ, ಜಾಗರೂಕತೆ, ಒಗ್ಗಟ್ಟು, ಧರ್ಮಪಾಲನೆ, ಆಚಾರ, ವಿಚಾರ ಇತ್ಯಾದಿ ವಿಷಯಗಳನ್ನು ವಿವರಿಸಿ ಆಶೀರ್ವದಿಸಿದಳು. ಬಳಿಕ ದ್ರೌಪದಿಯನ್ನು ಬಳಿ ಕುಳ್ಳಿರಿಸಿ ಮಾತಿಗಾರಂಭಿಸಿದಳು.
ಮುಂದುವರಿಯುವುದು…





